ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ಪತ್ರಕರ್ತ ಎಚ್.ವೈ.ಶಾರದಾಪ್ರಸಾದ್ ನಿಧನ

By Staff
|
Google Oneindia Kannada News

Journalist H Y Sharada Prasadನವದೆಹಲಿ, ಸೆ. 3 : ಮೂವರು ಪ್ರಧಾನಿಗಳಿಗೆ ಮಾಧ್ಯಮ ಸಲಹೆಗಾರರಾಗಿದ್ದ ಕನ್ನಡಿಗ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತರು ಮತ್ತು ಅಂಕಣಕಾರ ಎಚ್.ವೈ. ಶಾರದಾ ಪ್ರಸಾದ್ ಮಂಗಳವಾರ ಮಧ್ಯಾಹ್ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

84 ವರ್ಷದ ಶಾರದಾ ಪ್ರಸಾದ್ ಪಾರ್ಕಿನ್ ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದರು. ಎಂಟು ತಿಂಗಳ ಹಿಂದೆ ಜಾರಿಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಅವರು ಪತ್ನಿ ಕಮಲಮ್ಮ ಮತ್ತು ಇಬ್ಬರು ಪುತ್ರರನ್ನು ಆಗಲಿದ್ದಾರೆ. ಅವರ ಅಂತ್ಯಕ್ರಿಯೆ ಲೋಧಿ ಗಾರ್ಡನ್ ನಲ್ಲಿರುವ ಚಿತಾಗಾರದಲ್ಲಿ ಮಂಗಳವಾರ ನಡೆಯಿತು. ಇಂದಿರಾಗಾಂಧಿ ಪ್ರಧಾನಿಯಾಗಿದ್ದ 15 ವರ್ಷಗಳ ಕಾಲವೂ ಅವರ ಮಾಧ್ಯಮ ಸಲಹೆಗಾರರಾಗಿದ್ದ ಎಚ್.ವೈ.ಶಾರದಾಪ್ರಸಾದ್ ಕೇವಲ ಪ್ರಧಾನಿಯ ಭಾಷಣಗಳನ್ನು ಸಿದ್ಧಪಡಿಸುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಿಗೆ ಇಂದಿರಾಗಾಂಧಿ ಅತ್ಯಂತ ಮಹತ್ವದ ಸಂದರ್ಭದಲ್ಲಿ ಶಾರದಾ ಪ್ರಸಾದ್ ಜತೆ ಮಂತ್ರಾಲೋಚನೆ ನಡೆಸುತ್ತಿದ್ದರು. ದೇಶದ ಮೇಲೆ ಇಂದಿರಾ ತುರ್ತು ಪರಿಸ್ಥಿತಿ ಹೇರುವ ನಿರ್ಧಾರ ತೆಗೆದುಕೊಂಡಿದ್ದಕ್ಕೂ ಅವರು ಸಾಕ್ಷಿಯಾಗಿದ್ದರು.

ಪ್ರಧಾನಿಗಳಾಗಿದ್ದ ಮೂರಾರ್ಜಿ ದೇಸಾಯಿ ಮತ್ತು ರಾಜೀವ್ ಗಾಂಧಿ ಅವರಿಗೂ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ ಹೆಗ್ಗಳಿಕೆಯೂ ಶಾರದಾ ಪ್ರಸಾದ್ ಅವರದ್ದಾಗಿತ್ತು. ಹಲವು ವರ್ಷಗಳ ಕಾಲ ಯೋಜನಾ ಆಯೋಗ ಹೊರತರುತ್ತಿದ್ದ 'ಯೋಜನಾ' ಪತ್ರಿಕೆಯ ಸಂಪಾದಕರಾಗಿದ್ದ ಅವರು, ಭಾರತೀಯ ಸಮೂಹ ಸಂವಹನ ಸಂಸ್ಥೆಯ ನಿರ್ದೇಶಕರೂ ಆಗಿದ್ದರು.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದರು. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಅವರು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ಬಳಿಕ ಮುಂಬಯಿಯಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಅವರು 1945ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. 1955 ರಲ್ಲಿ ಅವರು ಪತ್ರಿಕೋಧ್ಯಮದ ಉನ್ನತ ಅಧ್ಯಯನಕ್ಕಾಗಿ ಹಾರ್ವರ್ಡ್ ವಿಶ್ವ ವಿದ್ಯಾಲಯ ಫೆಲೋ ಕೂಡ ಆಗಿದ್ದರು.

(ಸ್ನೇಹಸೇತು:ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X