ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಣು ಭ್ರೂಣ ಹತ್ಯೆ ತಡೆಗೆ ಚಳವಳಿ: ಶೋಭಾ

By Staff
|
Google Oneindia Kannada News

Workshop on ಬೆಂಗಳೂರು, ಅ.26: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಯಲು ಕೇವಲ ಸಾಮಾಜಿಕ ಕಳಕಳಿ ಮಾತ್ರವಲ್ಲ, ಅದೊಂದು ಸಾಮಾಜಿಕ ಚಳವಳಿಯಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.

ನಗರದ ಜೆ.ಎನ್. ಟಾಟಾ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಸಹಯೋಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ " ಹೆಣ್ಣು ಶಿಶು ಉಳಿಸಿ" ಕುರಿತ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಫಾಟಿಸಿ ಅವರು ಮಾತನಾಡುತ್ತಿದ್ದರು.

ನಗರದ, ಅದರಲ್ಲೂ ಮಧ್ಯಮ ವರ್ಗದ ಹಾಗೂ ವಿದ್ಯಾವಂತ ಕುಟುಂಬದ ಜನರೇ ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುತ್ತಿದ್ದಾರೆ. ಅಲ್ಲದೆ, ಪುರುಷ ವೈದ್ಯರಿಗಿಂತಲೂ ಮಹಿಳಾ ವೈದ್ಯರೇ ಭ್ರೂಣ ಹತ್ಯೆ ಮಾಡುವಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ ಎಂಬ ಅಂಶಗಳು ಹಲವು ಸರ್ವೇಕ್ಷಣೆಗಳಿಂದ ಬೆಳಕಿಗೆ ಬಂದಿವೆ. ಹೊಸ ತಂತ್ರಜ್ಞಾನವೇ ಎಲ್ಲರಿಗೂ ಜೀವ ನೀಡುವ ಹೆಣ್ಣಿನ ಜೀವಕ್ಕೆ ಮುಳುವಾಗುತ್ತಿರುವುದು ಅತ್ಯಂತ ಕಳವಳಿಕಾರಿ ಸಂಗತಿಯಾಗಿದೆ ಎಂದು ಸಚಿವರು ನುಡಿದರು.

ಮಧ್ಯಮ ವರ್ಗಕ್ಕೂ ಭಾಗ್ಯಲಕ್ಷ್ಮೀ ?

ಭ್ರೂಣ ಹತ್ಯೆ ಪ್ರಕರಣಗಳಿಂದ ರಾಷ್ಟ್ರೀಯ ಸರಾಸರಿಗಿಂತಲೂ ಇಡೀ ರಾಷ್ಟ್ರದಲ್ಲೇ ಅತಿ ಕಡಿಮೆ ಸಂಖ್ಯೆಯ ಹೆಣ್ಣಿನ ಅನುಪಾತವಿರುವ ಬೆಳಗಾವಿ ಜಿಲ್ಲೆ, ಅದರಲ್ಲೂ ಒಂದು ಸಾವಿರ ಪುರುಷರಿಗೆ ಕೇವಲ 880 ಸ್ತ್ರೀ ಪ್ರಮಾಣವಿರುವ ಅಥಣಿ ತಾಲ್ಲೂಕು ರಾಜ್ಯಕ್ಕೆ ಕಳಂಕಪ್ರಾಯವಾಗಿದೆ. ಭ್ರೂಣ ಹತ್ಯೆಗಳ ತಡೆಯಲು ರಾಜ್ಯ ಸರ್ಕಾರ ಭಾಗ್ಯಲಕ್ಷ್ಮಿಯಂತಹ ಅತ್ಯುತ್ತಮ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದರೂ, ಈ ಯೋಜನೆ ಬಡತನ ರೇಖೆಗಿಂತಲೂ ಕೆಳಗಿರುವ ವರ್ಗದ ಜನರಿಗೆ ಮಾತ್ರ ಲಾಭದಾಯಕವಾಗಿದೆ. ಆದರೆ, ಮಧ್ಯಮ ವರ್ಗದ ಜನರಿಗೆ ಈ ಯೋಜನೆಯ ಲಾಭ ದೊರೆಯದಿರುವುದರಿಂದಲೋ ಏನೋ ಈ ಪಿಡುಗು ಮಧ್ಯಮ ವರ್ಗದ ಜನರಲ್ಲಿ ಅತಿ ಹೆಚ್ಚಾಗಿದೆ. ಆದಕಾರಣ, ಭಾಗ್ಯಲಕ್ಷ್ಮಿ ಯೋಜನೆಯನ್ನು ಮಧ್ಯಮ ವರ್ಗದ ಜನರಿಗೂ ವಿಸ್ತರಿಸಿ ಭ್ರೂಣ ಹತ್ಯೆ ಪ್ರಕರಣಗಳನ್ನು ತಡೆಗಟ್ಟಬಹುದೇ ಎಂಬ ಬಗ್ಗೆ ತಜ್ಞರ ಅಭಿಪ್ರಾಯ ಆಧಾರಿಸಿ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ಸಚಿವರು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ, ಖಾಸಗಿ ವೈದ್ಯರು ನಡೆಸುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಎಲ್ಲರೂ ಚಿಂತಿಸಬೇಕು. ಅಲ್ಲದೆ, ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನಿನ ಜೊತೆಗೆ ಹೆಣ್ಣಿನ ಬಗ್ಗೆ ಎಲ್ಲರ ಮಾನಸಿಕತೆಯಲ್ಲೂ ಪರಿವರ್ತನೆಯಾಗಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದರು.

ಮೂರು ಹೆಣ್ಣು ಮಕ್ಕಳ ಹೆಮ್ಮೆಯ ತಂದೆಯಾದ ತಮಗೆ ಎಂಟು ಹೆಣ್ಣು ಮಕ್ಕಳಾಗಿದ್ದರೂ ಅಭ್ಯಂತರವಿರಲಿಲ್ಲ. ಆದರೆ ಅವಕಾಶ ದೊರೆಯಲಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ರಾಜ್ಯದಲ್ಲಿ ಗರ್ಭಪೂರ್ವ ಹಾಗೂ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಂ. ಮದನ್‌ಗೋಪಾಲ್ ಅವರು ಮಾತನಾಡಿ ಸಾಮಾಜಿಕ ದೃಷ್ಟಿಕೋನದ ಈ ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸಲು ನ್ಯಾಯಾಲಯಗಳು ಜಾಮೀನು ಕೂಡಾ ನಿರಾಕರಿಸಬೇಕು ಎಂದು ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಿ. ಎನ್. ಶ್ರೀನಿವಾಸಾಚಾರಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ನಿಲಯ ಮಿತಾಶ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X