ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ : ಹಣಬಲವೋ, ಆತ್ಮಸಾಕ್ಷಿಯ ಬಲವೋ

By Staff
|
Google Oneindia Kannada News

ಬೆಂಗಳೂರು, ಡಿ. 26 : ರಾಜ್ಯದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ನಡೆಯಲಿರುವ ಉಪ ಚುನಾವಣೆಯಲ್ಲಿ ಹರಿದಿರುವ ಹಣ, ಮದಿರೆ, ಸೀರೆಗಳ ಕಟ್ಟುಗಳು 74 ಅಭ್ಯರ್ಥಿಗಳ ಭವಿಷ್ಯವನ್ನು ಮತ್ತು ಮತದಾರರ ನಾಡಿ ಮಿಡಿತವನ್ನು ನಿರ್ಧರಿಸಲಿದೆ. ಗೆಲ್ಲುವುದು ಹಣಬಲವೋ, ಆತ್ಮಸಾಕ್ಷಿಯ ಬಲವೋ ಎಂಬುದು ನಾಳೆ ನಿರ್ಧಾರವಾಗಲಿದೆ.

ಇಲ್ಲಿ ಯಾವ ಪಕ್ಷದ ಪ್ರತಿಷ್ಠೆಯೂ ಪಣಕ್ಕಿಲ್ಲ. ಎಲ್ಲ ಪಕ್ಷಗಳೂ ಪೈಪೋಟಿಗೆ ಬಿದ್ದವರಂತೆ ಚುನಾವಣಾ ನಿಮಯಗಳನ್ನು ಗಾಳಿಗೆ ತೂರಿವೆ, ಕಾಸಿಗೆ ಕಿಮ್ಮತ್ತಿಲ್ಲದಂತೆ ದುಡ್ಡನ್ನು ಬಿಸಾಕಿವೆ, ಡಿಸೆಂಬರ್ 31 ಬರುವ ಮೊದಲೇ ಮದ್ಯದ ಹೊಳೆಯಲ್ಲಿ ಜನರನ್ನು ತೇಲಾಡಿಸಿವೆ, ಸೀರೆಯನ್ನುಡಿಸಿ ಹೆಂಗಳೆಯರ ಮನಸೂರೆ ಮಾಡಿವೆ. ಯಾರೂ ಮೇಲಿಲ್ಲ, ಯಾರೂ ಕೀಳಿಲ್ಲ. ಯಾರೇ ಗೆದ್ದರೂ ಗೆಲುವು ಹಣದ್ದಾಗಲಿದೆ, ಸೋಲು ಮಾತ್ರ ಪ್ರಜಾತಂತ್ರದ್ದು.

ಮಧುಗಿರಿ, ಮದ್ದೂರು, ತುರುವೇಕೆರೆ, ದೊಡ್ಡಬಳ್ಳಾಪುರ, ಅರಬಾವಿ, ದೇವದುರ್ಗ, ಕಾರವಾರ ಮತ್ತು ಹುಕ್ಕೇರಿ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 74 ಅಭ್ಯರ್ಥಿಗಳು ಕಣದಲ್ಲಿದ್ದು 16,69,837 ಮತದಾರರು ಮತ ಚಲಾಯಿಸಲಿದ್ದಾರೆ. ಒಟ್ಟು 1613 ಮತಗಟ್ಟೆಗಳಿದ್ದು ತುಮಕೂರು ಜಿಲ್ಲೆಯ ಮಧುಗಿರಿ ಅತಿ ಸೂಕ್ಷ್ಮ ಮತಕ್ಷೇತ್ರವೆನಿಸಿದೆ. ಮದ್ದೂರು ಹೊರತುಪಡಿಸಿ ಉಳಿದ ಏಳು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿರುವುದು ಡಾ. ಬಿ.ಎಸ್.ಯಡಿಯೂರಪ್ಪ ನಡೆಸಿದ 'ಆಪರೇಶನ್ ಕಮಲ'ದ ಫಲಿತಾಂಶ.

ಆನಂದ ಆಸ್ನೋಟಿಕರ್ (ಕಾರವಾರ), ಉಮೇಶ್ ಕತ್ತಿ (ಹುಕ್ಕೇರಿ), ಶಿವಾನಂದ ನಾಯ್ಕ್ (ದೇವದುರ್ಗ), ಬಾಲಚಂದ್ರ ಜಾರ್ಕಿಹೊಳಿ (ಅರಬಾವಿ), ಸಿ. ಚೆನ್ನಿಗಪ್ಪ (ಮಧುಗಿರಿ) ಇವರ ರಾಜಕೀಯ ಹಣೆಬರಹವನ್ನು ಮತದಾರರು 27ರಂದು ಬರೆಯಲಿದ್ದಾರೆ. ಬೆಳಿಗ್ಗೆ 7ರಿಂದ ಸಾಯಂಕಾಲ 5ರವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 30ರಂದು ಮತ ಎಣಿಕೆ ನಡೆಯಲಿದೆ.

ಆಯೋಗ ಸನ್ನದ್ಧ : ಎಲ್ಲ ಎಂಟು ಕ್ಷೇತ್ರಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಅಭೂತಪೂರ್ವ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಧುಗಿರಿ ಕ್ಷೇತ್ರದಲ್ಲಿ ಪೊಲೀಸ್ ಮತ್ತು ಹೋಂ ಗಾರ್ಡ್ ಗಳ ಭದ್ರ ಕೋಟೆ ನಿರ್ಮಿಸಲಾಗಿದೆ. ಮುಕ್ತ ಮತ್ತು ಶಾಂತಿಯುತ ಮತದಾನ ನಡೆಸಲು ಪೊಲೀಸ್ ಪಡೆ ಸನ್ನದ್ಧವಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಇನ್ಫಂಟ್ ತಿಳಿಸಿದ್ದಾರೆ.

ಪ್ರತಿ ಮತಗಟ್ಟೆಯಲ್ಲಿ 5ರಿಂದ 6 ಜನ ಪೊಲೀಸರನ್ನು ನಿಯೋಜಿಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಭದ್ರತೆಯ ಉಸ್ತುವಾರಿ ನೀಡಲಾಗಿದೆ. ಕೇಂದ್ರದಿಂದ ಅರೆಸೇನಾಪಡೆ ಬಂದಿಲ್ಲವಾದ್ದರಿಂದ ಕರ್ನಾಟಕ ರಿಸರ್ವ್ ಪೊಲೀಸ್ ಪಡೆಯೇ ಭದ್ರತೆಯನ್ನು ನೋಡಿಕೊಳ್ಳಲಿದೆ.

ಭಾರೀ ಹಣ ವಶ :
ಚುನಾವಣಾ ಅಕ್ರಮ ನಡೆಸದಂತೆ ಕೇಂದ್ರ ಚುನಾವಣಾ ಆಯೋಗ ಭಾರೀ ಕಟ್ಟಪ್ಪಣೆ ವಿಧಿಸಿದ್ದರೂ ಎಲ್ಲ ಪಕ್ಷಗಳ ಕಾರ್ಯಕರ್ತರು ಚುನಾವಣಾ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಚುನಾವಣಾ ಅಕ್ರಮ ನಡೆಸಿದ್ದಕ್ಕಾಗಿ ಒಟ್ಟು 155 ಪ್ರಕರಣಗಳನ್ನು ದಾಖಲಿಸಲಾಗಿದೆ. ಚುನಾವಣಾಧಿಕಾರಿಗಳು ಇಲ್ಲಿಯವರೆಗೆ 38 ಲಕ್ಷ ರು. ನಗದನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಮಧ್ಯ, ಸೀರೆ ಸೇರಿದಂತೆ ಒಟ್ಟು ಒಂದೂವರೆ ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರತಿಷ್ಠೆಯ ಕಣ, ಹೊಳೆಯಾಯಿತು ಹಣ : ಗುರುವಾರ ಸಂಜೆ ಎಲ್ಲ ಮತಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಕೊನೆ ಬಿದ್ದಿದ್ದರೂ, ಎಲ್ಲ ಪಕ್ಷಗಳು ನಾನಾ ರೂಪದಲ್ಲಿ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿರುವುದು ಶುಕ್ರವಾರ ಕೂಡ ಕಂಡುಬಂದಿದೆ. ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಅನಿತಾ ಕುಮಾರಸ್ವಾಮಿ ಕಣಕ್ಕಿಳಿದಿದ್ದರಿಂದ ಭಾರೀ ಪ್ರತಿಷ್ಠೆ(?)ಯ ಕಣವಾಗಿರುವ ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಯೆನಿಸಿರುವ ಬಿಜೆಪಿಯ ಸಿ. ಚೆನ್ನಿಗಪ್ಪ ಅವರ ಮಗ ಹಣ ಹಂಚುತ್ತಿರುವಾಗ ಪೊಲೀಸ್ ಕಣ್ಣಿಗೆ ಬಿದ್ದು ಪರಾರಿಯಾದ ಘಟನೆ ಇಂದು ನಡೆದಿದೆ. ಮೂವರು ಬಿಜೆಪಿ ಕಾರ್ಯಕರ್ತರನ್ನು ಚುನಾವಣಾ ಅಕ್ರಮ ನಡೆಸಿದ್ದಕ್ಕಾಗಿ ಬಂಧಿಸಲಾಗಿದ್ದು, ಎರಡೂವರೆ ಲಕ್ಷ ರು. ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದವೆನ್ನಲಾದ 20 ಲಕ್ಷ ರು. ನಗದನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದು ನಾಲ್ವರನ್ನು ಬಂಧಿಸಿದ್ದಾರೆ. ಹುಕ್ಕೇರಿಯಲ್ಲಿ ಕೂಡ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದಿದೆ. ರಾಜ್ಯದ ಪೊಲೀಸ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ, ಎಲ್ಲ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತದಾರರ ಆಕ್ರೋಶ : ಆಡಳಿತ ಪಕ್ಷ ಬಿಜೆಪಿ ನಡೆಸಿದ 'ಆಪರೇಶನ್ ಕಮಲ' ಇತರೆ ಪಕ್ಷದ ಶಾಸಕರನ್ನು ಸೆಳೆಯುವ ತಂತ್ರವಾಗಿದ್ದರೂ ಮತದಾರರ ಸಿಟ್ಟಿಗೆ ಕಾರಣವಾಗಿದೆ. ನಂಬಿಕೆಯಿಟ್ಟು ಗೆಲ್ಲಿಸಿದ್ದ ತುರುವೇಕೆರೆ ಶಾಸಕ ಚಿತ್ರನಟ ಜಗ್ಗೇಶ 'ಆಪರೇಶನ್' ಮಾಡಿಸಿಕೊಂಡು ಬಿಜೆಪಿಗೆ ಜಿಗಿದಿದ್ದರಿಂದ ಮತದಾರ ಎತ್ತ ತಿರುಗಲಿದ್ದಾನೆ ಎನ್ನುವುದು ನಾಳೆ ನಿರ್ಧಾರವಾಗಲಿದೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಹಣ ಹಂಚುತ್ತಿದ್ದ ಚೆನ್ನಿಗಪ್ಪ ಮಗ ಪರಾರಿ
ನನ್ನ ರಾಜಕೀಯ ಭವಿಷ್ಯ ನಿಮ್ಮ ಕೈಲಿ: ಎಚ್ಡಿಕೆ
ಮಧುಗಿರಿ ಬಳಿ ಕರಡಿ ದಾಳಿಗೆ ಹೋಂಗಾರ್ಡ್ ಬಲಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X