ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ದೂರದರ್ಶನ ಕೇಂದ್ರದ ಬೆಳ್ಳಿಹಬ್ಬ

By Staff
|
Google Oneindia Kannada News

Silver Jubilee of Bangalore Doordarshan News
ಬೆಂಗಳೂರು, ನ. 18 : ನವೆಂಬರ್ 19ಕ್ಕೆ ಸರಿಯಾಗಿ ಬೆಂಗಳೂರು ದೂರದರ್ಶನ ಕೇಂದ್ರದ ವಾರ್ತಾ ವಿಭಾಗ 25 ವಸಂತಗಳನ್ನು ಪೂರೈಸುತ್ತಿದೆ. ಈ ಬೆಳ್ಳಿಹಬ್ಬದ ಆಚರಣೆಯ ಪ್ರಯುಕ್ತ ದೂರದರ್ಶನದ ಕೇಂದ್ರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಒಂದು ದಿನದ ಮಾಧ್ಯಮ ಶಿಬಿರವನ್ನು ನಡೆಸುತ್ತಿದೆ.

ಆಧುನಿಕ ಯುಗದಲ್ಲಿ ಸುದ್ದಿ ಮಾಧ್ಯಮ ಎದುರಿಸುತ್ತಿರುವ ಹೊಸ ಸವಾಲು, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿರುವ ಹೊಸ ಟ್ರೆಂಡ್ ಗಳ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿಕೊಡಲಾಗುವುದು ಎಂದು ದೂರದರ್ಶನದ ಪ್ರಕಟಣೆ ತಿಳಿಸಿದೆ. 25 ವರ್ಷ ವಾರ್ತಾ ವಿಭಾಗ ನಡೆದುಬಂದ ಹಾದಿಯ ಸಿಂಹಾವಲೋಕ ಮತ್ತು ಭವಿಷ್ಯದ ಕುರಿತು ಚಿಂತನೆಯನ್ನೂ ನಡೆಸಲಾಗುತ್ತದೆ ಎಂದು ತಿಳಿಸಿದೆ. ಪತ್ರಿಕೋದ್ಯಮದಲ್ಲಿ ನುರಿತ ತಜ್ಞರು ಕನ್ನಡ ಸುದ್ದಿ ಸಂಗ್ರಹಣೆ ಮತ್ತು ಬೆಳವಣಿಗೆಗಳ ಬಗ್ಗೆ ತರಬೇತಿ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಸುದ್ದಿ ವಿಭಾಗದಲ್ಲಿ ಅಹರ್ನಿಷಿ ದುಡಿದ ಮಾಜಿ ಸಂಪಾದಕರು, ವರದಿಗಾರರು, ವಾರ್ತಾ ವಾಚಕರು, ನಿರ್ಮಾಪಕರು ಮತ್ತು ತಾಂತ್ರಿಕ ಸಿಬ್ಬಂದಿ ವರ್ಗವನ್ನು ದೂರದರ್ಶನ ಕೇಂದ್ರ ಸನ್ಮಾನಿಸುತ್ತಿದೆ.

ಹಿರಿಯ ಪತ್ರಕರ್ತ ಎಸ್.ವಿ.ಜಯಶೀಲರಾವ್ ಅವರು ಬೆಳ್ಳಿಹಬ್ಬದ ಕಾರ್ಯಕ್ರಮ ಮತ್ತು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ದೆಹಲಿ ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕಿ ಅರವಿಂದ್ ಮಂಜೀತ್ ಸಿಂಗ್ ಅವರು ಸಮಾರಂಭವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಿಘಂಟುತಜ್ಞ, ಹಿರಿಯ ಸಾಹಿತಿ ಜಿ. ವೆಂಕಟಸುಬ್ಬಯ್ಯ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹಿರಿಯ ಕವಿ ನಿಸಾರ್ ಅಹ್ಮದ್ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

25 ವರ್ಷಗಳ ಹಿಂದೆ : 1982ರಲ್ಲಿ 26 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ದೂರದರ್ಶನ ಕೇಂದ್ರ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದರೂ, ಪ್ರಪ್ರಥಮ ಸುದ್ದಿ ಬಿತ್ತರವಾದದ್ದು ನವೆಂಬರ್ 19, 1983ರಂದು ವಿಶ್ವೇಶ್ವರಯ್ಯ ಕಟ್ಟಡದಲ್ಲಿ. ಆಗ ಚೆನ್ನೈ ಮತ್ತು ಹೈದರಾಬಾದಿನಲ್ಲಿ ಮಾತ್ರ ಪ್ರಾದೇಶಿಕ ವಾರ್ತೆಗಳನ್ನು ಬಿತ್ತರ ಮಾಡಲಾಗುತ್ತಿತ್ತು. ಕನ್ನಡ ಸಾಹಿತಿಗಳು, ಕಲಾವಿದರು, ಚಳವಳಿಗಾರರ ಒಂದು ವರ್ಷದ ಸತತ ಪ್ರಯತ್ನ, ಹೋರಾಟದ ಫಲವಾಗಿ 1983ರಲ್ಲಿ ಕನ್ನಡ ನಾಡಿನ ಜನತೆಗೂ ಕನ್ನಡ ಸುದ್ದಿ ದೂರದರ್ಶನದಲ್ಲಿ ನೋಡಲು ಸಾಧ್ಯವಾಯಿತು.

ಪ್ರಥಮ ಪ್ರಾದೇಶಿಕ ಸುದ್ದಿ ಅಂದಿನ ನಿರ್ದೇಶಕರಾಗಿದ್ದ ಜೆ.ಎನ್. ಕಮಲಾಪುರ ಮತ್ತು ಅಂದಿನ ಸಂಪಾದಕರಾಗಿದ್ದ ವಿ.ನಾಗರಾಜರಾವ್ ಅವರ ಮಾರ್ಗದರ್ಶನದಲ್ಲಿ ಬಿತ್ತರವಾಯಿತು. ಪ್ರಥಮ ಸುದ್ದಿಯನ್ನು ಓದಿದವರು ಕೃಷ್ಣಾ ಗಲಗಲಿ. ದೂರದರ್ಶನದಲ್ಲಿ ಪ್ರಪ್ರಥಮ ಕನ್ನಡ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಇಡೀ ಕನ್ನಡ ನಾಡಿನ ಜನತೆ ಭಾವಪರವಶರಾಗಿದ್ದರು ಮತ್ತು ಹುಚ್ಚೆದ್ದು ಕುಣಿದಾಡಿದ್ದರು. ಸಮಸ್ತ ಕನ್ನಡಿಗರ ಕನಸು ನನಸಾಗಿ ನಾಳೆಗೆ 25 ವರ್ಷಗಳು ಸಂದುತ್ತಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X