ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸನಾತನ ಸಂಸ್ಕೃತಿಯಲ್ಲಿ ಸಂಪೂರ್ಣ ಸ್ವಾತಂತ್ರ್ಯ, ಚಿಮೂ

By Staff
|
Google Oneindia Kannada News

ಬೆಂಗಳೂರು, ಫೆ. 26 : ಸನಾತನ ಭಾರತೀಯ ಸಂಸ್ಕೃತಿಯಲ್ಲಿ ವ್ಯಕ್ತಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಹೆಸರಾಂತ ಸಾಹಿತಿ ಡಾ ಎಂ. ಚಿದಾನಂದಮೂರ್ತಿ ಪ್ರತಿಪಾದಿಸಿದರು. ಪತಂಜಲಿ ಯೋಗಾಶ್ರಮ ಟ್ರಸ್ಟ್ ಸಹಯೋಗದೊಂದಿಗೆ ರಾಜ್ಯ ವಾರ್ತಾ ಇಲಾಖೆ ಆಯೋಜಿಸಿದ್ದ ಸಂಸ್ಕೃತಿ ಮತ್ತು ಸ್ವಾತಂತ್ರ್ಯ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬೇರೆ ಸಂಸ್ಕೃತಿಗಳಲ್ಲಿ ಇಂತದೇ ಧರ್ಮಗ್ರಂಥ ಓದಬೇಕು ಇಂತಹ ಸ್ಥಳದಲ್ಲಿಯೇ ಪ್ರಾರ್ಥನೆ ಮಾಡಬೇಕು ಇತರೆ ಧರ್ಮಗಳ ಬಗ್ಗೆ ಇಣುಕು ಹಾಕುವುದೂ ಕೂಡ ಅಪರಾಧ ಎಂಬ ಕಟ್ಟುಪಾಡುಗಳಿವೆ. ಆದರೆ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಪ್ರಜಾಪ್ರಭುತ್ವದಲ್ಲಿರುವಂತೆ ಸಂಸ್ಕೃತಿಯನ್ನೂ ಪ್ರಶ್ನಿಸುವ ಹಕ್ಕೂ ಸೇರಿದಂತೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಅವರು ವಿವರಿಸಿದರು.

ಹಿಂದೂ ಧರ್ಮದ ಆಧಾರ ಸ್ಥಂಭಗಳೆಂದು ಬಣ್ಣಿಸಲಾಗುವ ನಾಲ್ಕೂ ವೇದಗಳು ಎಲ್ಲಾ ಮನುಷ್ಯರೂ ಸಮಾನ ಎಂದೇ ಸಾರುತ್ತದೆ. ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಎಂಬುದನ್ನು ಕಸುಬನ್ನು ಆಧರಿಸಿ ವಿಂಗಡಿಸಲಾಗಿತ್ತೇ ಹೊರತು ಅದು ಜಾತಿ ಆಧಾರಿತ ವರ್ಗೀಕರಣವಾಗಿರಲಿಲ್ಲ. ಊಳಿಗ ಸಂಸ್ಕೃತಿಯ ಶೂದ್ರ ಜ್ಞಾನಾರ್ಜನೆಯಲ್ಲಿ ಆಸಕ್ತಿ ತಾಳಿ ಬ್ರಾಹ್ಮಣನಾಗಲು, ವ್ಯಾಪಾರ ವೃತ್ತಿಯ ವೈಶ್ಯ ಆಡಳಿತದಲ್ಲಿ ಆಸಕ್ತಿ ಬೆಳೆಸಿಕೊಂಡು ಕ್ಷತ್ರೀಯನಾಗಲು, ವೇದಗಳ ಕಾಲದಲ್ಲಿ ಅವಕಾಶವಿತ್ತು. ಕಾಲಚಕ್ರ ಬದಲಾದಂತೆ ಜಾತಿ ವ್ಯವಸ್ಥೆ ಬಲಗೊಂಡು ಮಾನವೀಯತೆ ಕ್ಷೀಣಿಸುತ್ತಾ ಭಾರತೀಯ ಸಂಸ್ಕೃತಿಯೂ ಕೂಡ ದುರ್ಬಲವಾಯಿತು ಎಂದು ಅವರು ಬಣ್ಣಿಸಿದರು.

ಆಧುನಿಕ ನಾಗರೀಕತೆಯ ಪ್ರತೀಕವಾದ ವಿದ್ಯುತ್ ದೀಪ ಪ್ರಖರ ಬೆಳಕನ್ನು ನೀಡಬಲ್ಲದು. ಆದರೆ ಕಡಿಮೆ ಬೆಳಕು ನೀಡುವ ಎಣ್ಣೆ ದೀಪ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಹಣಕೊಟ್ಟು ಗಡಿಯಾರವನ್ನು ಖರೀದಿಸಬಹುದು. ಆದರೆ ಹಣಕೊಟ್ಟು ಸಮಯವನ್ನು ಖರೀದಿಸಲಾಗುವುದಿಲ್ಲ. ಆಧುನಿಕ ಸಂಸ್ಕೃತಿ ನಮ್ಮನ್ನು ಆವರಿಸುತ್ತಿದ್ದರೂ ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಇತಿಮಿತಿಗಳಿವೆ. ಅಂತೆಯೇ ಸನಾತನ ಸಂಸ್ಕೃತಿಯನ್ನೂ ಸಂಪೂರ್ಣವಾಗಿ ಅವಲಂಬಿಸಿ ಬದುಕು ಸಾಗಿಸುವುದು ದುಸ್ತರ ಎಂಬ ಅರಿವು ನಮ್ಮಲ್ಲಿರಬೇಕು ಎಂದು ಡಾ ಚಿದಾನಂದಮೂರ್ತಿ ಅವರು ತಿಳಿಸಿದರು.

ವಿದೇಶೀಯರು ಭಾರತೀಯ ಸಂಸ್ಕೃತಿಯನ್ನು ಮೆಚ್ಚಿ ಅನುಸರಿಸಲು ಹಾತೊರೆಯುತ್ತಿರುವಾಗ, ಯುವ ಭಾರತೀಯರು ನಮ್ಮ ಸಂಸ್ಕೃತಿಯನ್ನೇ ತೊರೆದು ವಿದೇಶಿ ಸಂಸ್ಕೃತಿಯನ್ನು ಅನುಕರಿಸಲು ಯತ್ನಿಸುತ್ತಿರುವುದು ಅತ್ಯಂತ ಖೇದಕರ ಸಂಗತಿ ಎಂದು ಬಣ್ಣಿಸಿದ ಡಾ: ಚಿದಾನಂದ ಮೂರ್ತಿ ಅವರು ವೇದಗಳ ಕಾಲದಲ್ಲಿಯೂ ಸ್ತ್ರೀಯರಿಗೆ ಪ್ರಾಧಾನ್ಯತೆ ನೀಡಲಾಗಿತ್ತು ಎಂಬುದನ್ನು ಉದಾಹರಣೆಗಳೊಂದಿಗೆ ಉಲ್ಲೇಖಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X