ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದು ಮೌನದ ನಡುವೆ ಆಪ್ತರ ಸಭೆ

By Staff
|
Google Oneindia Kannada News

ಬೆಂಗಳೂರು, ಜ. 9: ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರ ಮನೆಯಲ್ಲಿ ಸಿದ್ದು ಬೆಂಬಲಿಗರ ಸಭೆ ಗುರುವಾರನಡೆಯಿತು. ವಿಶೇಷವೆಂದರೆ ಸಿದ್ದರಾಮಯ್ಯ ಅವರು ಈ ಸಭೆಗೆ ಗೈರು ಹಾಜರಾಗಿದ್ದರು. ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿರುವ ಈ ಸಭೆಯಲ್ಲಿ ರಾಜ್ಯದ ಅತಿರಥ ಮಹಾರಥ ನಾಯಕರುಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ.

ತೆಲುಗು ನಟ ಚಿರಂಜೀವಿ ಅವರ ಪ್ರಜಾರಾಜ್ಯಂ ಪಕ್ಷ ಸೇರ್ಪಡೆ ಬಗ್ಗೆ ಸಿದ್ದು ಅಲ್ಲಗೆಳೆದ ಮೇಲೆ, ಮುಂದಿನ ಹೆಜ್ಜೆ ಯಾವುದಿರಬಹುದು ಎಂಬ ಸಹಜ ಕುತೂಹಲ ಎಲ್ಲರಲ್ಲಿತ್ತು. ಆಂಧ್ರದಲ್ಲಿ ಕುರುಬ ಜನಾಂಗದ ಬೃಹತ್ ಸಮಾವೇಶಕ್ಕೆ ತಮಗೆ ಆಹ್ವಾನ ಬಂದಿರುವುದು ನಿಜ. ಆ ಸಂದರ್ಭದಲ್ಲಿ ಚಿರಂಜೀವಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಸಿದ್ದರಾಮಯ್ಯ ಅವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನುಡಿದಿದ್ದರು. ಸಿದ್ದು ಹಾಗೂ ಚಿರು ಭೇಟಿ ಬಗ್ಗೆ ಅವರ ಶಿಷ್ಯ ಸಚಿವ ವರ್ತೂರು ಪ್ರಕಾಶ್ ಕೂಡ ಸ್ಪಷ್ಟಪಡಿಸಿದ್ದರು.

ಇದೆಲ್ಲ ನಡೆದ ನಂತರ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರ ಮನೆಯಲ್ಲಿ ಸಿದ್ದು ಬೆಂಬಲಿಗರಾದ ಹೆಚ್ ವೈ ಮೇಟಿ, ಸತೀಶ್ ಜಾರಕಿಹೊಳಿ, ಬಿ.ಆರ್ ಪಾಟೀಲ್ ಮುಂತಾದ ನಾಯಕರುಗಳು ಸಭೆ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.

ಜ. 9 ಅಥವಾ ಜ.10 ರಂದು ಮತ್ತೆ ಸಭೆ ಸಾಧ್ಯತೆಯಿದೆ. ಆದರೆ ಸಿದ್ದು ಇನ್ನೂ ತಮ್ಮ ನಿಲುವು ಸ್ಪಷ್ಟಪಡಿಸಿಲ್ಲ.ಕಾಂಗ್ರೆಸ್ಸಿಗರು ಸಿದ್ದುವನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಜಿಜ್ಞಾಸೆಯಲ್ಲಿದ್ದಾರೆ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಮುಖ ಸ್ಥಾನವೊಂದನ್ನು ಕೊಟ್ಟು ಸಿದ್ದು ಕೋಪ ಶಮನಗೊಳಿಸುತ್ತಾರೆ ಎಂಬ ಸುದ್ದಿಯಿದೆ.

ಆದರೆ ಮೂರು ವರ್ಷದಲ್ಲಿ ಸಿಗದಿರುವ ಸ್ಥಾನ ಮಾನ ಈಗ ಸಿಗುತ್ತದೆ ಎಂಬ ನಂಬಿಕೆ ಸಿದ್ದು ಬೆಂಬಲಿಗರಿಲ್ಲ. 3-4 ತಿಂಗಳ ಅವಧಿಗೆ ಸಚಿವ ಸ್ಥಾನ ಸಿಕ್ಕರೂ ಪ್ರಯೋಜನವಿಲ್ಲ. ಸಿದ್ದು ಜನಪ್ರಿಯತೆಯನ್ನು ದುರುಪಯೋಗ ಮಾಡಿಕೊಳ್ಳುವುದು ಕಾಂಗ್ರೆಸ್ಸಿಗರ ಹುನ್ನಾರ ಎಂದು ಸಿದ್ದು ಬೆಂಬಲಿಗರು ಗುಡುಗುತ್ತಿದ್ದಾರೆ. ಆದರೆ ಮಾತಾಡೊ ಸಮಯದಲ್ಲಿ ಮೌನವಾಗಿದ್ದು, ಮೌನವಹಿಸಬೇಕಾದ ಸಮಯದಲ್ಲಿ ಹೆಚ್ಚು ಮಾತಾಡುವ ಖ್ಯಾತಿ ಹೊಂದಿರುವ ಮಾನ್ಯ ಸಿದ್ದರಾಮಯ್ಯನವರು ಸದ್ಯ ಮೌನವ್ರತ ಮಾಡುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X