ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ರೈತರ ಚೀನಾ ಅಧ್ಯಯನ ಪ್ರವಾಸ

By Staff
|
Google Oneindia Kannada News

ಬೆಂಗಳೂರು, ಡಿ. 21 ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 'ಕರ್ನಾಟಕ ಕೃಷಿ ಮಿಷನ್' ಯೋಜನೆಯಡಿ 91 ರೈತರಿಗೆ ಚೀನಾ ದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಳ್ಳುವ ಅವಕಾಶ ಒದಗಿಸಿದೆ. ಡಿಸೆಂಬರ್ 22 ರಂದು 91 ರೈತರ ಮೊದಲ ತಂಡ ಚೀನಾಕ್ಕೆ ತೆರಳಲಿದ್ದು, ಇವರನ್ನು ಕೃಷಿ ಸಚಿವ ಎಸ್.ಎ. ರವೀಂದ್ರನಾಥ್ ಅವರು ಬೀಳ್ಕೊಡಲಿದ್ದಾರೆ.

ಒಂದು ವಾರದ ಅವಧಿಯ ಈ ಪ್ರವಾಸದಲ್ಲಿ ಚೀನಾ ದೇಶದ ಹಲವು ಕೃಷಿ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳು, ಆಹಾರ ಸಂಸ್ಕರಣ ಉದ್ದಿಮೆಗಳಿಗೆ ರೈತರು ಭೇಟಿ ನೀಡಲಿದ್ದಾರೆ. ಕ್ಸಿಯಾವೊಟಾಂಗ್‌ಶಾನ್ ಪಟ್ಟಣದ ಕ್ಸಿಯಾವೊಟಾಂಗ್‌ಶಾನ್ ಆಧುನಿಕ ಕೃಷಿ ಸಂಸ್ಥೆಯು ಕೈಗಾರಿಕಾ ಉದ್ಯಾನಗಳ ಮಾದರಿ, ಕೃಷಿ ಉಪಕರಣಗಳ ನಿರ್ಮಾಣ, ಸಂಶೋಧನೆ, ಪುಷ್ಪ ಕೃಷಿ, ಆಹಾರ ಸಂಸ್ಕರಣೆ, ಮಾಂಸದ ಕುರಿ ಸಾಕಣೆಯೊಂದಿಗೆ ಉತ್ತಮ ಗುಣಮಟ್ಟದ ಬೀಜೋತ್ಪಾದನೆ, ಕೃಷಿ ಯಾಂತ್ರೀಕರಣ, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳ ಕುರಿತ ವಿವಿಧ ವಿಭಾಗಗಳನ್ನು ಹೊಂದಿದ್ದು, ರೈತರು ಈ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ.

ರಾಜ್ಯದ ರೈತರು ಹ್ಯುಇಯವಾನ್ ಬೆವರೇಜ್ ಅಂಡ್ ಫುಡ್ ಗ್ರೂಪ್ ಕಂಪೆನಿಯಲ್ಲಿ ಹಣ್ಣು ಮತ್ತು ತರಕಾರಿ ರಸ ಉತ್ಪಾದನೆಯನ್ನು ವೀಕ್ಷಿಸಲಿದ್ದಾರೆ.
ಇದಲ್ಲದೆ ಶುನ್‌ಯಿ-ಹೈ-ಟೆಕ್ ಕೃಷಿ ವಲಯ, ಬೀಜಿಂಗ್ ಕೃಷಿ ವಿಶ್ವವಿದ್ಯಾಲಯ, ಶಾಂಘೈ ಕೃಷಿ ಯಂತ್ರೋಪಕರಣ ಸಂಶೋಧನಾ ಸಂಸ್ಥೆ, ಸುಂಕಿಯಾವೊ ಆಧುನಿಕ ಕೃಷಿ ಅಭಿವೃದ್ಧಿ ವಲಯ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗೂ ಭೇಟಿ ನೀಡಿ ಅಧ್ಯಯನ ನಡೆಸಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ.
ಇದಲ್ಲದೆ ಚೀನಾದ ಗ್ರಾಮವೊಂದಕ್ಕೆ ಭೇಟಿ ನೀಡಿ ಅಲ್ಲಿನ ರೈತರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆಯುವ ಕಾರ್ಯಕ್ರಮವನ್ನೂ ನಿಗದಿಗೊಳಿಸಲಾಗಿದೆ.

ಕೃಷಿ ಕ್ಷೇತ್ರದಲ್ಲಿ ಸುಧಾರಣೆಯ ಉದ್ದೇಶದಿಂದ ಏರ್ಪಡಿಸಲಾಗಿರುವ ಈ ಪ್ರವಾಸಕ್ಕಾಗಿ ಆಯವ್ಯಯದಲ್ಲಿ ಒಟ್ಟು ರೂ. 5 ಕೋಟಿ ನಿಗದಿ ಪಡಿಸಲಾಗಿದೆ. ಪ್ರತಿ ತಾಲ್ಲೂಕಿನಿಂದ ಮೂವರು ರೈತರನ್ನು ಆಯ್ಕೆ ಮಾಡುವಂತೆ ಮುಖ್ಯಮಂತ್ರಿಯವರು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಿದ್ದರು. ಅದರಂತೆ ಆಯ್ಕೆಯಾದ ರೈತರಲ್ಲಿ 91 ಜನರ ಮೊದಲ ತಂಡ ಚೀನಾಕ್ಕೆ ತೆರಳುತ್ತಿದ್ದಾರೆ. ಆಯ್ಕೆಯಾದ ಇತರ ರೈತರಿಗೆ ಪಾಸ್‌ಪೋರ್ಟ್, ವೀಸಾ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 500ಕ್ಕೂ ಹೆಚ್ಚು ರೈತರಿಗೆ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲು ಕೃಷಿ ಇಲಾಖೆ ಗುರಿ ಹಾಕಿಕೊಂಡಿದೆ.

(ದಟ್ಟ್ ಕನ್ನಡ ವಾರ್ತೆ)
ಗುಲಬರ್ಗಾ ತೊಗರಿ, ಕಡಲೆ ಶುಭವಾರ್ತೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X