ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಶ್ರೀರಾಮುಲು ಆರಂಭಿಸಿದ ರೆಡ್ಡಿಸ್ ?

By Staff
|
Google Oneindia Kannada News

ನವದೆಹಲಿ, ನ. 25 : ಕರ್ನಾಟಕದ ರಾಜಕೀಯದಲ್ಲಿ ಏನೋ ಆಗುತ್ತಿದೆ. ಅಪ್ರಯೋಜಕ ಹೇಳಿಕೆಗಳು ಬಿಜೆಪಿ ವಲಯಗಳಿಂದ ಕೇಳಿಬರಲಾರಂಬಿಸಿದ್ದು ಇದ್ದಕ್ಕಿದ್ದಂತೆ ಯಡಿಯೂರಪ್ಪನವರ ಕುರ್ಚಿಯನ್ನು ಅಲುಗಾಡಿಸುವಂಥ ವರದಿಗಳು ಮಾಧ್ಯಮ ವೇದಿಕೆಗಳಲ್ಲಿ ತೂರಾಡಲು ಶುರುವಾಗಿದೆ.

ಉದಾಹರಣೆಗೆ, ಈಶ್ವರಪ್ಪನವರ ಮೇಲೆ ವರ್ತೂರು ಪ್ರಕಾಶ್ ಎಗರಾಡುತ್ತಿರುವ ಸುದ್ದಿ. ಶ್ರೀರಾಮುಲು ಮುಖ್ಯಮಂತ್ರಿಯಾಗುವ ಸುದ್ದಿ. ಇವೆಲ್ಲ ಬಳ್ಳಾರಿಯ ಧೂಳಿನಿಂದ ಎದ್ದು ಬಂದ ಸುದ್ದಿಬಿಂಬಗಳು. ಇವತ್ತಿನ ಸಮಾಚಾರವೆಂದರೆ, ಶ್ರೀರಾಮುಲು ದೆಹಲಿಯಲ್ಲಿ ಕ್ಯಾಂಪ್ ಹೂಡಿದ್ದಾರೆ. ಅಲ್ಲಿಂದಲೇ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಉತ್ತರಾಧಿಕಾರಿಯನ್ನು ನೇಮಿಸುವ ಅಂತಿಮ ತೀರ್ಮಾನ ಪಕ್ಷದ ದೆಹಲಿ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಅನಂತಕುಮಾರ್ ಎನ್ನುವ ವಿಷಯಕ್ಕೆ ಸ್ಪಷ್ಟವಾಗಿ ಉತ್ತರಿಸಲು ನಿರಾಕರಿಸಿದ್ದಾರೆ. ಈ ಎಲ್ಲ ಮಾತುಗಳನ್ನು ಗಮನಿಸಿದರೆ ಬಿಜೆಪಿಯಲ್ಲೂ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ರೆಕ್ಕೆ ಪುಕ್ಕ ಹುಟ್ಟಿಕೊಂಡಿವೆ. ಶಿಸ್ತಿನ ಪಕ್ಷವೆಂದೇ ಗುರುತಿಸಿಕೊಂಡಿರುವ ಬಿಜೆಪಿಯಲ್ಲೂ ಬಿರುಗಾಳಿ ಬೀಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಕಳೆದ ಕೆಲ ದಿನಗಳ ಹಿಂದೆ ಬಳ್ಳಾರಿಯಲ್ಲಿ ನಡೆದ ವಾಲ್ಮೀಕಿ ಜನಾಂಗದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ಅವರು ಮುಖ್ಯಮಂತ್ರಿ ಪದವಿಗೆ ಶ್ರೀರಾಮುಲು ಅರ್ಹರು ಎಂದು ಹೇಳಿಕೆ ನೀಡಿದ್ದರು. ಚುನಾವಣಾ ಸಮಯವಾಗಿದ್ದರಿಂದ ಜನಾರ್ದನರೆಡ್ಡಿ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಕೆಲ ವಾರಗಳ ಹಿಂದೆ ರವಿ ಬೆಳೆಗೆರೆ ಕೂಡಾ ಜನಾರ್ದನರೆಡ್ಡಿ ಅವರು ಮುಂದಿನ ಮುಖ್ಯಮಂತ್ರಿ ಜನಾರ್ದನರೆಡ್ಡಿ ಎಂದು ಹೇಳಿಕೆ ನೀಡಿ ಚರ್ಚೆಗೆ ವೇದಿಕೆ ಒದಗಿಸಿಕೊಟ್ಟಿದ್ದರು.

ಜನಾರ್ದನರೆಡ್ಡಿ ಹೇಳಿಕೆಗೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, ಯಡಿಯೂರಪ್ಪ ಅವರ ಉತ್ತರಾಧಿಕಾರಿಯನ್ನು ಆರಿಸುವುದು ಪಕ್ಷದ ವರಿಷ್ಠರೇ ಹೊರತು ರಾಜ್ಯ ಮುಖಂಡರಲ್ಲ. ಇದರ ಬಗ್ಗೆ ಅನಗತ್ಯ ಗೊಂದಲಬೇಡ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶ್ರೀರಾಮುಲು ಸ್ಪಷ್ಟಪಡಿಸಿದರು. ಸರ್ಕಾರವನ್ನು ಅತಂತ್ರಗೊಳಿಸುವ ಮಾತೇ ಇಲ್ಲ ಎಂದು ಪುನರುಚ್ಚರಿಸಿದರು.

ಕಳೆದ ಕೆಲ ದಿನಗಳಿಂದ ದಟ್ಟವಾಗಿ ಒಂದು ಸುದ್ದಿ ಹರಡಿತ್ತು. ರೆಡ್ಡಿ ಬ್ರದರ್ಸ್ ಗಳು ಕೈಯಲ್ಲಿ 15 ಸಚಿವರೂ ಹಾಗೂ 50ಕ್ಕೊ ಮಿಕ್ಕ ಶಾಸಕರು ಇದ್ದಾರೆ. ಅವರು ಮನಸ್ಸು ಮಾಡಿದರೆ ಯಡಿಯೂರಪ್ಪ ಅವರನ್ನು ಕ್ಷಣಮಾತ್ರದಲ್ಲಿ ಮಾಜಿ ಸಿಎಂ ಮಾಡುವ ಸಾಮರ್ಥ್ಯವಿದೆ ಎಂದು ಎಲ್ಲಡೆ ಗುಲ್ಲು ಹಬ್ಬಿತ್ತು. ಇದಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎನ್ನುವ ಸುದ್ದಿಯೂ ಅಲ್ಲಲ್ಲಿ ಕೇಳಿ ಬಂದಿತ್ತು. ಇದೀಗ ಇದು ನಿಜವಾಗುವತ್ತ ಹೊರಟಿದೆ. ಆದರೆ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರದ ನಾಯಕರಾದ ಈಶ್ವರಪ್ಪ, ಅನಂತಕುಮಾರ್, ಜಗದೀಶ್ ಶೆಟ್ಟರ್, ಶೋಭಾ ಕರಂದ್ಸಾಜೆ ಸೇರಿದಂತೆ ಅನೇಕ ನಾಯಕರಿಗೆ ರೆಡ್ಡಿ ಬ್ರದರ್ಸ್ ಹಾಗೂ ಶ್ರೀರಾಮುಲು ನಡೆ ಭಾರಿ ಆಘಾತ ನೀಡುವ ದಿನ ದೂರವಿಲ್ಲ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X