ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆಗೆ ಬಿಜೆಪಿ ಪಟ್ಟಿ

By Staff
|
Google Oneindia Kannada News

ಬೆಂಗಳೂರು, ಜ. 29 : ಮುಂಬರುವ ಲೋಕಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಆರಿಸುವ ಭರಾಟೆ ರಾಜ್ಯದಲ್ಲಿ ಆರಂಭವಾಗಿದೆ. ಚುನಾವಣಾ ದಿನಾಂಕಗಳು ಇನ್ನೂ ಪ್ರಕಟವಾಗಿಲ್ಲದಿದ್ದರೂ 2009ರ ಏಪ್ರಿಲ್ ಮೇ ತಿಂಗಳ ನಡುವೆ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂಬ ಮಾಹಿತಿ ಚುನಾವಣಾ ಆಯೋಗದಿಂದ ಹೊರಬಿದ್ದಿದೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಆರಿಸುವ ಪ್ರಕ್ರಿಯೆ ಭಾರತೀಯ ಜನತಾ ಪಕ್ಷದಲ್ಲಿ ಈಗಾಗಲೇ ಆರಂಭವಾಗಿದೆ. ಹುರಿಯಾಳುಗಳ ಹೆಸರುಗಳನ್ನು ಇತ್ಯರ್ಥಗೊಳಿಸುವ ಸಭೆ ಬುಧವಾರ ಬೆಂಗಳೂರಿನಲ್ಲಿ ಜರುಗಿತು. ಕೆಲವು ಕ್ಷೇತ್ರಗಳಿಗೆ ಪಕ್ಷವು ತನ್ನ ಅಭ್ಯರ್ಥಿಗಳ ಹೆಸರುಗಳನ್ನೂ ಬಹುತೇಕ ನಿರ್ಧರಿಸಿದ್ದು ಅವು ಇಂತಿವೆ :

ಪಿ.ಜಿ. ಗದ್ದಿಗೌಡರ್ (ಬಾಗಲಕೋಟೆ), ಡಿ.ಎಸ್. ವೀರಯ್ಯ (ಕೋಲಾರ), ಅನಂತ್ ಕುಮಾರ್ (ಬೆಂಗಳೂರು ದಕ್ಷಿಣ), ಸುರೇಶ್ ಅಂಗಡಿ (ಬೆಳಗಾವಿ), ಸಿ.ಎಚ್. ವಿಜಯಶಂಕರ್ (ಮೈಸೂರು), ಡಿ.ಸಿ. ತಮ್ಮಣ್ಣ (ಮಂಡ್ಯ), ಡಿ. ವಿ. ಸದಾನಂದಗೌಡ (ಉಡುಪಿ-ಚಿಕ್ಕಮಗಳೂರು), ಜಿ.ಎಂ. ಸಿದ್ದೇಶ್ (ದಾವಣಗೆರೆ), ರಮೇಶ್ ಜಿಗಜಿಣಗಿ (ವಿಜಾಪುರ), ರಾಜಾ ಅಮರೇಶ್ ನಾಯಕ್ (ರಾಯಚೂರು), ಪ್ರಹ್ಲಾದ ಜೋಷಿ (ಧಾರವಾಡ), ಅನಂತ ಕುಮಾರ್ ಹೆಗಡೆ (ಉತ್ತರ ಕನ್ನಡ), ರೇವಾ ನಾಯ್ಕ್ ಬೆಳಮಗಿ (ಕಲ್ಬುರ್ಗಿ), ವಿ. ಧನಂಜಯ ಕುಮಾರ್ (ದಕ್ಷಿಣ ಕನ್ನಡ).

ಇನ್ನುಳಿದ ಕೆಲವು ಲೋಕಸಭಾ ಕ್ಷೇತ್ರಗಳಿಗೆ ನಾನಾ ಹೆಸರುಗಳು ಓಡಾಡುತ್ತಿವೆ. ಆದರೆ ಯಾರ ಹೆಸರನ್ನೂ ಇನ್ನೂ ಅಂತಿಮಗೊಳಿಸಿಲ್ಲ. ಕೆಲವು ಊಹೆಗಳ ಪ್ರಕಾರ ಬಳ್ಳಾರಿಗೆ ಶ್ರೀರಾಮುಲು, ಬೀದರ್ ಗೆ ಗುರುಪಾದಪ್ಪ ನಾಗಮಾರಪಲ್ಲಿ, ತುಮಕೂರಿನಲ್ಲಿ ಜಗ್ಗೇಶ್ ಅಥವಾ ಕಿರಣ್ ಕುಮಾರ್, ಚಿತ್ರದುರ್ಗಕ್ಕೆ ಜನಾರ್ಧನ ಸ್ವಾಮಿ, ಶಿವಮೊಗ್ಗಕ್ಕೆ ವಡ್ನಾಳ್ ರಾಜಣ್ಣ ಮತ್ತು ಹಾಸನಕ್ಕೆ ಬಿ. ಶಿವರಾಂ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.

ಹೆಸರಾಂತ ಪತ್ರಕರ್ತ ಕಣಕ್ಕೆ? : ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮೀಣ ಕ್ಷೇತ್ರಗಳಿಗೆ ವಿಪರೀತ ಪೈಪೋಟಿ ಕಂಡುಬಂದಿದ್ದು ಹೆಸರುಗಳನ್ನು ಇತ್ಯರ್ಥಗೊಳ್ಸುವುದು ಹೈಕಮಾಂಡಿಗೆ ತಲೆನೋವಾಗಿದೆ ಎಂದು ಶಂಕರಪುರಂ ನಿವಾಸಿ ಭಾಜಪ ಕಾರ್ಯಕರ್ತರೊಬ್ಬರು ದಟ್ಸ್ ಕನ್ನಡಕ್ಕೆ ತಿಳಿಸಿದರು. ಕನ್ನಡದ ಹೆಸರಾಂತ ಪತ್ರಕರ್ತರೊಬ್ಬರು ಬೆಂಗಳೂರಿನಿಂದ ಸ್ಪರ್ಧಿಸಲು ಹಾತೊರೆಯುತ್ತಿದ್ದಾರೆಂದು ತಿಳಿದುಬಂದಿದೆ! ಆದರೆ, ಯಡಿಯೂರಪ್ಪ ಅವರಿಗೆ ಆ ಪತ್ರಕರ್ತರ ಉಮೇದುವಾರಿಕೆ ಬಗ್ಗೆ ಇಷ್ಟವಿದ್ದಂತೆ ಕಾಣುತ್ತಿಲ್ಲ. ಇನ್ನೊಂದು ಮೂಲಗಳ ಪ್ರಕಾರ, ಬೆಂಗಳೂರು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಿದ್ದಾರೆ.

ಯಡಿಯೂರಪ್ಪ ಅವರ ಮಗ ಬಿ.ವೈ. ರಾಘವೇಂದ್ರ ಅವರಿಗೆ ಶಿವಮೊಗ್ಗದ ಟಿಕೆಟ್ ನೀಡಲಾಗುವುದೆಂಬ ಸುದ್ದಿ ಹರಡಿತ್ತು. ಆದರೆ, ಪಕ್ಷದ ನಾಯಕರ ಸಂಬಂಧಿಕರಿಗೆ, ಮಕ್ಕಳಿಗೆ ಟಿಕೆಟ್ ಕೊಡಬಾರದೆಂಬ ಕೂಗು ಎದ್ದಿದ್ದರಿಂದ ಅವರ ಹೆಸರನ್ನು ಕೈಬಿಡಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X