ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ವಸ್ತು ತ್ಯಜಿಸಿ, ಸ್ವದೇಶಿ ಬಳಸಿ :ಶೋಭಾ

By * ನಿಸ್ಮಿತಾ
|
Google Oneindia Kannada News

Minister Shobha Chants Swadeshi Mantra
ಸ್ತ್ರೀ ಶಕ್ತಿ ಹಾಗೂ ಸ್ವ-ಸಹಾಯ ಗುಂಪುಗಳಿಗೆ ಹೊರ ರಾಜ್ಯಗಳಲ್ಲಿ ಕೌಶಲ್ಯ ತರಬೇತಿ ಮತ್ತು ವಿನಿಮಯ ಕಾರ್ಯಕ್ರಮ : ಶೋಭಾ ಕರಂದ್ಲಾಜೆ

ಮುಂದಿನ ವರ್ಷದಿಂದ ಸ್ತ್ರೀ ಶಕ್ತಿ ಹಾಗೂ ಸ್ವ -ಸಹಾಯ ಗುಂಪುಗಳಿಗೆ ಹೊರ ರಾಜ್ಯಗಳಲ್ಲಿ ಅಲ್ಲಿನ ಕರ ಕುಶಲ ಹಾಗೂ ಗುಡಿ ಕೈಗಾರಿಕೆಗಳಲ್ಲಿನ ವಿಶೇಷತೆ ಕುರಿತ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ವಿನಿಮಯ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ . ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಮುಖ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಶನಿವಾರ ಪ್ರಕಟಿಸಿದರು.

ನಗರದ ಜಯನಗರ ಐದನೇ ಬಡಾವಣೆಯಲ್ಲಿರುವ ಶಾಲಿನಿ ಆಟದ ಮೈದಾನದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಸಹಯೋಗದೊಡನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆಯಡಿ ಆಯೋಜಿಸಿರುವ " ಕಾವೇರಿ ಸರಸ್ " ರಾಷ್ಟ್ರೀಯ ಗುಡಿ ಕೈಗಾರಿಕೆಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಳೆದ ಹತ್ತು ವರ್ಷಗಳಿಂದ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವ್ಯವಸ್ಥೆ ಗೊಳಿಸುತ್ತಿರುವ ಕಾವೇರಿ ಸರಸ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮುಂದಿನ ವರ್ಷದಿಂದ ವಿಭಾಗಾವಾರು ಆಯೋಜಿಸಿ ಈ ಮಾರಾಟ ಮೇಳದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿ ಇದರಲ್ಲಿ ಪಾಲ್ಗೊಳ್ಳುತ್ತಿರುವ ಸ್ತ್ರೀ ಶಕ್ತಿ ಮತ್ತು ಸ್ವ ಸಹಾಯ ಗುಂಪುಗಳನ್ನು ಮತ್ತಷ್ಟು ಸದೃಢಗೊಳಿಸುವತ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ತಲಾ 25 ಲಕ್ಷ ರು ವೆಚ್ಚದಲ್ಲಿ ಸ್ತ್ರೀ ಶಕ್ತಿ ಭವನಗಳನ್ನು ನಿರ್ಮಿಸಿ ಸ್ತ್ರೀ ಶಕ್ತಿ ಮತ್ತು ಸ್ವ -ಸಹಾಯ ಗುಂಪುಗಳ ಸದಸ್ಯರಿಗೆ ತರಬೇತಿ ನೀಡುವತ್ತ ಹಾಗೂ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವತ್ತ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದೂ ಕುಮಾರಿ ಕರಂದ್ಲಾಜೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇ ಗೌಡ ಅವರು ಇನ್ನಾದರೂ ವಿದೇಶಿ ವಸ್ತುಗಳ ವ್ಯಾಮೋಹ ತೊರೆದು ಸ್ವದೇಶಿ ವಸ್ತುಗಳ ಖರೀದಿ ಚಳುವಳಿಗೆ ಚಾಲನೆ ನೀಡಬೇಕೆಂದು ಆಶಿಸಿದರು.

ಈ ಮುನ್ನ, ತಮ್ಮ ಸ್ವಾಗತ ಭಾಷಣದಲ್ಲಿ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎ. ಎಸ್. ಶ್ರೀಕಾಂತ್ ಅವರು ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆ ಅಸ್ತಿತ್ವಕ್ಕೆ ಬಂದ ಕಳೆದ ಒಂದು ದಶಕದಿಂದ ಬಡತನ ರೇಖೆಗಿಂತಲೂ ಕೆಳಗಿರುವ ರಾಜ್ಯದ 3.97 ಲಕ್ಷ ಗ್ರಾಮೀಣ ಕುಟುಂಬಗಳು ಲಾಭ ಪಡೆದಿವೆ ಎಂದರು. ಅಲ್ಲದೆ, ನಗರ ಪ್ರದೇಶದ ಜನತೆಗೆ ಗ್ರಾಮೀಣ ಉತ್ಪನ್ನಗಳ ಸೊಬಗನ್ನು ಪರಿಚಯಿಸುವುದರೊಂದಿಗೆ ಬಡತನ ರೇಖೆಗಿಂತಲೂ ಕೆಳಗಿರುವ ಗ್ರಾಮೀಣ ಕುಟುಂಬಗಳ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಡುವ ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆ ಅತ್ಯಂತ ಯಶಸ್ವಿ ಯೋಜನೆಯಾಗಿದೆ ಎಂದು ಬಣ್ಣಿಸಿದರು.

ಜಯನಗರ ವಿಧಾನ ಸಭಾ ಸದಸ್ಯ ಬಿ. ಎನ್. ವಿಜಯ ಕುಮಾರ್, ರಾಜ್ಯ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ನಾರಾಯಣ ರೆಡ್ಡಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಿ. ರವಿ ಕುಮಾರ್, ಚಿತ್ರ ನಟ ಯಶ್, ಮೋಹಕ ತಾರೆ ಹರಿ ಪ್ರಿಯ ಅವರೂ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗುಡಿ ಕೈಗಾರಿಕೆಗಳ ಈ ವಸ್ತು ಪ್ರದರ್ಶನದಲ್ಲಿ ರಾಷ್ಟ್ರದ 14 ರಾಜ್ಯಗಳು ಹಾಗೂ ರಾಜ್ಯದ ಎಲ್ಲಾ 29 ಜಿಲ್ಲೆಗಳ 210 ಮಳಿಗೆಗಳು ವೈವಿಧ್ಯಮಯ ಉತ್ಪನ್ನಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವಿರುವ ಈ ವಸ್ತು ಪ್ರದರ್ಶನಕ್ಕೆ ಪ್ರವೇಶ ಉಚಿತ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X