ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಒಂದು ಅಪರೂಪದ ಟ್ರಾಫಿಕ್ ಜಾಮ್!

By Staff
|
Google Oneindia Kannada News

Major Sandeep Unnikrishnan cremated at Hebbal crematorium
ಬೆಂಗಳೂರು, ನ. 29 : ಬೆಂಗಳೂರಿನಂಥ ನಗರದ ಯಾವುದೋ ಒಂದು ಭಾಗದಲ್ಲಿ ಟ್ರಾಫಿಕ್ ಜಾಮ್ ಇಲ್ಲವೆಂದರೆ, ಜನಜೀವನ ಸಾಮಾನ್ಯ ಸ್ಥಿತಿಯಲ್ಲಿಲ್ಲ ಅಂತನೇ ಅರ್ಥ. ರಸ್ತೆ ಅಗೆದಿದ್ರೂ ಟ್ರಾಫಿಕ್ ಜಾಮ್, ವಿದೇಶಿ ರಾಯಭಾರಿಗಳು ಇನ್ಫೋಸಿಸ್ ಸವಾರಿ ಮಾಡಿದ್ರೂ ಟ್ರಾಫಿಕ್ ಜಾಮ್, ಟ್ಯಾಕ್ಸಿ ಅಡ್ಡಾದಿಡ್ಡಿ ಓಡಿದ್ರೂ ಟ್ರಾಫಿಕ್ ಜಾಮ್, ಯಾವುದೋ ಪಕ್ಷ ಬಹಿರಂಗ ಸಭೆ ನಡೆಸಿದರೂ ಟ್ರಾಫಿಕ್ ಜಾಮ್!

ಮೊದಲೆಲ್ಲ ಒಂದು ಗಂಟೆ ತಡವಾಗಿ ಮನೆ ಸೇರುತ್ತಿದ್ದ ಸಾರ್ವಜನಿಕರು ಇತ್ತಿತ್ತಲಾಗಿ ನಾಲ್ಕು ಗಂಟೆ ತಡವಾಗಿ ತಲುಪಲು ಪ್ರಾರಂಭಿಸಿದ್ದಾರೆ. ಕೆಲವರು ಟ್ರಾಫಿಕ್ ಗೆ ಕಾರಣರಾದವರ ಮೇಲೆ ಗೂಬೆ ಕೂರಿಸಿದರೆ, ಇನ್ನು ಕೆಲವರು ಆಡಳಿತ ನಡೆಸುವವರನ್ನು ಬಾಯಿಗೆ ಬಂದಂತೆ ಬೈದು ಬಾಯಿ ನೋಯಿಸಿಕೊಂಡು ಮನೆ ಸೇರುತ್ತಾರೆ. ಇನ್ನು ಕೆಲವರು 'ಅಯ್ಯೋ ಪ್ರತಿದಿನ ಇದು ಇದ್ದದ್ದೇ' ಅಂತ ಟ್ರಾಫಿಕ್ ಜಾಮ್ ಗಳಿಗೆ ತಾವೇ ಅಡ್ಜಸ್ಟ್ ಆಗಿದ್ದಾರೆ. ಕುಖ್ಯಾತಿಯಿಂದ ಉಗ್ರಸ್ವರೂಪ ತಾಳುತ್ತಿರುವ ಟ್ರಾಫಿಕ್ ಜಾಮ್ ಬೆಂಗಳೂರಿನ ಅವಿಭಾಜ್ಯ ಅಂಗವೇ ಆಗಿದೆ ಅಂದರೂ ತಪ್ಪಲ್ಲ.

ಪ್ರತಿಬಾರಿ ವಾಹನ ದಟ್ಟಣೆ ಸಂಭವಿಸಿದಾಗ ಜನರ ಗೊಣಗಾಟ, ಹಿಡಿಶಾಪ ಇದ್ದಿದ್ದೇ. ಆದರೆ, ಇಂದು ಬಳ್ಳಾರಿ ರಸ್ತೆಯಲ್ಲಿ ನಡೆದ ಟ್ರಾಫಿಕ್ ಜಾಮ್ ಬಗ್ಗೆ ಒಬ್ಬ ನಾಗರಿಕನೂ ದೂರುತ್ತಿಲ್ಲ, 'ಥತ್ ದರಿದ್ರ ಟ್ರಾಫಿಕ್ ಜಾಮ್' ಅಂತ ಹಳಿಯುತ್ತಿಲ್ಲ. ಬದಲಾಗಿ ವಾಹನ ದಟ್ಟಣೆಗೆ ಕಾರಣರಾದವರಲ್ಲಿ, ದಟ್ಟಣೆಯಲ್ಲಿ ಸಿಲುಕಿಕೊಂಡವರಲ್ಲಿ ಒಂದು ಬಗೆಯ ಗೌರವ ಭಾವನೆ. ರಾಷ್ಟ್ರಪ್ರೇಮದಿಂದ ಕೊರಳುಬ್ಬಿ ಇನ್ನೇನು ಕಣ್ಣಹನಿ ತೊಟ್ಟಿಕ್ಕುವ ಹಂತ ತಲುಪಿದ್ದವು.

ಮುಂಬೈನಲ್ಲಿ ಭಯೋತ್ಪಾದಕ ದಾಳಿಯನ್ನು ಹತ್ತಿಕ್ಕುವಾಗ ಹುತಾತ್ಮರಾದ ಬೆಂಗಳೂರಿನವರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಜಾತಿ, ಭಾಷೆಯ ಹಂಗಿಲ್ಲದೆ ಪಾಲ್ಗೊಂಡಿದ್ದರಿಂದ ಬಳ್ಳಾರಿ ರಸ್ತೆಯ ಮೇಲಿನ ಟ್ರಾಫಿಕ್ ಗಂಟೆಗಳ ಕಾಲ ನಿಂತಲ್ಲಿಯೇ ನಿಂತಿತ್ತು. ಯಲಹಂಕದಿಂದ ಸಂದೀಪ್ ಪಾರ್ಥೀವ ಶರೀರದ ಮೆರವಣಿಗೆ ಹೆಬ್ಬಾಳ್ ವಿದ್ಯುತ್ ಚಿತಾಗಾರ ಮುಟ್ಟುವ ವೇಳೆಗೆ ಜನ ಸಾಗರೋಪಾದಿಯಲ್ಲಿ ಬಂದು ಸೇರಿದ್ದರು. ದೇಶಕ್ಕಾಗಿ ಹೋರಾಡಿ ಮಡಿದ ವೀರನ ಅಂತಿಮ ದರುಷನಕ್ಕಾಗಿ, ಕಂಬನಿ ಮಿಡಿಯಲು ಬಂದು ಸೇರಿದ್ದರು.

ಹೆಬ್ಬಾಳ ಮೇಲ್ಸೇತುವೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಜನ ಪರದಾಡುವಂತಾಯಿತು. ಎಸ್ಟೀಮ್ ಮಾಲ್ ಪಕ್ಕದಲ್ಲಿರುವ ವಿದ್ಯುತ್ ಚಿತಾಗಾರಕ್ಕೆ ಜನಸ್ತೋಮವೇ ಹರಿದುಬಂದಿದ್ದರಿಂದ ಪೊಲೀಸರೂ ಪರದಾಡುವಂತಾಯಿತು. ಆದರೆ, ಸಾರ್ವಜನಿಕರು ಇದಕ್ಕಾಗಿ ಯಾರನ್ನೂ ದೂರಲಿಲ್ಲ, ಅಧಿಕಾರಿಗಳನ್ನು ಶಪಿಸಲಿಲ್ಲ. ಬದಲಾಗಿ ಇಂಥ ಮೆರವಣಿಗೆಯಲ್ಲಿ ತಾವೂ ಭಾಗಿಯಾಗಿದ್ದಕ್ಕೆ ಒಂದು ಬಗೆಯ ಧನ್ಯತಾ ಭಾವ ಅನುಭವಿಸಿದರು.

ನವೆಂಬರ್ 17ರಂದು ಜೆಡಿಎಸ್ ನಡೆಸಿದ ಕಾಯಕಲ್ಪ ಪ್ರತಿಜ್ಞಾ ಸಮಾವೇಶ ಜರುಗಿದಾಗಲೂ ಇದೇ ಬಳ್ಳಾರಿ ರಸ್ತೆಯಲ್ಲಿ ಇದೇ ಬಗೆಯ ವಾಹನ ದಟ್ಟಣೆ ಸಂಭವಿಸಿತ್ತು. ಜನತೆ ಜೆಡಿಎಸ್ ನಾಯಕರ ಮೇಲೆ ಹಿಡಿಶಾಪ ಹಾಕಿದ್ದರು, ದಟ್ಟಣೆ ನಿಯಂತ್ರಿಸದ ಸರ್ಕಾರದ ಮೇಲೆ ಹರಿಹಾಯ್ದಿದ್ದರು, ಇಂಥ ಸಭೆಗಳನ್ನು ಭಾನುವಾರ ಇಟ್ಟಕೊಳ್ಳಬೇಕೆಂದು ಹೈಕೋರ್ಟ್ ಆಜ್ಞೆಯನ್ನೂ ನೀಡಿತ್ತು. ಆದರೆ, ಅಂದಿನ ದಟ್ಟಣೆಗೆ ಕಾರಣವಿರಲಿಲ್ಲ. ಜನತೆಯ ಬಗ್ಗೆ ಜನನಾಯಕರಿಗೆ ಎಳ್ಳಷ್ಟೂ ಕಾಳಜಿಯಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ.

ವಿದ್ಯುತ್ ಚಿತಾಗಾರ ಅಲ್ಲಿ ಬೇಕಿತ್ತೆ? : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ಕಳಶಪ್ರಾಯ'ದಂತೆ ಹೆಬ್ಬಾಗಿಲಲ್ಲೇ ಹೆಬ್ಬಾಳ ವಿದ್ಯುತ್ ಚಿತಾಗಾರ ತಲೆಯೆತ್ತಿ ನಿಂತಿದೆ. ಚಿತಾಗಾರವನ್ನು ಅಲ್ಲಿ ಪ್ರಾರಂಭಿಸುವಾಗಲೇ ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವುದು ನಿರ್ಧಾರವಾಗಿತ್ತು. ಈಗ ಅದೇ ಚಿತಾಗಾರ ತಾನಿರುವ ಸ್ಥಳದಿಂದಾಗಿ ಅನೇಕ ವಾಹನ ದಟ್ಟಣೆಗಳಿಗೆ ಕಾರಣವಾಗುತ್ತಿದೆ. ಮೃತರ ಕುಟುಂಬದವರ ಮೆರವಣಿಗೆಯೊಂದಿಗೆ ಸಾರ್ವಜನಿಕರ ಮೆರವಣಿಗೆಯೂ ಪ್ರತಿನಿತ್ಯ ನಡೆದಿರುತ್ತದೆ.

ವಿಮಾನ ನಿಲ್ದಾಣ ರಸ್ತೆಯ ಹೆಬ್ಬಾಗಿಲಲ್ಲೇ ವಿದ್ಯುತ್ ಚಿತಾಗಾರ ಬೇಕಿತ್ತೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ಸೇರಬೇಕಾಗಿರುವವರು ಟ್ರಾಫಿಕ್ ಜಾಮ್ ನಲ್ಲಿ ನರಳಿ ನೇರವಾಗಿ ಚಿತಾಗಾರ ತಲುಪುವಂತಾಗಿದೆ. ಚಿತಾಗಾರವನ್ನು ಸ್ಥಳಾಂತರಿಸಬೇಕೆಂದು ಹೆಬ್ಬಾಳ ಹೌಸಿಂಗ್ ಸೊಸೈಟಿಯವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುಜರಾಯಿಸಿದ್ದರು. ಅದಕ್ಕೆ ಮನ್ನಣೆ ಸಿಗಲಿಲ್ಲ. ಹೆಬ್ಬಾಳ ವಿದ್ಯುತ್ ಚಿತಾಗಾರ ಸುತ್ತಲಿನ ಜನತೆಗೆ ಅನುಕೂಲ ತಂದಿದೆಯಾದರೂ ಮುಖ್ಯರಸ್ತೆಯ ಮೇಲೆಯೇ ಇರುವುದರಿಂದ ಜನ ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಅಭಿವೃದ್ಧಿ ಕಾಣದ ರಸ್ತೆ, ಅನನುಕೂಲತೆಯಿಂದ ಕೂಡಿರುವ ರಸ್ತೆ ತಿರುವುಗಳು, ಲಂಗುಲಗಾಮಿಲ್ಲದಂತೆ ಚಲಿಸುವ ವಾಹನಗಳು, ಪೊಲೀಸರ ಕೆಟ್ಟ ನಿರ್ವಹಣೆಯಿಂದ ಬಳ್ಳಾರಿ ರಸ್ತೆಯಲ್ಲಿ ಚಲಿಸುವ ಜನ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಜೊತೆಗೆ ಆಗಾಗ ಸಂಭವಿಸುವ ವಾಹನ ದಟ್ಟಣೆಗಳು ಗಾಯದ ಮೇಲೆ ಉಪ್ಪು ಸುರಿದಂತಾಗುತ್ತಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X