ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಳ್ವ ಆರೋಪಕ್ಕೆ ಪ್ರತಿಕ್ರಿಯಿಸಿದರೆ ಕ್ರಮ:ಮೊಯ್ಲಿ

By Staff
|
Google Oneindia Kannada News

ಮಂಗಳೂರು, ನ. 9 : ಪಕ್ಷದ ಹಿರಿಯ ನಾಯಕಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾರ್ಗರೆಟ್ ಆಳ್ವ ಮಾಡಿರುವ ಆರೋಪಗಳ ಕುರಿತು ಶಿಸ್ತು ಸಮಿತಿಯ ಸಮಗ್ರ ವರದಿ ಬರುವವರೆಗೂ ಯಾವ ಮುಖಂಡರು ಬಹಿರಂಗ ಪ್ರತಿಕ್ರಿಯೆ ನೀಡಬಾರದು ಎಂದು ಕೇಂದ್ರ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ವ್ಯಕ್ತಿಗಿಂತ ಪಕ್ಷದ ವರ್ಚಸ್ಸೆ ದೊಡ್ಡದಾಗಿದೆ. ಆ ಕಾರಣಕ್ಕಾಗಿ ವರದಿ ಬರುವವರೆಗೂ ಮಾತನಾಡುವ ಹಾಗಿಲ್ಲ. ಈ ನಿಯಮ ಸಿದ್ದರಾಮಯ್ಯ ಅವರಿಗೂ ಅನ್ವಯಿಸಲಿದೆ ಎಂದು ಒತ್ತಿ ಹೇಳಿದರು. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಹಣಕ್ಕಾಗಿ ಟಿಕೆಟ್ ಗಳು ಮಾರಾಟ ಮಾಡಲಾಗಿತ್ತು ಎಂದು ಮಾರ್ಗರೆಟ್ ಆಳ್ವ ಅವರು ಕರ್ನಾಟಕ ಉಸ್ತುವಾರಿ ಹೊತ್ತಿರುವ ಪೃಥ್ವಿರಾಜ ಚೌಹಾನ್ ಸೇರಿ ರಾಜ್ಯದ ಮುಖಂಡರ ಮೇಲೆ ಗಂಭೀರ ಆರೋಪ ಮಾಡಿದ್ದರು. ಜಾಫರ್ ಷರೀಫ್ ಮೊಮ್ಮಗ ಹಾಗೂ ನನ್ನ ಪುತ್ರ ನಿವೇದಿತಗೆ ಟಿಕೆಟ್ ನೀಡಲು ನಿರಾಕರಿಸಿದರು ಎಂದು ತೀವ್ರ ಟೀಕೆಯ ಸುರಿಮಳೆಗೈದಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಆರೋಪಗಳ ಸತ್ಯಾಸತ್ಯತೆ ತಿಳಿಯಲು ಹಿರಿಯ ಮುಖಂಡ ಎ.ಕೆ.ಅಂಟನಿ ನೇತೃತ್ವದ ಶಿಸ್ತು ಸಮಿತಿ ರಚಿಸಿ ವಾರದೊಳಗೆ ವರದಿ ನೀಡುವಂತೆ ಸೂಚನೆ ನೀಡಿತ್ತು. ಆಳ್ವ ಆರೋಪ ರಾಜ್ಯ ರಾಜಕೀಯಲ್ಲಿ ಬಿರುಗಾಳಿಯ ಅಲೆಯೆಬ್ಬಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ವಿಷಯ ಕುರಿತು ಪಕ್ಷದ ಮುಖಂಡರು ತಮ್ಮ ಮೊಗಿನ ನೇರಕ್ಕೆ ಪ್ರತಿಕ್ರಿಯೆ ನೀಡುತ್ತಿರುವುದು ಹೈಕಮಾಂಡ್ ಗೆ ಕಿರಿಕಿರಿಯಾಗಿದೆ. ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವಾದಿತ ಪ್ರಕರಣಕ್ಕೆ ಯಾವ ಮುಖಂಡರು ಮಾತನಾಡುವಂತಿಲ್ಲ. ಪರವಿರಲಿ, ವಿರೋಧವಿರಲಿ ಯಾವ ಪ್ರತಿಕ್ರಿಯೆಯನ್ನು ನೀಡಬಾರದು. ಪಕ್ಷದ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಈ ಆದೇಶವನ್ನು ಹೊರಡಿಸಲಾಗಿದ್ದು, ಇದಕ್ಕೂ ಮೀರಿ ಯಾರಾದರೂ ಪ್ರತಿಕ್ರಿಯೆ ನೀಡಿದರೆ ಅವರ ಮೇಲೆಯೂ ಶಿಸ್ತು ಕ್ರಮ ಜಾರಿಗೊಳಿಸಲಾಗುವುದು ಎಂದು ಮೊಯ್ಲಿ ಖಡಾಖಂಡಿತವಾಗಿ ಹೇಳಿದ್ದಾರೆ.

ಸಿದ್ಧರಾಮಯ್ಯನವರಿಗೂ ಇದು ಅನ್ವಯವಾಗುತ್ತದೆ, ಅವರು ಕೂಡಾ ಹೈಕಮಾಂಡ್ ಆಜ್ಞೆಯನ್ನು ಪಾಲಿಸಬೇಕು ಎಂದು ಕಟ್ಟಪ್ಪಣೆ ಮಾಡಿದರು. ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾಗಿರುವ ಅವರಿಗೆ ಪಕ್ಷದ ಶಿಸ್ತಿನ ಬಗ್ಗೆ ಅಷ್ಟಾಗಿ ತಿಳಿದಿಲ್ಲ ಎಂದು ಸಿದ್ಧರಾಮಯ್ಯ ಕ್ರಮವನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡರು. ಸಿದ್ಧರಾಮಯ್ಯ ಅವರು ಮಾರ್ಗರೆಟ್ ಅಳ್ವ ಮಾಡಿರುವ ಆರೋಪಗಳನ್ನು ಸಮರ್ಥಿಸಿಕೊಂಡು ಮಾತನಾಡಿದ್ದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಗಳೂರು ಲೋಕಸಭೆ ಕ್ಷೇತ್ರ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಮೊಯ್ಲಿ, ರಾಜ್ಯದಲ್ಲಿ ಆಡಳಿತದಲ್ಲಿರುವ ಕೋಮುವಾದಿ ಪಕ್ಷ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ನಿಚ್ಚಳ ಗೆಲುವು ದೊರೆಯಲಿದೆ ಎಂದು ವೀರಪ್ಪ ಮೊಯ್ಲಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X