ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಗಳಿಗೆ ಬೆವರಿಳಿಸಿದ ಆರ್ಚ್ ಬಿಷಪ್

By Staff
|
Google Oneindia Kannada News

archbishop slams yeddyurappaಬೆಂಗಳೂರು, ಸೆ.23: ''ಮಿಸ್ಟರ್ ಯಡಿಯೂರಪ್ಪ ನಮ್ಮ ಮನಸಿಗೆ ಸಾಕಷ್ಟು ಘಾಸಿಯಾಗಿದೆ. ನಮಗೆ ತುಂಬಾ ನೋವಾಗುತ್ತಿದೆ. ಇದನ್ನು ಸಾರ್ವಜನಿಕವಾಗಿಯೇ ಹೇಳುತ್ತಿದ್ದೇನೆ. ಭಾವನೆಗಳನ್ನು ವ್ಯಕ್ತಪಡಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ'' ಹೀಗೆಂದು ತಮ್ಮ ಅಳಲನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದೆ ತೋಡಿಕೊಂಡವರು ಮತ್ತ್ಯಾರು ಅಲ್ಲ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್.

ಸೋಮವಾರ ಆರ್ಚ್ ಬಿಷಪ್ ರನ್ನು ಭೇಟಿಯಾಗಲು ಮುಖ್ಯಮಂತ್ರಿಗಳು ಬೆಂಗಳೂರಿನ ಅವರ ನಿವಾಸಕ್ಕೆ ಆಗಮಿಸಿದ್ದರು. ಅವರನ್ನು ಕಂಡೊಡನೆ ಆರ್ಚ್ ಬಿಷಪ್ ರ ಆಕ್ರೋಶ ಕಟ್ಟೆಯೊಡಿಯಿತು. ನೋವು ಸಿಟ್ಟಿನ ರೂಪದಲ್ಲಿ ಪ್ರಕಟವಾಯಿತು. ಇದನ್ನು ನಿರೀಕ್ಷಿಸಿರದ ಯಡಿಯೂರಪ್ಪ ಹಾಗೂ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಅರೆಕ್ಷಣ ದಂಗಾಗಿ ಹೋದರು. ಕಡೆಗೆ ಸಾವರಿಸಿಕೊಂಡು '' ಈ ಘಟನೆಗಳಿಂದ ನಮ್ಮ ಮನಸ್ಸಿಗೂ ನೋವಾಗಿದೆ. ಮುಂದೆ ಅಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಂಡಿದ್ದೇನೆ'' ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಕರ್ನಾಟಕ ಪ್ರಾಂತೀಯ ಕೆಥೋಲಿಕ್ ಧರ್ಮಾಧ್ಯಕ್ಷರುಗಳ ಸಮಿತಿ ಅಧ್ಯಕ್ಷರೂ ಆಗಿರುವ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಭಾವುಕರಾಗಿ ಮಾತನಾಡುತ್ತಾ, ''ಕ್ರೈಸ್ತ ಮಂದಿರದ ಪವಿತ್ರ ಸಂಕೇತವಾದ, ಕ್ರೈಸ್ತರು ಬಲವಾಗಿ ನಂಬಿ ಪೂಜಿಸುವ ಪರಮ ಪ್ರಸಾದವನ್ನು ನೆಲಕ್ಕೆ ಚೆಲ್ಲಿ ತುಳಿಯಲಾಗಿದೆ. ನಿಮ್ಮ ದೇವಸ್ಥಾನಗಳ ಗರ್ಭಗುಡಿ ನಾಶಪಡಿಸಿದರೆ ಏನು ಮಾಡುತ್ತೀರಿ'' ಎಂದು ಪ್ರಶ್ನಿಸಿದರು. ನಂತರ ಮುಖ್ಯಮಂತ್ರಿಗಳನ್ನು ತಮ್ಮನಿವಾಸದೊಳಗೆ ಕರೆದೊಯ್ದ ಅವರು, ರಾಜ್ಯದಲ್ಲಿ ಚರ್ಚ್ ಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ನ್ಯಾಯಾಂಗ ತನಿಖೆ ಒಪ್ಪಿಸುವಂತೆ ಆಗ್ರಹಿಸಿದರು.

ಅಲ್ಪ ಸಂಖ್ಯಾತರಾದ ಕ್ರೈಸ್ತರಿಗೂ ಇರುವ ಸಾಂವಿಧಾನಿಕ ಹಕ್ಕನ್ನು ರಕ್ಷಿಸಬೇಕು. ಅಲ್ಪಸಂಖ್ಯಾತರ ಪೂಜಾಸ್ಥಳಗಳನ್ನು ಮತಾಂಧರು, ಸಮಾಜಘಾತುಕ ಶಕ್ತಿಗಳಿಂದ ಕಾಪಾಡಬೇಕು. ಯಾವುದೇ ಧಾರ್ಮಿಕ ಪೂಜಾ ಸ್ಥಳಗಳಿಗೆ ಪೊಲೀಸರು ನುಗ್ಗದಂತೆ ಕ್ರಮಕೈಗೊಳ್ಳಬೇಕು. ಚರ್ಚ್ ಗಳ ಒಳಗೆ ನುಗ್ಗಿ ಅಮಾಯಕರು, ಕನ್ಯಾ ಸ್ತ್ರೀಯರು, ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಕೊನೆಗೆ ಸಿಹಿ ತಿನ್ನಿಸಿದರು
ಇಷ್ಟೆಲ್ಲಾ ಮಾತನಾಡಿದ ನಂತರ ಆರ್ಚ್ ಬಿಷಪ್ ನೊಂದುಕೊಂಡರು. ಕೊನೆಗೆ ಮುಖ್ಯಮಂತ್ರಿಗಳ ಬಾಯಿಗೆ ಒಂದಷ್ಟು ಸಿಹಿ ಹಾಕಿ ಘಟನೆ ಮರೆಯುವಂತೆ ಕೋರಿದರು ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಘಟನೆಯ ಬಗ್ಗೆ ವಿವರಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X