ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8.58 ಲಕ್ಷ ವಿದ್ಯಾರ್ಥಿಗಳು

By Staff
|
Google Oneindia Kannada News

8.58 lakh students to appear for SSLC from March 30
ಬೆಂಗಳೂರು, ಮಾರ್ಚ್.29: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 30ರಿಂದ ಏಪ್ರಿಲ್ 8ರ ವರೆಗೆ ನಡೆಯಲಿದ್ದು, ಒಟ್ಟು 8,58,391 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಿ. ಕುಮಾರನಾಯಕ್ ಅವರು, ರಾಜ್ಯದಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತ 20 ಸಾವಿರ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 2762 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ಈ ವರ್ಷ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ 4,64,053 ಬಾಲಕರು ಹಾಗೂ 3,94,338 ಬಾಲಕಿಯರಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ 117 ಕೇಂದ್ರಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಲಾಗಿದೆ ಎಂದರು.

ಅಕ್ರಮ ತಡೆಗೆ ಕ್ರಮ: ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಇಲಾಖೆಯು ಸೂಕ್ತ ಕ್ರಮ ಕೈಗೊಂಡಿದ್ದು, 338 ಸೂಕ್ಷ್ಮ ಹಾಗೂ 152 ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ, ಈ ಕೇಂದ್ರಗಳಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಸ್ಥಾನಿಕ ವಿಚಕ್ಷಣ ದಳ ನೇಮಕ ಮಾಡಲಾಗಿದ್ದು, ಸಂಚಾರಿ ಜಾಗೃತ ದಳಗಳೂ ಸೂಕ್ಷ, ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿಗೆ ಪದೇ ಪದೇ ಭೇಟಿ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿ ಜಿಲ್ಲೆಗೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದ್ದು, ಆಯಾ ಜಿಲ್ಲೆಯ ಅಧಿಕಾರಿಗಳ ಸಹಕಾರದೊಂದಿಗೆ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಕ್ರಮ ಕೈಗೊಂಡಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತ ಸುಮಾರು 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲು ಜಿಲ್ಲಾಧಿಕಾರಿಗಳನ್ನು ಕೋರಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನೆರವನ್ನು ಇಲಾಖೆಯು ಕೋರಿದ್ದು, ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೂ ಸಹ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀ ಕುಮಾರ ನಾಯಕ್ ಅವರು ತಿಳಿಸಿದರು.

ಆಸನ ವ್ಯವಸ್ಥೆ: ಈ ಬಾರಿ ಎಲ್ಲ ಪರೀಕ್ಷಾರ್ಥಿಗಳಿಗೆ ಆಸನ ವ್ಯವಸ್ಥೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಬರೆಯುವಂತಹ ಸಂದರ್ಭ ಎದುರಾದರೆ ಆಯಾ ಬಿಇಓಗಳನ್ನೇ ಹೊಣೆಗಾರರನ್ನಾಗಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಅಂಗವಿಕಲ ಪರೀಕ್ಷಾರ್ಥಿಗಳು: ಈ ಬಾರಿ 292ಅಂಧ ವಿದ್ಯಾರ್ಥಿಗಳು, 534 ಕಿವುಡ ಮತ್ತು ಮೂಗ ವಿದ್ಯಾರ್ಥಿಗಳು, 260 ಶ್ರವಣದೋಷವಿರುವ ವಿದ್ಯಾರ್ಥಿಗಳು, 1979 ದೈಹಿಕ ಅಂಗವಿಕಲ ವಿದ್ಯಾರ್ಥಿಗಳು ಹಾಗೂ 206 ಮಂದಿ ಡಿಸ್‌ಲೆಕ್ಸಿಯಾ ಅಥವಾ ಸ್ಪಾಸ್ಟಿಕ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಪ್ರಥಮ ಬಾರಿಗೆ ಡಿಸ್‌ಲೆಕ್ಸಿಯಾ/ ಸ್ಪಾಸ್ಟಿಕ್ಸ್ ವಿದ್ಯಾರ್ಥಿಗಳು ಸರಳ ಕ್ಯಾಲ್ಕುಲೇಟರ್‌ಗಳನ್ನು ಬಳಸಲು ಈ ಬಾರಿ ಅನುಮತಿ ನೀಡಲಾಗಿದೆ. ಜೊತೆಗೆ ಪೋಷಕರ ವೆಚ್ಚದಲ್ಲಿ ಪ್ರಶ್ನೋತ್ತರ ಪತ್ರಿಕೆ ಓದಲು ಒಬ್ಬ ಸಹಾಯಕರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ಸಹಾಯವಾಣಿ ದೂರವಾಣಿ ಸಂಖ್ಯೆಗಳು:
ಭಾರತಿ ಮತ್ತು ಪಾರ್ವತಮ್ಮ, ಆಪ್ತ ಸಹಾಯಕರು- 080-23349434,, ಶೇಷಾಚಲ ಪಂಡಿತ್, ಆಪ್ತ ಸಹಾಯಕರು- 080-23445579, ಗೋವಿಂದೇಗೌಡ, ಹಿರಿಯ ಸಹಾಯಕ ನಿರ್ದೇಶಕರು-080-23349088, ಟಿ.ಟಿ. ಗಿರಿಯಪ್ಪ, ಸಹಾಯಕ ನಿರ್ದೇಶಕರು- 080- 23561271, ರಾಜಲಕ್ಷ್ಮಿ, ಹಿರಿಯ ಸಹಾಯಕ ನಿರ್ದೇಶಕರು- 98457 72455, ರತ್ನಮ್ಮ, ಹಿರಿಯ ಸಹಾಯಕ ನಿರ್ದೇಶಕರು- 9886335932, ಉಷಾ ಎಂ.ಡಿ., ಹಿರಿಯ ಸಹಾಯಕ ನಿರ್ದೇಶಕರು- 98453 50939, ಸೋಮೇಗೌಡ, ಸಹಾಯಕ ನಿರ್ದೇಶಕರು- 94497 21489.

ಮೌಲ್ಯಮಾಪನ: ಮೌಲ್ಯಮಾಪನಕ್ಕೆ ಸುಮಾರು 40,000 ಪ್ರೌಢಶಾಲಾ ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, 200 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X