ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಮ್ಮನಹಳ್ಳಿಯಲ್ಲಿ ಮಾದರಿ 'ಜನಸ್ಪಂದನ' ಕಾರ್ಯಕ್ರಮ

By Staff
|
Google Oneindia Kannada News

M Satish Reddy, Bommanahalli MLA
ಬೆಂಗಳೂರು, ಫೆ. 7 : ಕ್ಷೇತ್ರದ ಶಾಸಕ, ಅಧಿಕಾರಿಗಳ ಸಮ್ಮುಖದಲ್ಲಿ ನಾಗರಿಕರ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸಿಕೊಡುವ 'ಜನಸ್ಪಂದನ' ಸರಣಿ ಕಾರ್ಯಕ್ರಮವನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪತ್ರಿಕೆಗಳಾದ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಮತ್ತು ಮಯೂರ ಪ್ರಾಯೋಜಕತ್ವದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಜನರಿಗೆ ತಮ್ಮ ಅಹವಾಲುಗಳನ್ನು ತೋಡಿಕೊಳ್ಳಲು ಮುಕ್ತ ವೇದಿಕೆಯನ್ನು ಕಲ್ಪಿಸಲಾಗಿತ್ತು.

ಅರಕೆರೆ ಮೈಕೋಲೇಔಟ್ ಆಟದ ಮೈದಾನದಲ್ಲಿ ಬೆಳಿಗ್ಗೆ 10.30ಕ್ಕೆ ನಡೆದ ಕಾರ್ಯಕ್ರಮಕ್ಕೆ ನೂರಾರು ಜನ ನಾಗರಿಕರು ಬಂದು ಜನಪ್ರತಿನಿಧಿ ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಮುಂದೆ ತಾವು ಎದುರಿಸುತ್ತಿರುವ ಸಮಸ್ಯೆಗಳ ಅಹವಾಲನ್ನು ತೆರೆದಿಟ್ಟರು. ಬಿಜೆಪಿಯಿಂದ ಆಯ್ಕೆಯಾಗಿರುವ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ ಆಗಮಿಸಿ ಮತನೀಡಿದ ಜನರ ಕುಂದುಕೊರತೆಗಳಿಗೆ ಕಿವಿಯಾದರು. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಕಿವಿಯನ್ನೂ ಹಿಂಡಿದರು.

ಸಾಮಾನ್ಯಜನರ ಪರವಾಗಿ ಪ್ರಮುಖವಾಗಿ ಮಾತನಾಡಿದ ಕಿರುತೆರೆ ನಟ, ನಿರ್ದೇಶಕ ಸಿಹಿಕಹಿ ಚಂದ್ರು ಅವರು ಕ್ಷೇತ್ರದಲ್ಲಿ ತಾವು ಎದುರಿಸುತ್ತಿರುವ ಕಹಿ ಅನುಭವಗಳ ಬುತ್ತಿಯನ್ನು ಬಿಚ್ಚಿಟ್ಟರು. ಸಿನೆಮಾದಲ್ಲಿ ನಾವು ರಾಜಕಾರಣಿಗಳನ್ನು ಕೆಟ್ಟದಾಗಿ ಚಿತ್ರಿಸುತ್ತೇವೆ. ಆದರೆ ವಸ್ತುಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಶಾಸಕರು ಜನರಿಗೆ ಸ್ಪಂದಿಸುತ್ತಾರೆ. ಆದರೆ, ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸಮಸ್ಯೆಗಳು ನಿವಾರಣೆಯಾಗುವುದೇ ಇಲ್ಲ. ದೂರು ನೀಡಿದರೂ ಇಲಾಖೆಯ ನೌಕರರು ಬರುವುದೇ ಇಲ್ಲ ಎಂದು ದೂರಿದರು. ಕ್ಷೇತ್ರದಲ್ಲಿ ಜನರು ಎದುರಿಸುತ್ತಿರುವ ಕುಡಿಯುವ ನೀರು, ನೈರ್ಮಲ್ಯ, ಟ್ರಾಫಿಕ್ ಸಮಸ್ಯೆಗಳ ವಿವರಗಳನ್ನು ಶಾಸಕರು ಮತ್ತು ಅಧಿಕಾರಿಗಳ ಮುಂದಿಟ್ಟರು.

ಜನರ ಕುಂದುಕೊರತೆಗಳಿಗೆ ಪ್ರತಿಸ್ಪಂದಿಸಿದ ಶಾಸಕ ಸತೀಶ್ ರೆಡ್ಡಿಯವರು, ಇನ್ನು ಮೇಲೆ ನಿಗದಿತ ವೇಳೆಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ವಾಗ್ದಾನ ನೀಡಿದರು. ಸರಿಯಾಗಿ ಕೆಲಸ ನಿರ್ವಹಿಸದ, ಜನರಿಗೆ ಸ್ಪಂದಿಸದ ಅಧಿಕಾರಿಗಳನ್ನು ಎತ್ತಂಗಡಿ ಮಾಡುವುದಾಗಿ ಮಾತು ನೀಡಿದರು. ಕಾರ್ಯ ನಿರ್ವಹಣೆಯಲ್ಲಿನ ಲೋಪದೋಷಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡ ಕೆಲ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ತಾವೇ ಗಡುವು ವಿಧಿಸಿಕೊಂಡಿದ್ದು ಜನಸ್ಪಂದನದ ವಿಶೇಷ.

ಬೊಮ್ಮನಹಳ್ಳಿಯೊಂದರಲ್ಲಿಯೇ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ 157 ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 90 ಕೋಟಿಗೂ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದೆ. ಆದರೂ ಅಭಿವೃದ್ಧಿ ಕಾರ್ಯಗಳು ಕುಂಟುತ್ತ ಸಾಗಿವೆ. ಮಳೆಗಾಲ ಬಂತೆಂದರೆ ಪ್ರತಿದಿನ ಪತ್ರಿಕೆಗಳ ಮುಖಪುಟಗಳಲ್ಲಿ ಈ ಕ್ಷೇತ್ರ ರಾರಾಜಿಸುತ್ತದೆ.

ಒಟ್ಟಿನಲ್ಲಿ, ನಾಗರಿಕ ಜಾಗೃತಿಗೆ ಇಂಬು ನೀಡುತ್ತ ಜನರ ಕುಂದುಕೊರತೆಗಳಿಗೆ ಕನ್ನಡಿ ಹಿಡಿಯುತ್ತಿರುವ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ 'ಜನಸ್ಪಂದನ' ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X