ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರನ್ನು ಹತ್ತಿಕ್ಕಲು ಕ್ರಮ : ಯಡಿಯೂರಪ್ಪ

By Staff
|
Google Oneindia Kannada News

ಹುಬ್ಬಳ್ಳಿ, ಸೆ. 23 : ರಾಜ್ಯದ ಬೆಂಗಳೂರು, ಹುಬ್ಬಳ್ಳಿ ಹಾಗೂ ಕರಾವಳಿ ಪ್ರದೇಶಗಳು ಉಗ್ರರ ನೆಚ್ಚಿನ ತಾಣವಾಗಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಕಳವಳ ವ್ಯಕ್ತಪಡಿಸಿದರು.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಉಗ್ರರನ್ನು ಮಟ್ಟಹಾಕಲು ರಾಜ್ಯ ಪೊಲೀಸ್ ಪಡೆ ಸನ್ನದ್ಧವಾಗಿದ್ದು, ಅದಕ್ಕೆ ಬೇಕಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದರು. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಹಾಗೂ ಕರಾವಳಿಯ ಮಂಗಳೂರು, ಉಡುಪಿ ಹಾಗೂ ಮಣಿಪಾಲ್ ನಲ್ಲಿ ಉಗ್ರರ ಜಾಲವಿದೆ ಎನ್ನುವ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ಬೇಧಿಸಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಈಗಾಗಲೇ ತಂಡ ತನ್ನ ಕಾರ್ಯವನ್ನು ಆರಂಭಿಸಿದೆ ಎಂದು ಹೇಳಿದರು.

ಚರ್ಚ್ ಮೇಲಿನ ದಾಳಿಗೆ ತೀವ್ರ ವಿಷಾಧ ವ್ಯಕ್ತಪಡಿಸಿದ ಅವರು, ಅಲ್ಪಸಂಖ್ಯಾತರ ಮೇಲಿನ ದಾಳಿ ಸೇರಿ ಸಮಾಜದ ಶಾಂತಿ ಕದಡುವವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಪಕ್ಷಗಳು ತಮ್ಮ ಜವಾಬ್ದಾರಿಯನ್ನು ಮರೆತು ವರ್ತಿಸತೊಡಗಿವೆ. ಚರ್ಚ್ ಮೇಲೆ ದಾಳಿ ನಡೆದಿರುವುದು ಇದೇ ಸಲವಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಅಡಳಿತದಲ್ಲಿದ್ದಾಗ ರಾಜ್ ಕುಮಾರ್ ಅಪಹರಣ, ನಾಗಪ್ಪ ಹತ್ಯೆ, ಕಾವೇರಿ ಗಲಾಟೆ ಹೀಗೆ ಅನೇಕ ಸಮಸ್ಯೆಗಳು ಆಗಿನ ಸರ್ಕಾರಕ್ಕೆ ಎದುರಾಗಿದ್ದವು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದ ನಾನು ಸರ್ಕಾರಕ್ಕೆ ಸಹಕಾರ ನೀಡಿದ್ದೇನೆ. ಆದರೆ ಇದೀಗ ಪ್ರತಿಪಕ್ಷದ ಮುಖಂಡರು ಪ್ರಚೋದನಕಾರಿ ಹೇಳಿಕೆ ನೀಡಿ ಜನರನ್ನು ಮತ್ತಷ್ಟು ಉದ್ರಿಕ್ತರನ್ನಾಗಿ ಮಾಡುತ್ತಿರುವುದು ಖಂಡನೀಯ ಎಂದು ಯಡಿಯೂರಪ್ಪ ಕಿಡಿಕಾರಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X