ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ ಮೇಳ : ಬಚ್ಚೇಗೌಡ

By *ಚೇತನಾ, ಮೈಸೂರು
|
Google Oneindia Kannada News

ಮೈಸೂರು, ಜ. 4: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಹೇಳಿದರು.

ಮೈಸೂರಿನ ಚಾಮುಂಡಿ ವಿಹಾರ ಒಳ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಕೌಶಲ್ಯ ಅಭಿವೃದ್ಧಿ ಮತ್ತು ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಕೌಶಲ್ಯ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ ಮತ್ತು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಈ ಮೇಳವನ್ನು ಆಯೋಜಿಸಿವೆ.

ಬೆಂಗಳೂರು, ಹುಬ್ಬಳ್ಳಿ ನಂತರ ಈಗ ಮೈಸೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಿದೆ. ಇದೇ ತಿಂಗಳ ಅಂತ್ಯಕ್ಕೆ ಗುಲ್ಬರ್ಗಾದಲ್ಲಿ ಹಾಗೂ ಫೆ.2ನೇ ವಾರದಲ್ಲಿ ಮಂಗಳೂರಿನಲ್ಲಿ ಮೇಳ ಆಯೋಜಿಸಲಾಗುತ್ತಿದೆ. ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಮೇಳ ಆಯೋಜಿಸಲಾಗುವುದು ಎಂದು ಸಚಿವರು ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿಯೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೌಶಲ್ಯ ಆಯೋಗ ರಚಿಸಿ, ಯುವಜನರಲ್ಲಿ ಉದ್ಯೋಗ ಪಡೆಯಲು ಅಗತ್ಯವಾದ ಕೌಶಲ್ಯ ಹೆಚ್ಚಿಸಲು ತರಬೇತಿಗಳ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ 60 ಸಾವಿರ, ರಾಜ್ಯದ ಇತರೆಡೆ ಸುಮಾರು 40 ಸಾವಿರ ಕೈಗಾರಿಕಾ ಘಟಕಗಳು ಇದ್ದು , ಇವುಗಳಿಗೆ ತರಬೇತಿ ಪಡೆದ ಯುವಜನರ ಅವಶ್ಯಕತೆ ಇದೆ. ಇದಕ್ಕಾಗಿಯೇ ರಾಜ್ಯದಲ್ಲಿ 941 ಕೈಗಾರಿಕಾ ತರಬೇತಿ ಸಂಸ್ಥೆಗಳು (ಐ.ಟಿ.ಐ) ಕಾರ್ಯನಿರ್ವಹಿಸುತ್ತಿದ್ದು, ಈ ಸಂಖ್ಯೆಯನ್ನು ಇನ್ನೆರಡು ವರ್ಷದಲ್ಲಿ ಒಂದು ಸಾವಿರಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದರು.

ಮೈಸೂರಿನ ಉದ್ಯೋಗ ಮೇಳದಲ್ಲಿ 4 ಸಾವಿರ ಜನರಿಗೆ ಉದ್ಯೋಗ ದೊರಕಲಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಮೇಳಗಳಲ್ಲಿ 5891 ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿದ್ದು , 9945 ಅಭ್ಯರ್ಥಿಗಳನ್ನು ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಸಚಿವ ಬಚ್ಚೇಗೌಡ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೋಕಸಭಾ ಸದಸ್ಯ ಸಿ.ಹೆಚ್. ವಿಜಯಶಂಕರ್ ಮಾತನಾಡಿ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು ಖಾಯಂ ಮಾಹಿತಿ ಕೇಂದ್ರ ತೆರೆಯಬೇಕೆಂದು ಸಲಹೆ ಮಾಡಿದರು.

ಜೀವನದಲ್ಲಿ ಯುವಕರು ಬದುಕುವ ಕಲೆ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಎಸ್.ಎ. ರಾಮದಾಸ್ ಹೇಳಿದರು. ವರ್ಷಪೂರ್ತಿ ಉದ್ಯೋಗಕ್ಕಾಗಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಆಗಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ತನ್ವೀರ್ ಸೇಠ್ ಸಲಹೆ ಮಾಡಿದರು. ಸಮಾರಂಭದಲ್ಲಿ ವಿಧಾನಸಭಾ ಸದಸ್ಯರಾದ ಸತ್ಯನಾರಾಯಣ, ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯರಾದ ಸಿದ್ಧರಾಜು, ತೋಂಟದಾರ್ಯ ಭಾಗವಹಿಸಿದ್ದರು.

ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ರಮೇಶ ಝಳಕಿ ಸ್ವಾಗತಿಸಿದರು. ಕಾರ್ಮಿಕ ಇಲಾಖೆ ಕಾರ್ಯದರ್ಶಿ ಸಿ.ಆರ್. ಚಿಕ್ಕಮಠ, ಹೈದ್ರಾಬಾದ್‌ನ ಆರ್.ಡಿ.ಎ.ಟಿ. ನಿರ್ದೇಶಕ ಎ.ಜೆ. ಅಮಲನ್ ಉಪಸ್ಥಿತರಿದ್ದರು. ಕೌಶಲ್ಯ ಆಯೋಗದ ಕಾರ್ಯನಿರ್ವಾಹಕ ನಿರ್ದೇಶಕ ವಿಷ್ಣುಕಾಂತ ಚಟ್ಟಳ್ಳಿ ವಂದಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X