ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರಕ್ಕೆ ಸೇರಿದ ಎರಡು ಟೆಂಪೋ ಭಸ್ಮ

By Staff
|
Google Oneindia Kannada News

ತುಮಕೂರು, ಜ. 19 : ಕರ್ನಾಟಕದ ಬಸ್ ಮಹಾರಾಷ್ಟ್ರಲ್ಲಿ ಸುಟ್ಟ ಘಟನೆ ಕರ್ನಾಟಕದಲ್ಲಿಯೂ ಹಿಂಸಾರೂಪ ತಾಳುತ್ತಿದೆ. ಮರಾಠಿಗರ ಕೃತ್ಯಕ್ಕೆ ಪ್ರತಿಯಾಗಿ ಇಂದು ಕನ್ನಡ ಚಳವಳಿಗಾರರು ತುಮಕೂರಿನಲ್ಲಿ ಮಹಾರಾಷ್ಟ್ರಕ್ಕೆ ಸೇರಿದ ಎರಡು ಟೆಂಪೋಗಳಿಗೆ ಬೆಂಕಿ ಹಚ್ಚಿದ್ದಾರೆ.

ತುಮಕೂರಿನ ಬಳಿಯ ಅಂತರಸನ ಹಳ್ಳಿಯಲ್ಲಿ ಈ ಘಟನೆ ಇಂದು ಸಂಜೆ ಜರುಗಿದೆ. ಎರಡೂ ಟೆಂಪೋಗಳು ಸುಟ್ಟು ಕರಕಲಾಗಿವೆ. ಪೊಲೀಸರು ಕೂಡಲೆ ಸ್ಥಳಕ್ಕೆ ಧಾವಿಸಿದರೂ ಯಾರನ್ನೂ ಬಂಧಿಸಲಾಗಿಲ್ಲ. ಟೆಂಪೋ ಚಾಲಕರನ್ನು ಥಳಿಸಿರುವ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಕನ್ನಡ ಬಾವುಟಗಳು ದೊರೆತಿವೆ.

ಮುಂದುವರಿದ ಪುಂಡಾಟಿಕೆ : ಔರಾದ್ ನಿಂದ ದಾಬುಕಾಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಗೆ ಸೇರಿದ ಬಸ್ಸನ್ನು ಮರಾಠಿ ಕಾರ್ಯಕರ್ತರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಸಾರಿಗೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಕರೆ ಮಾಡಿ, ತಮ್ಮ ಬೇಡಿಕೆಗಳನ್ನು ಪೂರೈಸಬೇಕೆಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಎಚ್ಚರಿಕೆ : ಕರ್ನಾಟಕ ಬಸ್ ಗಳನ್ನು ಸುಟ್ಟು ಪುಂಡಾಟಿಕೆ ನಡೆಸಿದ ಮರಾಠಿಗರ ಕೃತ್ಯವನ್ನು ಖಂಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕನ್ನಡಿಗರ ಸಹನೆಯನ್ನು ಕೆಣಕಬೇಡಿರೆಂದು ಶಿವಸೇನೆಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಶಿವಸೇನೆ ಮತ್ತು ಎಂಇಎಸ್ ಬೆದರಿಕೆಗೆ ರಾಜ್ಯ ಬಗ್ಗುವುದಿಲ್ಲ ಎಂದಿದ್ದಾರೆ.

ಭಾಷೆ, ನೆಲ ವಿಚಾರದಲ್ಲಿ ಮಹಾರಾಷ್ಟ್ರದ ಒತ್ತಡಕ್ಕೆ ಮಣಿಯುವುದಿಲ್ಲ. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ. ಬೆಳಗಾವಿ ಉಳಿಸಿಕೊಳ್ಳಲು ಕನ್ನಡಿಗರು ಎಂಥ ಹೋರಾಟಕ್ಕೂ ಸಿದ್ಧ ಎಂದು ಅವರು ನುಡಿದರು. ಬೆಳಗಾವಿಯಲ್ಲಿ ಮರಾಠಿಗರು ಕನ್ನಡಿಗರೊಡನೆ ಬೆರೆತಿದ್ದಾರೆ. ಪ್ರಚೋದನಾತ್ಮಕ ಹೇಳಿಕೆ ನೀಡಿ ಮರಾಠಿಗರು ಮತ್ತು ಕನ್ನಡಿಗರ ನಡುವೆ ದಂಗೆ ಏಳುವಂತೆ ಮಾಡಬಾರದು ಎಂದು ಅವರು ಮನವಿ ಮಾಡಿಕೊಂಡರು.

ಸದನದಲ್ಲಿ ಪ್ರತಿಧ್ವನಿ : ಮಹಾರಾಷ್ಟ್ರದಲ್ಲಿ ಭಾನುವಾರ ಕೆಲ ಕಿಡಿಗೇಡಿಗಳು ಕರ್ನಾಟಕಕ್ಕೆ ಸೇರಿದ ಬಸ್ ಗೆ ಬೆಂಕಿ ಹಚ್ಚಿ ಸುಟ್ಟಿದ್ದಲ್ಲದೆ ಕೆಲ ಬಸ್ ಗಳ ಮೇಲೆ ಕಲ್ಲು ತೂರಿ ಜಖಂಗೊಳಿಸಿರುವ ಘಟನೆ ಇಂದು ಸದನದಲ್ಲಿಯೂ ಪ್ರತಿಧ್ವನಿಸಿತು. ಮರಾಠಿಗರ ಪುಂಡಾಟಿಕೆಗೆ ಕಡಿವಾಣ ಹಾಕಬೇಕೆಂದು ಜಯಚಂದ್ರ ಹೇಳಿಕೆಗೆ ಉತ್ತರವಾಗಿ, ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಬಸ್ ಸಂಚಾರವನ್ನು ಸ್ಥಗಿತಗೊಳಿಸಿರುವುದಾಗಿ ಸಾರಿಗೆ ಸಚಿವ ಆರ್. ಅಶೋಕ್ ಇಂದು ಹೇಳಿದರು. ಮಹಾರಾಷ್ಟ್ರಕ್ಕೆ ಸೇರಿದ ಎರಡು ಬಸ್ ಗಳನ್ನು ರಾಜ್ಯದ ಡಿಪೋಗಳಲ್ಲಿ ನಿಲ್ಲಿಸಿ ರಕ್ಷಣೆ ಒದಗಿಸಿರುವುದಾಗಿ ತಿಳಿಸಿದರು. ಅದೇ ರೀತಿ ಮಹಾರಾಷ್ಟ್ರ ಕೂಡ ಕರ್ನಾಟಕಕ್ಕೆ ಸ್ಪಂದಿಸಬೇಕೆಂದು ಕೇಳಿಕೊಂಡರು.

ಬೀದರ್ ನಲ್ಲಿಯೂ ಪ್ರತಿಭಟನೆ : ಮರಾಠಿಗರು ಹಿಂಸಾಚಾರಕ್ಕಿಳಿದಿರುವ ಘಟನೆಯನ್ನು ಪ್ರತಿಭಟಿಸಿ ಬೀದರ್ ನಲ್ಲಿಯೂ ಕನ್ನಡ ಕಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ಮರಾಠಿಗರ ಪುಂಡಾಟಿಕೆ ಮಿತಿಮೀರಿದರೆ ತಾವೂ ಪ್ರತಿಕ್ರಮ ತೆಗೆದುಕೊಳ್ಳಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು. ಮಹಾರಾಷ್ಟ್ರ ಮತ್ತು ಮರಾಠಿಗರ ವಿರುದ್ಧ ಘೋಷಣೆಗಳನ್ನು ಕೂಗಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X