ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಓಡಿ ಬಲೆಗೆ ಬಿದ್ದ ನಕಲಿ ಶಿಕ್ಷಕರ ಜಾಲ

By Staff
|
Google Oneindia Kannada News

ಬೆಂಗಳೂರು, ಸೆ. 19 : ಶಿಕ್ಷಣ ಇಲಾಖೆಯಲ್ಲಿ ತೀವ್ರ ಕೋಲಾಹಲವೆಬ್ಬಿಸಿದ್ದ ನಕಲಿ ಶಿಕ್ಷಕರ ನೇಮಕದ ಬಂಡವಾಳವನ್ನು ಬಿಚ್ಚಿಟ್ಟಿರುವ ರಾಜ್ಯ ಸಿಓಡಿ ಇಲಾಖೆ ಪ್ರಕರಣದ ಮುಖ್ಯ ವ್ಯಕ್ತಿಯನ್ನು ಬೆಳಕಿಗೆ ತಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 75 ಮಂದಿಯನ್ನು ಬಂಧಿಸುವುದರೊಂದಿಗೆ 1200 ಸಾಕ್ಷ್ಯಗಳನ್ನು ವಿಚಾರಣೆ ನಡೆಸಿ, ಅಂತಿಮವಾಗಿ ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ದೋಷಾರೋಪಣೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಈ ವಿಷಯವನ್ನು ಸ್ಪಷ್ಟಪಡಿಸಿರುವ ಸಿಓಡಿ ಎಡಿಜಿಪಿ ಅಜಯಕುಮಾರ್ ಸಿಂಗ್, ಪ್ರಕರಣದ ಪ್ರಮುಖ ಸೂತ್ರದಾರ ಶಿವಾನಂದ ಶಿವಪ್ಪ ಕನ್ನೇಶ್ವರ ಅಲಿಯಾಸ್ ಬಸವರಾಜ ಬಿಡದಹಳ್ಳಿ ನಕಲಿ ದಾಖಲೆ ಸೃಷ್ಟಿಸಿ ಅನೇಕ ಮಂದಿಗೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಕೊಡಿಸಿರುವುದು ದೃಢಪಟ್ಟಿದೆ. ನಕಲಿ ಶಿಕ್ಷಕರ ಪ್ರಕರಣಕ್ಕೆ ಸಂಬಂಧಿಸಿದಂತೆ 57 ಮಂದಿಯ ವಿರುದ್ಧ ವಂಚನೆ, ಮೋಸ, ಸುಳ್ಳು ದಾಖಲಾತಿ ಸೃಷ್ಟಿ ಹಾಗೂ ಸಾರ್ವಜನಿಕ ದಾಖಲೆ ಪುಸ್ತಕಗಳ ತಿದ್ದುಪಡಿ, ನಕಲಿ ದಾಖಲೆ ಸೃಷ್ಟಿಸಿ ಅದನ್ನು ತಿಳಿದೋ ತಿಳಿಯದೋ ನೈಜ ದಾಖಲಾತಿಯನ್ನು ಉಪಯೋಗಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ವಿರುದ್ಧ ಸೆ. 16 ರಂದು ದೋಷಾರೋಪಣೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

1997 ರಿಂದ 2003ರ ವರೆಗೆ ಶಿಕ್ಷಕರಾಗಿ 59 ಮಂದಿ ನೇಮಕಗೊಂಡಿರುವುದು ತನಿಖೆಯಿಂದ ದೃಢಪಟ್ಟಿದೆ. 2004ರ ವರೆಗೆ ಇವರುಗಳ ಸಂಬಳ ರೂಪದಲ್ಲಿ 33,25,650 ರುಪಾಯಿಗಳನ್ನು ಪಡೆದಿರುತ್ತಾರೆ ಎಂದು ಅವರು ವಿವರಿಸಿದರು.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 1229 ಮಂದಿಯನ್ನು ವಿಚಾರಣೆ ಮಾಡಲಾಗಿದ್ದು, ಪ್ರಕರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ 15 ಮಂದಿ ಭಾಗಿಯಾಗಿರುವುದು ತಿಳಿದು ಬಂದಿದ್ದರಿಂದ ಅವರನ್ನು ಬಂಧಿಸಲಾಗಿತ್ತು. ಆದರೆ ಪ್ರಸ್ತುತ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇನ್ನು ಕೆಲವರು ನಿವೃತ್ತಿ ಹೊಂದಿದ್ದಾರೆ ಹಾಗೂ ಪ್ರಕರಣದಲ್ಲಿರುವ ಕೆಲವರು ಅಮಾನತ್ತಿನಲ್ಲಿದ್ದಾರೆಂದು ಅವರು ತಿಳಿಸಿದರು.

ಈ ಪ್ರಕರಣದ ಪ್ರಮುಖ ಸೂತ್ರದಾರ ಶಿವಾನಂದ ಶಿವಪ್ಪ ಕನ್ನೇಶ್ವರ ಅಲಿಯಾಸ್ ಬಸವರಾಜ ಬಿಡದಹಳ್ಳಿ ನಕಲಿ ದಾಖಲೆ ಸೃಷ್ಟಿಸಿ ಅನೇಕ ಮಂದಿಗೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಕೊಡಿಸಿದ ವೃತ್ತಾಂತ ನಿಜಕ್ಕೂ ಬೆರಗುಗೊಳಿಸುವಂತಾದ್ದು ಎಂದು ಡಿಐಜಿ ಮಾಲಿನಿ ಕೃಷ್ಣಮೂರ್ತಿ ತಿಳಿಸಿದರು. ಗುಮಾಸ್ತವಾಗಿದ್ದ ಈತ, ನಕಲಿ ದಾಖಲೆ ಸಲ್ಲಿಸಿ ಶಿಕ್ಷಣ ಇಲಾಖೆಯಲ್ಲಿ ಎಫ್ ಡಿಎ ಆಗಿ ನಕಲಿ ಆದೇಶವನ್ನೇ ಸೃಷ್ಟಿಸಿ ಕೆಲಸ ಮಾಡುತ್ತಿದ್ದ. ಕೆಲ ದಿನ ಶಿಕ್ಷಣ ಇಲಾಖೆಯಲ್ಲಿ ನಡೆಯುವ ವರ್ಗಾವಣೆ, ಬಡ್ತಿ ಮತ್ತಿತರ ಆದೇಶಗಳನ್ನು ಗಮನಿಸಿದ ನಂತರ ದೊಡ್ಡ ಹಗರಣವನ್ನೇ ಸೃಷ್ಟಿಸಲು ಈತ ಕೈಹಾಕಿದ್ದ ಎಂದು ಮಾಲಿನಿ ಕೃಷ್ಣಮೂರ್ತಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X