ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ ಚುನಾವಣೆ : ಕಾಂಗ್ರೆಸ್-ಜೆಡಿಎಸ್ ಮರುಮೈತ್ರಿ

By Staff
|
Google Oneindia Kannada News

ಹುಬ್ಬಳ್ಳಿ, ಅ, 18 : ಮುಂಬರುವ ವಿಧಾನ ಪರಿಷತ್ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಜೊತೆ ಕೈಜೋಡಿಸುವುದಾಗಿ ರಾಜ್ಯ ಕಾಂಗ್ರೆಸ್ಶನಿವಾರ ಪ್ರಕಟಿಸಿದೆ.

ಜೆಡಿಎಸ್‌ನ ಬಸವರಾಜ್ ಹೊರಟ್ಟಿ ಅವರೊಡನೆ ಶನಿವಾರ ಇಲ್ಲಿ ಮಾತುಕತೆ ನಡೆಸಿದ ನಂತರ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಆರ್.ವಿ.ದೇಶಪಾಂಡೆ ಪತ್ರಕರ್ತರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ಬೇಷರತ್ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.

ಇದರೊಂದಿಗೆ, ಧರಂಸಿಂಗ್ ಸರ್ಕಾರಕ್ಕೆ ಕುಮಾರಸ್ವಾಮಿ ಬಣ 2006 ಜನವರಿಯಲ್ಲಿ ಬೆಂಬಲ ವಾಪಸ್ ಪಡೆದನಂತರ ಬೇರೆಯಾಗಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಮತ್ತೆ ಒಂದಾಗಿದೆ. ಪರಿಷತ್ ಚುನಾವಣೆಗಾಗಿ ಮಾತ್ರ ಈ ಮೈತ್ರಿ ಎಂದು ದೇಶಪಾಂಡೆ ಹೇಳಿದ್ದು, ವಿಧಾನಸಭೆ ಉಪಚುನಾವಣೆ ಕುರಿತಂತೆ ಮೈತ್ರಿ ಮುಂದುವರಿಸುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ.

ಕೋಮುವಾದಿ ಬಿಜೆಪಿ ವಿರುದ್ಧ ಜಾತ್ಯತೀತ ಪಕ್ಷಗಳು ಒಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ಗೆ ಕರೆ ನೀಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದ ದೇಶಪಾಂಡೆ, ಅವರೇ ಕರೆದಿರುವಾಗ ನಾವು ಬೇಡವೆನ್ನುವುದು ಸರಿಯಲ್ಲ ಎಂದು ಮರುಮೈತ್ರಿಯ ಬಗ್ಗೆ ಒಲವು ತೋರಿಸಿದ್ದರು. ಈಗ ಹೈಕಮಾಂಡ್ ಕೂಡ 'ಗೋಅಹೆಡ್' ಆದೇಶ ನೀಡಿದೆ.

ಒಮ್ಮೆ ದ್ರೋಹವೆಸಗಿದ ಜೆಡಿಎಸ್ ಪಕ್ಷವನ್ನು ನಂಬಬಾರದು ಮತ್ತು ಕೈಜೋಡಿಸಬಾರದು ಎಂದು ಕಾಂಗ್ರೆಸ್ ಒಳಗಿನಿಂದಲೇ ಕೂಗೆದ್ದಿತ್ತು. ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಕೂಡ ಹೈಕಮಾಂಡ್ ಆದೇಶಕ್ಕೆ ಬದ್ಧರಾಗಿರುವುದಾಗಿ ಮುಗುಮ್ಮಾಗಿ ಹೇಳಿದ್ದರು.

ಏತನ್ಮಧ್ಯೆ, ಜೆಡಿಎಸ್ ಜೊತೆಗಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಮುಖಂಡರು ಮತ್ತೆ ಉಪೇಕ್ಷಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಗದ್ದುಗೆಯನ್ನು ನಿರಾಕರಿಸಿದ್ದ ಹೈಕಮಾಂಡ್ ಮೈತ್ರಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಸಿದ್ದು ಅವರ ಅಭಿಪ್ರಾಯಕ್ಕೆ ಕವಡೆ ಕಿಮ್ಮತ್ತು ನೀಡಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X