ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಮುಖ ನಗರಗಳಲ್ಲಿ ಎನ್ ಎಸ್ ಜಿ ಸ್ಥಾಪನೆ, ರಾಷ್ಟ್ರಪತಿ

By Staff
|
Google Oneindia Kannada News

NSG commandos in all major cities: President
ಮುಂಬೈ, ನ.29: ಬೆಂಗಳೂರು,ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ರಾಷ್ಟ್ರೀಯ ಭದ್ರತಾ ಪಡೆ(ಎನ್ ಎಸ್ ಜಿ) ಸ್ಥಾಪಿಸುವುದಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಿಳಿಸಿದ್ದಾರೆ. ಇಂಡೋನೇಶ್ಯಾದ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಆಶ್ವಾಸನೆ ನೀಡಿದ್ದಾರೆ. ಭಯೋತ್ಪಾದನೆಯ ಸಾಧ್ಯತೆಗಳು ಇರುವುದರಿಂದ ಎಲ್ಲ ರಾಜ್ಯಗಳಲ್ಲೂ ಪ್ರಬಲವಾದ ಭದ್ರತಾ ವ್ಯವಸ್ಥೆ ಇರಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ.

ಪ್ರಧಾನಿಗೆ ಒಬಾಮಾ ಕರೆ:ಅಮೆರಿಕ ಹೊಸ ಅಧ್ಯಕ್ಷ ಬರಾಕ್ ಒಬಾಮಾ ಶನಿವಾರ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಮುಂಬೈ ಸ್ಫೋಟ ಕುರಿತ ವಿವರಗಳನ್ನು ಕೇಳಿ ತಿಳಿದುಕೊಂಡರು. ಉಗ್ರವಾದಿಗಳ ದುಷ್ಕೃತ್ಯವನ್ನು ಒಬಾಮಾ ಖಂಡಿಸಿದರು. ಪ್ರಧಾನಿಯೊಂದಿಗೆ ಸ್ಫೋಟದಲ್ಲಿ ಮೃತ ಪಟ್ಟವರಿಗಾಗಿ ಒಬಾಮಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರಜೆಗಳ ಬೆಂಬಲಕ್ಕೆ ಅಮೆರಿಕಾ ಯಾವಾಗಲೂ ಇರುತ್ತದೆ ಎಂದು ಒಬಾಮಾ ಹೇಳಿದ್ದಾರೆ.

ಮುಂಬೈ ಸ್ಫೋಟಕ್ಕೆ ಜಾನ್ ಕಿ ಮೂನ್ ಖಂಡನೆ: ಮುಂಬೈ ಮೇಲಿನ ಭೀಕರದಾಳಿಗೆ ಕಾರಣರಾದವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಜಾನ್ ಕಿ ಮೂನ್ ಹೇಳಿದ್ದಾರೆ. ಮುಂಬೈ ಮೇಲಿನ ದಾಳಿಯನ್ನು ಅವರು ತೀವ್ರವಾಗಿ ಖಂಡಿಸಿದರು. ಅಂತಾರಾಷ್ಟ್ರೀಯ ವಾಣಿಜ್ಯ ಒಪ್ಪಂದ ಕುರಿತ ದೋಹಾ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ ಅವರು ಮುಂಬೈ ದಾಳಿಯನ್ನು ತೀವ್ರವಾಗಿ ಪರಿಗಣಿಸಿದರು. ಈ ದಾಳಿಯನ್ನು ಯಾರೂ ಯಾವ ವಿಧದಲ್ಲೂ ಸಮರ್ಥಿಸಿಕೊಳ್ಳ ಬಾರದೆಂದು, ಈ ದುಷ್ಕೃತ್ಯ ರೂಪಿಸಿದವರನ್ನು ಸಾಧ್ಯವಾದಷ್ಟು ಶೀಘ್ರವಾಗಿ ಬಂಧಿಸಿ ಶಿಕ್ಷಿಸಬೇಕು ಎಂದು ಸೂಚಿಸಿದರು.

ಉನ್ನತಾಧಿಕಾರಿಗಳೊಂದಿಗೆ ಪ್ರಧಾನಿ ಸಮಾವೇಶ:
ತಾಜ್ ನಲ್ಲಿನ ಪರಿಸ್ಥಿತಿ ಸೈನ್ಯದ ಹಿಡಿತಕ್ಕೆ ಬಂದ ನಂತರ ಪ್ರಧಾನಿ ಮನಮೋಹನ್ ಸಿಂಗ್ ಗೃಹ ಖಾತೆಯ ಉನ್ನತಾಧಿಕಾರಿಗಳೊಂದಿಗೆ ಸಮಾವೇಶಗೊಂಡರು. ಗೃಹಸಚಿವರೊಂದಿಗೆ ಉನ್ನತಾಧಿಕಾರಿಗಳ ಸಮಾವೇಶ ಮುಗಿದ ಬಳಿಕ ಈ ಸಮಾವೇಶ ನಡೆಯಿತು. ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್, ನೌಕಾದಳದ ಮುಖ್ಯಸ್ಥ,ಗೃಹ ಇಲಾಖೆಯ ಕಾರ್ಯದರ್ಶಿ, ಗುಪ್ತಚರ ಇಲಾಖೆಯ ಮುಖ್ಯಸ್ಥ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಗೃಹ ಸಚಿವ ಶಿವರಾಜ್ ಪಾಟೀಲ್ ರನ್ನು ಮಾತ್ರ ಸಮಾವೇಶಕ್ಕೆ ಆಹ್ವಾನಿಸಿರಲಿಲ್ಲ.

ಮುಂಬೈ ಮೃತಪಟ್ಟವರ ಸಂಖ್ಯೆ 195: ಉಗ್ರರು ಹಾಗೂ ಸೈನಿಕರ ನಡುವಿನ 62 ಗಂಟೆಗಳ ಹೋರಾಟದಲ್ಲಿ 195 ಮಂದಿ ಮೃತಪಟ್ಟಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 300 ಮಂದಿ ಗಾಯಗೊಂಡಿದ್ದಾರೆ. ಇವರೊಂದಿಗೆ 15 ಮಂದಿ ಪೊಲೀಸರು, ಇಬ್ಬರು ಕಮಾಂಡೋಗಳು, 12ಮಂದಿ ಉಗ್ರವಾದಿಗಳು ಮೃತಪಟ್ಟಿದ್ದಾರೆ. ತಾಜ್ ಕಾರ್ಯಾಚರಣೆ ಮುಗಿದಿದೆ ಎಂದೂ, ಹೋಟೆಲ್ ನ ಇಂಚು ಇಂಚು ಪ್ರದೇಶವನ್ನು ಪರಿಶೀಲಿಸುತ್ತಿರುವುದಾಗಿ ಎನ್ ಎಸ್ ಜಿ ಮುಖ್ಯಸ್ಥ ದತ್ ತಿಳಿಸಿದ್ದಾರೆ.

ಭಾನುವಾರ ಸರ್ವ ಪಕ್ಷ ಸಮಾವೇಶ:ಉಗ್ರವಾದಿಗಳ ದಾಳಿಯನ್ನು ನಿಯಂತ್ರಿಸಲು ಇನ್ನು ಮುಂದೆ ಕೈಗೊಳ್ಳಬಹುದಾದ ನಿರ್ಣಯಗಳು, ಲೋಪದೋಷಗಳನ್ನು ಕೂಲಂಕಷವಾಗಿ ಚರ್ಚಿಸಲು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಭಾನುವಾರ(ನ.30) ನವದೆಹಲಿಯಲ್ಲಿ ಸರ್ವ ಪಕ್ಷ ಸಮಾವೇಶ ನಡೆಯಲಿದೆ. ಇದೇ ವೇಳೆಯಲ್ಲಿ ಮುಂಬೈ ದಾಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರಕಾರ ಕೇಂದ್ರಕ್ಕೆ ಸಮಗ್ರ ವರದಿಯನ್ನು ಇಂದು ಕಳುಹಿಸಿದ್ದಾಗಿ ಅಧಿಕಾರಿಗಳು ತಿಳಿಸಿದರು.

ಪೋಟಾ ಕಾಯಿದೆ ಜಾರಿಗೆ ಕರವೇ ಆಗ್ರಹ: ಉಗ್ರವಾದಿಗಳನ್ನು ಮಟ್ಟಹಾಕಲು ಪೋಟಾ ಕಾಯಿದೆ ಜಾರಿಗೆ ತರುವಲ್ಲಿ ಮೀನಾಮೇಷ ಎಣಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕರವೇ ನಾರಾಯಣ ಗೌಡ ಬಣ ಶನಿವಾರ ಘೋಷಣೆ ಕೂಗಿ ಪ್ರತಿಭಟಿಸಿತು. ಉಗ್ರರ ಗುಂಡಿಗೆ ಎದೆಯೊಡ್ಡಿ ವೀರ ಮರಣ ಹೊಂದಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅಂತ್ಯಕ್ರಿಯೆ ವೇಳೆ ಈ ಘಟನೆ ಸಂಭವಿಸಿತು.

ದೇಶದ ಹಿತ ಕಾಯುವಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡಿ ಉನ್ನಿಕೃಷ್ಣನ್ ರಂತಹ ಹಲವಾರು ಯೋಧರು ವೀರ ಮರಣ ಹೊಂದುತ್ತಿದ್ದಾರೆ. ನಮ್ಮ ಘನಂದಾರಿ ರಾಜಕಾರಣಿಗಳು ತಮ್ಮ ಹಿತ ಕಾಯ್ದುಕೊಂಡು ದೇಶದ ಹಿತವನ್ನು ಬಲಿಕೊಡುತ್ತಿದ್ದಾರೆ. ಇದರಿಂದಾಗಿಯೇ ದೇಶ ಮುಂಬೈನಂತಹ ಕೃತ್ಯಗಳನ್ನು ಕಣ್ಣಾರೆ ನೋಡುವಂತಾಗಿದೆ ಎಂದು ಕರವೇ ಆಕ್ರೋಶ ವ್ಯಕ್ತಪಡಿಸಿತು.

ದೇಶದಲ್ಲಿ ಭಯೋತ್ಪಾದನೆಯ ಹುಟ್ಟಡಗಿಸಲು ಉಗ್ರವಾದ ಕಾನೂನುಗಳನ್ನು ಜಾರಿಗೊಳಿಸಬೇಕಾಗಿದೆ. ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ಪಾಕಿಸ್ತಾನ ಪರೋಕ್ಷವಾಗಿ ನೀರೆರೆದು ಪೋಷಿಸುತ್ತಿದೆ. ಮುಂಬೈ ಸ್ಫೋಟಕ್ಕೆ ನೇರ ಹೊಣೆಯಾಗಿರುವ ಪಾಕಿಸ್ತಾನಕ್ಕೆ ಧಿಕ್ಕಾರ.. ಧಿಕ್ಕಾರ.. ಧಿಕ್ಕಾರ.. ಎಂದು ಕೂಗಿ ಕರವೇ ಪ್ರತಿಭಟಿಸಿತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X