ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗೀತ ವಿಶ್ವವಿದ್ಯಾಲಯಕ್ಕೆ ಬಾಲಮುರಳಿಕೃಷ್ಣ ಆಗ್ರಹ

By Staff
|
Google Oneindia Kannada News

Balamurali Krishna accepts Mallikarjun Mansur award in Dharwad
ಹುಬ್ಬಳ್ಳಿ : ಹಿಂದೂಸ್ತಾನಿ ಸಂಗೀತಕ್ಕೆ ತನ್ನ ಜೀವನವನ್ನು ಸಮರ್ಪಿಸಿಕೊಂಡ ಖ್ಯಾತ ಗಾಯಕ ದಿವಂಗತ ಮಲ್ಲಿಕಾರ್ಜುನ ಮನ್ಸೂರ್ ಅವರ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಖ್ಯಾತ ಸಂಗೀತಗಾರ ಡಾ. ಎಂ. ಬಾಲಮುರಳಿ ಕೃಷ್ಣ ಅವರು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕಳೆದ ರಾತ್ರಿ ಧಾರವಾಡದಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡುತ್ತಿದ್ದರು. ಸಂಗೀತ ಮತ್ತು ಶಿಕ್ಷಣಕ್ಕೆ ವಿಶೇಷ ಸ್ಥಾನ ಕಲ್ಪಿಸಿರುವ ಧಾರವಾಡದಲ್ಲಿ ಸ್ಥಾಪಿಸಿದರೆ ಸಂಗೀತಕ್ಕೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಬಾಲಮುರಳಿ ಕೃಷ್ಣ ಅಭಿಪ್ರಾಯಪಟ್ಟರು. ಮುತ್ತಿನ ಹಾರ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಹಾಡಿರುವ ಅವರು ಸಂಗೀತಕ್ಕೆ ಯಾವುದೇ ಭಾಷೆಯ ಅಡ್ಡಗೋಡೆ ಇರುವುದಿಲ್ಲ ಎಂದು ಹೇಳಿದರು. ಶುಕ್ರವಾರ ಅವರು ಹುಬ್ಬಳ್ಳಿಯಲ್ಲಿ ನೆಲೆಸಿರುವ ಇನ್ನೊರ್ವ ವಿದುಷಿ ಗಂಗೂಬಾಯಿ ಹಾನಗಲ್ ಅವರ ಮನೆಗೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು.

***

ಭ್ರಷ್ಟ ಆದಾಯ ತೆರಿಗೆ ಅಧಿಕಾರಿ ಸಿಬಿಐ ಬಲೆಗೆ

ಬೆಂಗಳೂರು : ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆ ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐನ ಭ್ರಷ್ಟಚಾರ ವಿರೋಧಿ ಪಡೆಯ ಬಲೆಗೆ ಬಿದ್ದಿದ್ದಾರೆ. 2005 ಮತ್ತು 2006ನೇ ಸಾಲಿನ ಆದಾಯ ತೆರಿಗೆ ಪತ್ರವನ್ನು ಸ್ವೀಕರಿಸಲು ಕೆ. ಚಂದ್ರಿಕಾ ಎಂಬುವವರು ಹತ್ತು ಲಕ್ಷ ರು. ಲಂಚ ಕೇಳಿದ್ದರು. ಈ ಒಪ್ಪಂದದ ಭಾಗವಾಗಿ ಚಂದ್ರಿಕಾ ಅವರು ದೂರು ನೀಡಿದ ವ್ಯಕ್ತಿಯಿಂದ 2 ಲಕ್ಷ ಸ್ವೀಕರಿಸುತ್ತಿದ್ದಾಗ ಸಿಬಿಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಚಂದ್ರಿಕಾ ಅವರ ಕಚೇರಿ ಮತ್ತು ಮನೆಯ ಮೇಲೆ ಕೂಡ ಅಧಿಕಾರಿಗಳು ದಾಳಿ ಮಾಡಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅವರನ್ನು 21ನೇ ಅಡಿಷನಲ್ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಧಿಶರ ಮುಂದೆ ಹಾಜರುಪಡಿಸಲಾಯಿತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

***

ಶಂಕಿತ ಉಗ್ರನ ಬಂಧನ

ಮಂಗಳೂರು : ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಉಡುಪಿಯಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶಂಕಿತ ವ್ಯಕ್ತಿಯನ್ನು ವಿಚಾರಣೆಗಾಗಿ ಗೌಪ್ಯ ಜಾಗಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಪಶ್ಚಿಮ ರೇಂಜ್ ನ ಐಜಿಪಿ ಆಗಿರುವ ಎಎಂ ಪ್ರಸಾದ್ ತಿಳಿಸಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಕ್ರಿಯಾಶೀಲವಾಗಿರುವ ನಕ್ಸಲೀಯ ಸಂಘಟನೆಯೊಂದಿಗೆ ಬಂಧಿತ ವ್ಯಕ್ತಿ ಸಂಪರ್ಕ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ.

***

ಚಾಮರಾಜನಗರದಲ್ಲಿ ಕನಿಷ್ಠ ಉಷ್ಣಾಂಶ

ಚಾಮರಾಜನಗರ : ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಚಳಿ ರಾಜ್ಯದ ದಕ್ಷಿಣ ಒಳಭಾಗಗಳಲ್ಲಿ ಜನ ಬೆಚ್ಚಗಿನ ದಿರಿಸಿಗೆ ಮೊರೆ ಹೋಗುವಂತೆ ಮಾಡಿದೆ. ಚಾಮರಾಜನಗರದಲ್ಲಿ 9.5 ಡಿಗ್ರಿ ಸೆಲ್ಷಿಯಸ್ ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಜನವರಿ ಮೊದಲ ವಾರದವರೆಗೆ ಚಳಿ ತನ್ನ ಅಧಿಪತ್ಯವನ್ನು ಕಾಪಾಡಿಕೊಳ್ಳಲಿದೆ. ನಂತರ ಬಿಸಿಲು ರಾಜ್ಯದ ಮೇಲೆ ತನ್ನ ಸವಾರಿ ಪ್ರಾರಂಭಿಸಲಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X