ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಬಾರರು ನಿದ್ದೆ ಮಾಡ್ತಿದಾರೆ, ನಿಶ್ಯಬ್ದ!

By Super
|
Google Oneindia Kannada News

chandrashekhar kambar
ಗಂಡುಮೆಟ್ಟಿದ ನೆಲದಿಂದ ಪುಟಿದೆದ್ದು ಬಂದ ನಮ್ಮ ಗೌರವಾನ್ವಿತ ಶಾಸಕ ಕಂಬಾರರು ತವರು ಭೂಮಿಯಲ್ಲಿ ನಡೆದ ಅಧಿವೇಶನದಲ್ಲಿ ಸತತವಾಗಿ, ಜನಪದ ಧಾಟಿಯಲ್ಲಿ ನಿದ್ದೆ ಮಾಡಿ ಇತರ ಶಾಸಕರಿಗೆ ಮಾದರಿಯಾದರು. ಹಾಗೆ ನೋಡಿದರೆ, ಜೋಭದ್ರಗೇಡಿತನ ಮತ್ತು ಸೋಮಾರಿತನದ ಪರಮಾವಧಿಯನ್ನು ಚಿತ್ರಿಸುವ ಎದ್ದೇಳು ಮಂಜುನಾಥ ಚಿತ್ರ ಬೆಳಗಾವಿ ಅಧಿವೇಶನಕ್ಕಿಂತ ಎಷ್ಟೋ ವಾಸಿ.

* ಡಾ.ಕೆ.ಎನ್.ದೊಡ್ಡಮನಿ, ಬೆಳಗಾವಿ

ಕಳೆದ ಬಾರಿ ಅಂದರೆ 2006ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ನೀಡಿದ ಭರವಸೆಗಳನ್ನು ಖಾಲಿಯಾಗಿರುವ ಸರ್ಕಾರದ ತಿಜೋರಿಯಲ್ಲಿ ಲಾಕ್ ಮಾಡಿಟ್ಟಿರಬೇಕಾದರೆ ಈಗ ಅದೇ ನೆಲದಲ್ಲಿ ಅದೇ ರೀತಿ ಮತ್ತೊಂದು ಅಧಿವೇಶನ ನಡೆದುಹೋಯಿತು. ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆದು ಹೋಯಿತು ಎಂದೇ ಹೇಳಬಹುದು ಹೊರತು ಅದರಿಂದ ಏನಾಯಿತು? ಏನಾಗಬಹುದು? ಎಂಬ ಪ್ರಶ್ನೆಗಳಿಗೆ ಅಷ್ಟು ಸ್ಪಷ್ಟವಾದ ಉತ್ತರಗಳು ನಮಗೆ ಸಿಗುವುದಿಲ್ಲ. ಆದರೆ, ಕೋಟಿಗಟ್ಟಲೆ ಸಾರ್ವಜನಿಕ ಹಣ ಸರಕಾರದ ಮೂಲಕ ಹರಿದುಹೋದದ್ದು ಮಾತ್ರ ಸತ್ಯ. ಈ ಸಾರ್ವಜನಿಕ ಸಂಪತ್ತಿನ ಹರಿಯುವಿಕೆ ಯಾವ ಪುರುಷಾರ್ಥಕ್ಕಾಗಿ? ನೀವು ಮರೆಯುವ ಮುನ್ನ ಕೆಲವು

'ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಈ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಎಂದು ಸಕಾರ ಡಂಗೂರ ಸಾರಿತಾದರೂ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ದಿಯ ಕುರಿತು ಚರ್ಚಿಸಿದ್ದು, ಕೇವಲ ನೆಪ ಮಾತ್ರ. ಹತ್ತು ದಿನಗಳ ಈ ಅಧಿವೇಶನದಲ್ಲಿ ರಾಜ್ಯಪಾಲರು ಪ್ರಾರಂಭದ ಒಂದು ದಿನ ಜಂಟಿ ಸದನವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಹೊರುತುಪಡೆಸಿದರೆ ಉಭಯ ಸದನಗಳ ಕಲಾಪ ನಡೆದದ್ದು ಕೇವಲ ಆರು ದಿನ ಮಾತ್ರ. ಬೆಳಗಾವಿ ಅಧಿವೇಶನದ ಈ ಆರು ದಿನಗಳಲ್ಲಿ ಹಿರಿಯರ ಮನೆ ಎಂದು ಕರೆಯಿಸಿಕೊಳ್ಳುವ ಮೇಲ್ಮನೆಯಲ್ಲಿ ನಡೆದ ಚರ್ಚೆಯನ್ನು ಮುಂದಿಟ್ಟುಕೊಂಡು ಬೆಳಗಾವಿ ನೆಲದ ಕೆಲ ನಾಯಕರು, ಹಿರಿಯರು, ಬಿದ್ದವಂತರು ನಿದ್ದೆಯಲ್ಲಿಯೇ ಕಳೆದ ಸಂಗತಿಯನ್ನು ಇಲ್ಲಿ ಪ್ರಸ್ತಾಪಿಸಿಲಾಗಿದೆ.

ಬೆಳಗಾವಿ ಅಧಿವೇಶನದ ಆರು ದಿನಗಳ ವಿಧಾನ ಪರಿಷತ್ತಿನ ಕಲಾಪಗಳಲ್ಲಿ ಒಂದೆರಡು ಸಣ್ಣಪುಟ್ಟ ವಿಷಯಗಳನ್ನು ಹೊರತುಪಡೆಸಿದರೆ, ಸುಮಾರು ಐದುವರೆ ದಿನಗಳವರೆಗೆ ಪ್ರತಿಧ್ವನಿಸಿದ್ದು ಬರೀ ಅಕ್ರಮ ಗಣಿಗಾರಿಕೆ ಕುರಿತು. ಅಕ್ರಮ ಗಣಿಗಾರಿಕೆಯ ಪಾಪದ ಕೂಸನ್ನು ಯಾರು ಹೆತ್ತವರು ಎಂಬ ಸತ್ಯ ಬಯಲಿಗೆ ಬರಬೇಕಾದರೆ, ಧಂಧೆಯ ಬಗ್ಗೆ ಸಿಬಿಐಗೆ ಒಪ್ಪಿಸಬೇಕೆಂದು ಪ್ರತಿಪಕ್ಷಗಳ ಪಟ್ಟು; ಇದನ್ನು ಖಂಡತುಂಡವಾಗಿ ನಿರಾಕರಿಸಿ ಜಂಟಿ ಸದನ ಸಮಿತಿಯಿಂದ ಸರ್ವೆ ನಡೆಸುವುದಾಗಿ ಸಾಧಿಸಿದ ಸರ್ಕಾರದ ಹಠಮಾರಿತನದಲ್ಲಿಯೇ ಐದುವರೆ ದಿನಗಳ ಕಲಾಪದ ಸಮಯವನ್ನು ನುಂಗಿತು. ಆದರೆ, ಅಂತ್ಯದಲ್ಲಿ ಆದದ್ದು ಏನು? ನಾಡಿನ ಭೌಗೋಳಿಕ ಸಂಪತ್ತು ಅವ್ಯಾಹತವಾಗಿ ಲೂಟಿಯಾಗುತ್ತಿದೆ, ಸಹಿಸಲು ಅಸಾಧ್ಯವಾದ ಪರಿಸರ ಮಣ್ಣುಗೂಡಿ ಹೋಗುತ್ತಿದೆ, ಮುಂದಿನ ಪೀಳಿಗೆ ಕ್ಷಮಿಸಲು ಸಾಧ್ಯವಾಗದ ದುಷ್ಕೃತ್ಯ, ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಅಕ್ರಮಗಣಿಗಾರಿಕೆಯ ಮೃಷ್ಟಾನ್ನವನ್ನು ಮುಂದಿಟ್ಟುಕೊಂಡು ಮಂಡಿಸಿದ ಅದಮ್ಯೆ ಸಾಮಾಜಿಕ ಕಳಕಳಿಗೆ ಪ್ರತಿಪಕ್ಷಗಳೂ ಒಳಗೊಂಡಂತೆ ಸರ್ಕಾರವೂ ಸಹಿತ ಧ್ವನಿಗೂಡಿಸಿ ಮಾತನಾಡಿದನ್ನು ಕೇಳಿದರೆ ಅಚ್ಚರಿಯಾಗುತ್ತದೆ. ಈ ಕಳಕಳಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಉಭಯರಿಗೂ ಇದಾವುದೂ ಬೇಕಾಗಿಲ್ಲ. ಅವರೇ ಒಪ್ಪಿಕೊಂಡಿರುವಂತೆ ಇಬ್ಬರೂ ಕಳ್ಳರು. ಕಳ್ಳರನ್ನು ಕಳ್ಳರೇ ಹಿಡಿಯುವ ತಂತ್ರದಲ್ಲಿ ನಾಡಿನ ಜನರ ಹಿತಾಸಕ್ತಿ ಅಡಿಗದೆ ಎಂದು ಹೇಳಿದರೆ ಯಾರು ತಾನೆ ನಂಬುತ್ತಾರೆ? ಇದೆಲ್ಲ ರಾಜಕೀಯ ತಂತ್ರಗಾರಿಕೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಮೇಲ್ಮನೆಯ ಕಲಾಪಗಳ ಆರನೇ ದಿನ ಮಧ್ಯಾಹ್ನ ಬೋರಿ ಭೋಜನದ ನಂತರ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಎತ್ತಿಕೊಳ್ಳುತ್ತಿದ್ದಂತೆಯೇ ಒಬ್ಬೊಬ್ಬರೇ ಸದಸ್ಯರು ಕುಳಿತಲ್ಲಿಂದಲೇ ಮಾಯವಾಗುತ್ತಿದ್ದರು. ಉತ್ತರ ಕರ್ನಾಟಕದ ಅಭಿವೃದ್ದಿಗಾಗಿ ಕರೆದ ಈ ಅಧಿವೇಶನದಲ್ಲಿ ಚರ್ಚೆ ನಡೆಯಲಿಲ್ಲ ಎಂಬ ಕೂಗು ಹೊರಬರುತ್ತಿದ್ದಂತೆ ಸದಸ್ಯರ ನಿದ್ದೆಗಣಿನಲ್ಲಿ ಒಂದಿಷ್ಟು ಚರ್ಚೆ ನಡೆದು ಹೋಯಿತು ಎಂದು ಹೇಳಬಹುದು. ಅದೇನು ಚರ್ಚೆ ಮಾಡಿದರೋ ಅವರಿಗೆ ಮಾತ್ರ ಗೊತ್ತು.

'ಗಂಡು ಮೆಟ್ಟಿನ ನೆಲ ಎಂದೆಲ್ಲ ಕರೆಯುವ ಬೆಳಗಾವಿಯ ನೆಲದಲ್ಲಿ ನಡೆದ ಈ ವಿಶೇಷ ಅಧಿವೇಶನದ ಮೇಲ್ಮನೆಯಲ್ಲಿ ಬೆಳಗಾವಿ ಒಳಗೊಂಡಂತೆ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಲು ಈ ಭಾಗದ ನಾಯಕರಿಗೆ ದೊರೆತ ಒಂದು ಉತ್ತಮ ಅವಕಾಶ. ಈ ಅವಕಾಶವನ್ನು ಉಪಯೋಗಿಸಿಕೊಂಡು ಈ ಭಾಗದ ಬಗ್ಗೆ ಬುದ್ದಿವಂತರ ಮನೆಯ ಸದಸ್ಯರು ಧ್ವನಿ ಎತ್ತಿದ್ದಾರೆಯೆ? ಎಂಬ ಪ್ರಶ್ನೆಗೆ, 'ಒಂದಿಷ್ಟು ಮಂದಿ ಎತ್ತಿದರು ಎಂದು ಹೇಳಿ ಸಮಾಧಾನ ಮಾಡಿಕೊಳ್ಳಬಹುದು.

ಮೇಲ್ಮನೆಯಲ್ಲಿ ಎಂ.ಪಿ. ನಾಡಗೌಡ, ಬಸವರಾಜ್ ಹೊರಟ್ಟಿ ಅವರನ್ನು ಹೊರತುಪಡಿಸಿದರೆ ಇನ್ನುಳಿದವರು ಉತ್ತರ ಕರ್ನಾಟಕದ ರುಚಿಕಟ್ಟಾದ ಎಣ್ಣೆಗಾಯ ರೊಟ್ಟಿಯ ಊಟ ಮಾಡಿ ಮೇಲೆ ಒಂದಿಷ್ಟು ತಂಪಾದ ಮಜ್ಜಿಗೆ ಜಡಿದು ಗೊರಕೆ ಹೊಡೆದದ್ದೇ ಜಾಸ್ತಿ. ಮಾಜಿ ಶಿಕ್ಷಣ ಸಚಿವರೂ ಆದ ಬಸವರಾಜ ಹೊರಟ್ಟಿ ಅವರದು ನೇರ ಮತ್ತು ಒಂದು ಬಗೆಯ ಕಡಕ್ಕಾದ ಮಾತುಗಳು. ಅವರು ಸದನದಲ್ಲಿ ಇದ್ದಷ್ಟು ವೇಳೆ ಅತೀ ಕಡಿಮೆ ಮಾತುಗಳಲ್ಲಿ ಅಗದಿ ಕಡಕ್ಕಾಗಿ ಮಾತನಾಡುತ್ತಿದ್ದರು. ಆದರೆ, ಏನ ಕೆಲಸೋ ಏನೋ ಗೊತ್ತಿಲ್ಲ ಪಾಪ, ಅವರು ಸದನದಲ್ಲಿ ಇರುವುದೇ ಕಡಿಮೆ.

ಇದಕ್ಕೆ ಅಪವಾದ ಎನ್ನುವಂತೆ ಡಾ.ಎಂ.ಪಿ.ನಾಡಗೌಡರು. ಸಭಾಪತಿಗಳು 'ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ ಎಂದು ಹೇಳುವವರೆಗೂ ನಾಡಗೌಡರು ಸದನದಲ್ಲಿ ನಿಷ್ಠೆಯಿಂದ ಕುಳಿತಿರುತ್ತಿದ್ದರು. 'ಕುಳಿತಿರುತ್ತಿದ್ದರು ಎಂದು ಹೇಳಿದ ಮಾತ್ರಕ್ಕೆ ಸದನದಲ್ಲಿ ಸುಮ್ಮನೆ ಕುಳಿತುಕೊಳ್ಳವವರ ಸಾಲಿನಲ್ಲಿ ಅವರು ಸೇರಿಕೊಂಡಿರಲಿಲ್ಲ. ನಿದ್ದೆಯೂ ಇಲ್ಲ, ಮಾತೂ ಇಲ್ಲದ ಕೆಲ ಸದಸ್ಯರೂ ಪರಿಷತ್ತಿನಲ್ಲಿ ಕುಳಿತಿರುತ್ತಿದ್ದರು. ಅವರು ಯಾವ ಕಾರಣಕ್ಕಾಗಿ ಕುಳಿತಿರುತ್ತಿದ್ದರು ಎಂಬುದು ಕೊನೆಯವರೆಗೂ ಅರ್ಥವಾಗಲಿಲ್ಲ.

ಯಾವುದೇ ವಿಷಯ ಪ್ರಸ್ತಾಪವಾದರೂ ಅದಕ್ಕೆ ನಾಡಗೌಡರ ತಾಳಿಕೊಳ್ಳುವ ಶಕ್ತಿ ಕಡಿಮೆಯಾಗಿ ಮಾತು ಆಡಿಯೇ ತೀರಿಸುತ್ತಿದ್ದರು. ಅವರ ಸ್ವಭಾವವೇ ಹಾಗೆ ಪ್ರತಿಪಕ್ಷದವರು ಮಾತನಾಡುವುದಕ್ಕಿಂತ ಮೊದಲೇ ಸಭಾಪತಿಗಳು ಬಂದು ಕುರ್ಚಿ ಮೇಲೆ ಕುಳಿತಿದ್ದೇ ತಡ ನಾಡಗೌಡರು ಏನಾದರೂ ಪ್ರಸ್ತಾಪಿಸುತ್ತಿದ್ದರು. ಪ್ರತಿಯೊಂದೂ ವಿಷಯವನ್ನು ಹಾಸ್ಯ ಚಟಾಕಿಯ ಮೂಲಕ ಪ್ರಸ್ತಾಪಿಸುವುದು ಸದನದಲ್ಲಿನ ನಾಡಗೌಡರ ಮಾತುಗಾರಿಕೆಯ ಶೈಲಿ. ಆ ಮೂಲಕ ಅವರು ನಿದ್ದೆಯಲ್ಲಿದ್ದವರನ್ನು ಒಂದಿಷ್ಟು ಎಚ್ಚರಗೊಳಿಸುತಿದ್ದರೇನೋ? ಹೀಗಾಗಿ ಹಿರಿಯರ ಮನೆಯಾದ ಮೇಲ್ಮನೆಯಲ್ಲಿ ಎಂ.ಪಿ. ನಾಡಗೌಡರು ಒಬ್ಬ ಒಳ್ಳೆಯ ನಗೆಗಾರರು ಎಂದು ಹೇಳಲು ಅಡ್ಡಿಯಿಲ್ಲ.

ನಾಡಗೌಡರ ಹಾಸ್ಯದ ಮಾತುಗಳಿಗೆ ನಕ್ಕರೆ ಎಲ್ಲಿ ಬಾಯಿ ಮೂಲಕ ತಮ್ಮ ಅಮೂಲ್ಯವಾದ ವಸ್ತು ಕಳೆದುಹೋಗುತ್ತದೆಯೇನೋ ಎನ್ನುವಂತೆ ಹಣೆ ಹದಿನಾರು ಗಂಟುಹಾಕಿ, ಮುಖ ಬಿಗಿ ಹಿಡಿದು ಕುಳಿತ ಗಂಭೀರ ಶೈಲಿಯ ನಾಯಕರೂ ಇದ್ದರು.

ನಿದ್ದೆಯ ದೃಷ್ಟಿಯಿಂದ ಮುಖ್ಯವಾಗಿ ಗಮನಿಸಬೇಕಾದ ಸದಸ್ಯರೆಂದರೆ ನಮ್ಮ ವೀರಕುಮಾರ ಪಾಟೀಲ ಮತ್ತು ಡಾ. ಚಂದ್ರಶೇಖರ ಕಂಬಾರ ಅವರು. 'ವೀರಕುಮಾರ ಪಾಟೀಲ ಅವರು ಸದನದಲ್ಲಿ ಬಹಳ ಹೊತ್ತಿನವರೆಗೆ ನಿದ್ದೆ ಮಾಡಿದರು ಎಂದು ಹೇಳಿದರೆ ಖಂಡಿತಾ ತಪ್ಪಾಗುತ್ತದೆ. ಆದರೆ, ಅವರು ಸದನದಲ್ಲಿ ಕುಳಿತಿದ್ದಾರೆ ಎಂದರೆ ಮೆಲ್ಲಗೆ ನಿದ್ದೆಗೆ ಜಾರಿದ್ದಾರೆ ಎನ್ನುವಂತೆ ಕಾಣಿಸಿಕೊಳ್ಳುವುದು ಮಾತ್ರ ಸತ್ಯ. ಅದು ಅವರ ಸದನದಲ್ಲಿನ ಕುಳಿತುಕೊಳ್ಳುವ ಶೈಲಿ. ವೀರಕುಮಾರ ಅವರು ಆರು ದಿನಗಳ ಕಲಾಪದಲ್ಲಿ ಒಂದು ಚಕಾರ ಎತ್ತಿಲ್ಲ ಎನ್ನುವುದು ಅದೇ ಒಂದು ದಾಖಲೆ. ಬೆಳಗಾವಿಯವರೇ ಆದ ವೀರಕುಮಾರ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ತಮ್ಮ ಭಾಗದ ಸಮಸ್ಯೆಗಳನ್ನು ಗಂಭೀರವಾಗಿ ಎತ್ತಿ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲು ಉತ್ತಮ ಅವಕಾಶವಿದ್ದರೂ ಅದನ್ನು ಸದುಪಯೋಗಪಡೆಸಿಕೊಳ್ಳುವ ಮನಸ್ಥಿತಿ ಮಾತ್ರ ಅವರಲ್ಲಿ ಕಡೆಯವರೆಗೂ ಕಂಡು ಬರಲಿಲ್ಲ. ನಿಪ್ಪಾಣಿಯನ್ನು ತಾಲೂಕಾ ಕೇಂದ್ರವನ್ನಾಗಿ ಮಾಡುವ ಆಶೆ ಅವರದ್ದಾಗಿದ್ದರೂ ಆ ಬಗ್ಗೆಯೂ ಅವರು ಒಂದೂ ಮಾತನಾಡಲಿಲ್ಲ.

ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಕುಳಿತ ಸಾಲಿನಲ್ಲಿಯೇ ಅತೀ ಹಿಂದಿನ ಸಾಲಿನ ಕುರ್ಚಿಯಲ್ಲಿ ಕುಳಿತು, ನಿದ್ದೆಗಾಗಿ ಸದನವನ್ನು ಚನ್ನಾಗಿ ಸದುಪಯೋಗಪಡೆಸಿಕೊಂಡವರು ನಮ್ಮ ಸಾಹಿತಿಗಳಾದ ಜೋಕಮಾರಸ್ವಾಮಿ ನಾಟಕದ ಲೇಖಕರೂ ಆದ, ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರು. ಸಭಾಪತಿಗಳು ಕಲಾಪವನ್ನು ಮುಂದೂಡಿದರೋ ಹೇಗೆ? ಎನ್ನುವುದನ್ನು ಗಮನಿಸುತ್ತಿದ್ದರೇನೋ ಎನ್ನುವಂತೆ ಕಂಬಾರರು ಮಧ್ಯ ಮಧ್ಯ ಎಚ್ಚರಗೊಳ್ಳುವುದು ಒಂದು ಸಾಮಾನ್ಯ ದೃಶ್ಯ ಕಂಡುಬಂತು. ಸುಮ್ಮನೆ ಕುಳಿತು ಬೇಸರವಾದಾಗ ಒಂದಿಷ್ಟು ಸದನದ ಹೊರಗೆ ಹೋಗಿ, ಮತ್ತೇ ಮರಳಿ ನಿಧಾನವಾಗಿ ನೆಮ್ಮಿದಿಯ ನಿದ್ದೆಗೆ ಸಾಹಿತಿಗಳು ಜಾರುತಿದ್ದರು. ಆವಾಗ ಅವರು ಬಹುಶಃ ಅವರ ಮುಂದಿನ ಕಾದಂಬರಿಯ ವಸ್ತು ತಂತ್ರಗಳ ಬಗ್ಗೆ ಯೋಚನೆ ಮಾಡುತ್ತಿರೇನೊ? ಅವರು ಎಚ್ಚರಗೊಂಡಾಗ ಪತ್ರಕರ್ತರ ಗ್ಯಾಲರಿಯ ನನ್ನ ಮಗ್ಗುಲಿನಲ್ಲಿ ಕುಳಿತಿದ್ದ ಗೆಳೆಯರೊಬ್ಬರಿಗೆ ' ಚಂದ್ರಶೇಖರ ಕಂಬಾರ ಅವರು ಎಚ್ಚರಗೊಂಡಿದ್ದಾರೆ ನೋಡಿ ಎಂದು ಹೇಳಿ, ಇಬ್ಬರೂ ನಕ್ಕು ನಾವೂ ರಿಲ್ಯಾಕ್ಸ್ ಆಗುತ್ತಿದ್ದೆವು.

ಡಾ. ಚಂದ್ರಶೇಖರ ಕಂಬಾರ ಅವರು ವಿಧಾನ ಪರಿಷತ್ತಿಗೆ ನೇಮಕವಾದದ್ದು ಯಾವುದೇ ರಾಜಕೀಯ ಪಕ್ಷದಿಂದಲ್ಲ. ಖ್ಯಾತ ಸಾಹಿತಿಗಳು, ಶಿಕ್ಷಣ ತಜ್ಞರೂ, ಆಡಳಿತಾನುಭವಿಗಳು, ವಿದ್ವಾಂಸರು ಎಂಬ ಕಾರಣಕ್ಕಾಗಿ, ಜನತೆಯ ಹಿತಾಸಕ್ತಿಯ ದೃಷ್ಟಿಯಿಂದ ಅವರಿಂದ ಏನಾದರೂ ಒಂದಿಷ್ಟು ಒಳ್ಳೆಯ ಸಲಹೆ, ಸೂಚನೆಗಳು ದೊರೆತಾವು ಎನ್ನುವ ಕಾರಣದಿಂದ ಅವರನ್ನು ಪಕ್ಷಾತೀತವಾಗಿ ಮೇಲ್ಮನೆಗೆ ನೇಮಕ ಮಾಡಲಾಗಿದೆ. ಒಳ್ಳೆಯ ಮಾತಗಾರರೂ ಆಗಿರುವ ಕಂಬಾರ ಅವರು ಹಳ್ಳಿಯ ಬದುಕಿನ ಒಡಲಿನಿಂದ ಬಂದವರು ಮಾತ್ರವಲ್ಲ, ಆ ಒಡಲನ್ನೇ ಬಂಡವಾಳವನ್ನಾಗಿರಿಸಿಕೊಂಡು ಸಾಹಿತಿಗಳಾಗಿ, ವಿದ್ವಾಂಸರಾಗಿ ಹೆಸರು ಮತ್ತು ಅಧಿಕಾರ ಇತ್ಯಾದಿಗಳನ್ನು ಗಳಿಸಿಕೊಂಡವರು. ವಿಶೇಷವಾಗಿ ಅವರ ಸಾಹಿತ್ಯ ಸಿದ್ಧಿ ಸಾಧ್ಯವಾದದ್ದು ಬೆಳಗಾವಿ ಜಿಲ್ಲೆ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ಭೂಮಿಕೆಯಿಂದ. ಹೀಗಾಗಿ ಅವರ ಮೇಲೆ ಬೆಳಗಾವಿ ಜಿಲ್ಲೆಯ ಋಣ ಒಂದಿಷ್ಟು ಜಾಸ್ತಿಯೇ ಇದೆ ಎಂದು ಹೇಳಲು ಅಡ್ಡಿ ಆತಂಕವಿಲ್ಲ.

ಹಲವಾರು ಸಮಸ್ಯೆಗಳ ಮಧ್ಯ ಒದ್ದಾಡುತ್ತಿರುವ ಬೆಳಗಾವಿ ನೆಲದ ಜನತೆ, ಶೈಕ್ಷಣಿಕ ಒಲಯದ ಪ್ರಜ್ಞಾವಂತ ನಾಗರಿಕರು, ಸಾಹಿತ್ಯ ಸಾಂಸ್ಕೃತಿಕ ಒಲಯದ ಹರಿಕಾರರು ಬೆಳಗಾವಿ ಅಧಿವೇಶನದ ಮೂಲಕ ಡಾ. ಚಂದ್ರಶೇಖರ ಕಂಬಾರ ಅವರಿಂದ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಅದು ಸಹಜವೂ ಹೌದು. ದೂರಶಿಕ್ಷಣದ ಎಂ.ಫಿಲ್, ಪಿ.ಎಚ್‌ಡಿ ಪದವಿಗಳ ವಿಷಯ ಕುರಿತು ಒಂದೆರಡು ಮಾತುಗಳನ್ನು ಅವರು ಆಡಿದ್ದನ್ನು ಹೊರತುಪಡಿಸಿದರೆ ಬೆಳಗಾವಿಯ ಯಾವ ಸಮಸ್ಯೆ ಸಂಗತಿಗಳ ಬಗ್ಗೆ ಶಿಕ್ಷಣ, ಭಾಷೆ ಸಾಹಿತ್ಯ ಸಾಂಸ್ಕೃತಿಕ ಸಂಗತಿಗಳ ಬಗ್ಗೆ ಅವರು ತುಟಿ ಪಿಟ್ಟ ಎನ್ನಲಿಲ್ಲ. ಹೀಗಾಗಿ ಜನತೆ ಅವರ ಮೇಲೆ ಇಟ್ಟುಕೊಂಡ ನಿರೀಕ್ಷೆ ಬೆಳಗಾವಿಯಲ್ಲಿಯೇ ಉಳಿದು ಅವರು ಮಾತ್ರ ಹೇಗೆ ಬಂದಿದ್ದರೋ ಹಾಗೇ ಬೆಂಗಳೂರಿಗೆ ಸರ್ಕಾರದೊಂದಿಗೆ ಹೋದದ್ದು ಮಾತ್ರ ಸತ್ಯ.

ಕಂಬಾರ ಅವರ ಮಗ್ಗಲಿನಲ್ಲಿಯೇ ಕುಳಿತಿದ್ದ ಸ್ಪಿನ್ನರ್ ಪ್ರಕಾಶ ರಾಠೋಡ್ ಅವರು, ಮೇಲಿಂದ ಮೇಲೆ ಮಾತಿನ ಬೌಲಿಂಗ್ ಮಾಡುತ್ತಿದ್ದರು. ಸದನದ ಇನ್ನೊಂದು ಅಂಚಿನಲ್ಲಿ ಕುಳಿತುಕೊಂಡಿದ್ದ ಮತ್ತೊಬ್ಬ ಖ್ಯಾತ 'ಕವಿ ಪ್ರೊ. ದೊಡ್ಡರಂಗೇಗೌಡರು ದೇವದಾಸಿ ಪದ್ಧತಿ ಅನಿಷ್ಟತೆಯ ಬಗ್ಗೆ ಕಾವ್ಯ ರಚಿಸಿ, ಅದಕ್ಕೆ ಕಾರಣವಾದ ಪುರುಷ ವರ್ಗವನ್ನು 'ಗಂಡು ಗೂಳಿಗಳು ಎಂದು ಕರೆಯುವುದರ ಮೂಲಕ ಇಡೀ ಸದನದ ಗಮನ ಸೆಳೆಯುತ್ತಿದ್ದರು. ಅಕ್ರಮ ಗಣಿಗಾರಿಕೆ ಕುರಿತು ಕಾವ್ಯ ರಚಿಸಿ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದರು. ಒಂದಿಷ್ಟು ಮಾತುಗಳನ್ನೂ ಆಡುತಿದ್ದರು. ಇದನೆಲ್ಲಾ ಮೌನವಾಗಿಯೇ ಆಲಿಸುತಿದ್ದ ಕಂಬಾರ ಅವರ ಬಾಯಿಯಿಂದ ಯಾವ ಧ್ವನಿವೂ ಬರುತ್ತಿರಲಿಲ್ಲ.

'ಡಾ. ಚಂದ್ರಶೇಖರ ಕಂಬಾರ ಅವರು ಬೆಳಗಾವಿಯಿಂದ ಬೆಂಗಳೂರಿಗೆ ಹೋಗಿದ್ದಾಗಿದೆ. ಸಿಗಬೇಕಾದ ಅನೇಕ ದೊಡ್ಡವುಗಳೇ ಆದ ಪ್ರಶಸ್ತಿ, ಸನ್ಮಾನಗಳು ಸಿಕ್ಕಿದ್ದೂ ಆಗಿದೆ. ಮತ್ತೇಕೆ ಸದನದಲ್ಲಿ ಅವರು ಮಾತನಾಡುವುದಿಲ್ಲ? ಎಂಬ ಮೂಲ ಪ್ರಶ್ನೆಯೊಂದನ್ನು ನನ್ನ ಗೆಳೆಯ ನನ್ನತ್ತ ಎಸೆದರು. ನಿರುತ್ತರನಾದ ನಾನು 'ಅದು ಅವರನ್ನೇ ಕೇಳಬೇಕು ಅಂತ ಹೇಳಿ ಮೊಗಮ್ಮಾಗಿ ನಕ್ಕುಬಿಟ್ಟೆ.

'ದಲಿತ ಕವಿ ಎಂದೇ ಖ್ಯಾತರಾದ ನಮ್ಮ ಡಾ. ಸಿದ್ದಲಿಂಗಯ್ಯ ಅವರು ಇದೇ ರೀತಿ ಸದನವನ್ನು ಪ್ರವೇಶಿಸಿ ಹಾಗೇ ಹೊರಬಂದಾಗ ಅವರು ಸದನದಲ್ಲಿ ಧ್ವನಿ ಎತ್ತಿರುವ ಮಾತುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದ್ದನ್ನು ಕೇಳಿದ್ದೇನೆ. ನಾನು ಅದನ್ನು ಗಮನಿಸಿಲ್ಲ. ಹಾಗಯೇ ನಮ್ಮ ಮಾಜಿ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರ ಹಾಗೂ ಇನ್ನಿತರರು ಸದನದಿಂದ ಹೊರಬಂದಾಗ, ಅವರ ಅಭಿಮಾನಿಗಳು, ಹಿತೈಷಿಗಳು, ಹಿಂಬಾಲಕರು, ಬಾಲಬಡಕರು, ಚೇಲಾಗಳು ಅದಾವ ಧ್ವನಿಯನ್ನು ಸಂಗ್ರಹಿಸಿ ಪ್ರಕಟಿಸುತ್ತಾರೆ ಎಂಬದನ್ನು ಕಾಯ್ದು ನೋಡಬೇಕು. ಹಾಗೇ ಪ್ರಕಟಿಸುವ ಪುಸ್ತಕಕ್ಕೆ ದೊಡ್ಡದಾದ ಪ್ರಶಸ್ತಿಯೊಂದು ಸಿಕ್ಕರೂ ಸಿಗಬಹುದು!

English summary
Good for nothing legislators of Karnataka. Many local leaders from Belagavi region failed to work for the welfare of the people. The asembly hall was full of leaders either sleeping or dozing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X