ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡ್ವಾಣಿ ದಾಳಿಗೆ ಲೋಕಸಭೆಯಲ್ಲಿ ಚಿತ್ತಾದ ಪ್ರಧಾನಿ

By Staff
|
Google Oneindia Kannada News

ನವದೆಹಲಿ, ಜು. 21 : ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಕೇಂದ್ರ ಸರ್ಕಾರದ ಎರಡು ದಿನಗಳ ವಿಶೇಷ ಅಧಿವೇಶನ ಆರಂಭವಾಗಿದೆ. ಲೋಕಸಭೆ ಪ್ರತಿಪಕ್ಷದ ನಾಯಕ ಎಲ್.ಕೆ.ಆಡ್ವಾಣಿ ಅಕ್ಷರಶಃ ಯುಪಿಎ ಸರ್ಕಾರದ ಮೇಲೆ ವಾಕ್ದಾಳಿ ಮಾಡಿದರು. ಪ್ರತಿ ಮಾತಿನಲ್ಲಿ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಅವರು ಭಾರತ ಕಂಡ ಅತ್ಯಂತ ಕೆಟ್ಟ ಸರ್ಕಾರ ಎಂದು ಯುಪಿಎ ಸರ್ಕಾರವನ್ನು ಜರಿದರು.

ಲೋಕಸಭಾಧ್ಯಕ್ಷ ಸೋಮನಾಥ್ ಚಟರ್ಜಿ ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನಂತರ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಲು ಆಡ್ವಾಣಿ ಅವರಿಗೆ ಅವಕಾಶ ನೀಡಿದರು. ಸರ್ಕಾರದ ಮೇಲೆ ಪ್ರಹಾರ ನಡೆಸಲು ಸಂಪೂರ್ಣ ತಯಾರಿ ನಡೆಸಿಕೊಂಡ ಬಂದಿದ್ದ ಎಲ್.ಕೆ.ಆಡ್ವಾಣಿ ಸರ್ಕಾರವನ್ನು ಪ್ರತಿ ಹಂತದಲ್ಲೂ ತರಾಟೆಗೆ ತೆಗೆದುಕೊಂಡರು. ಭಾರತದ ಲೋಕಸಭೆ ಇತಿಹಾಸದಲ್ಲಿ ವಿಶ್ವಾಸಮತದ ಅಡಿಯಲ್ಲಿ ಎರಡು ದಿನಗಳ ಕಾಲ ಅಧಿವೇಶನ ಕರೆದಿರುವುದು ಇದೇ ಪ್ರಥಮ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಯುಪಿಎ ಸರ್ಕಾರ ಯಾರಿಗೋಸ್ಕರ ಸರ್ಕಾರ ನಡೆಸುತ್ತಿದೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಯುಪಿಎ ಸರ್ಕಾರ ಮಾಡಿಕೊಳ್ಳಲು ಮುಂದಾಗಿರುವ ಅಮೆರಿಕದೊಂದಿಗಿನ ಅಣು ಒಪ್ಪಂದ ಅಂದರೆ ಏನು, ಅದು ಯಾರಿಗೆ ಗೊತ್ತಿದೆ. ಅದನ್ನು ಯಾಕೆ ಜನಸಾಮಾನ್ಯರ ಮುಂದೆ ಇಡುತ್ತಿಲ್ಲ. ಅವರೊಂದಿಗಿನ ಒಪ್ಪಂದದ ಒಳಗುಟ್ಟೇನು. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿರುವ ಭಾರತವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಅಂತ ಮಾಡಿದ್ದೀರಿ. ನಿಮ್ಮ ಉದ್ದೇಶವಾದರೂ ಏನು. ಅಮೆರಿಕದೊಂದಿಗಿನ ಅಣು ಒಪ್ಪಂದ ಸಂರಕ್ಷಣಾ ಒಪ್ಪಂದಗಳನ್ನು ಯಾಕೆ ಮುಚ್ಚಿಟ್ಟಿರಿ ಎನ್ನುವುದನ್ನ ಮೊದಲು ಸದನದ ಮೂಲಕ ದೇಶದ ಜನತೆ ಸ್ಪಷ್ಟಪಡಿಸಬೇಕು. ಒಪ್ಪಂದ ನಮಗೆ ಕೂಡಾ ಒಪ್ಪಿಗೆ ಇದೆ. ಆದರೆ, ಆ ಒಪ್ಪಂದಕ್ಕೆ ನಿಮಗೆ ಯಾವ ಅರ್ಹತೆ ಇದೆ ಎನ್ನುವುದನ್ನು ಹೇಳಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಆಡ್ವಾಣಿ ಮಾತಿನಿಂದ ಕುಪಿತರಾದ ಕಾಂಗ್ರೆಸ್ ಸಂಸದರು ಸಂಸತ್ತಿನಲ್ಲಿ ಗದ್ದಲ ಎಬ್ಬಿಸಲು ಮುಂದಾದರು. ಆಗ ಸ್ಪೀಕರ್ ಸೋಮನಾಥ್ ಚಟರ್ಜಿ ಆಕ್ರೋಶಭರಿತರಾಗಿ ಇದು ದೇಶದ ಪ್ರಶ್ನೆ. ಭಾರಿ ಮಹತ್ವವಿರುವ ಅಧಿವೇಶನದಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಗದರಿದಾಗ ಸಂಸದರು ಸುಮ್ಮನಾದರು.

ಮತ್ತೆ ಭಾಷಣ ಮುಂದುವರೆಸಿದ ಆಡ್ವಾಣಿ, ಲೋಕಸಭೆಯಲ್ಲಿ ಬಹುಮತ ಕಳೆದುಕೊಂಡ ಮೇಲೂ ವಿಯನ್ನಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದು ಘೋರ ಅಪರಾಧ. ಪ್ರಜಾಪ್ರಭುತ್ವಕ್ಕೆ ಪ್ರಧಾನಮಂತ್ರಿ ಅವಮಾನ ಮಾಡಿದ್ದಾರೆ. ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದರೂ ಹೇಗೆ ಪರಮಾಣು ಒಪ್ಪಂದಕ್ಕೆ ಮುಂದಾದಿರಿ, ಎನ್ನುವುದನ್ನ ಹೇಳಿ. ನಿಮ್ಮ ಉದ್ದೇಶ ನಮಗಲ್ಲ, ಈ ದೇಶದ 100 ಕೋಟಿ ಜನ ಕೇಳುತ್ತಿದ್ದಾರೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮೊದಲು ಹೇಳಬೇಕು. ಪರಮಾಣು ಒಪ್ಪಂದ ದೇಶಕ್ಕೆ ಅವಶ್ಯಕತೆಯಿಲ್ಲ. ಹಳ್ಳಿಯ ಜನರಿಗೆ ಕುಡಿಯಲು ನೀರಿಲ್ಲ. ಸರಿಯಾದ ರಸ್ತೆ, ವಿದ್ಯುತ್ ಕ್ಷಾಮ, ಬರಗಾಲ, ನಿರುದ್ಯೋಗದಂತಹ ಮೂಲಭೂತ ಸೌಕರ್ಯಗಳನ್ನು ನೀಡಬೇಕಿರುವ ಸರ್ಕಾರ ಪರಮಾಣು ಒಪ್ಪಂದಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ ಸಂಗತಿ. ದೇಶದ ಜನರಿಗೆ ಈ ಬಗ್ಗೆ ಗೊತ್ತಿಲ್ಲ , ಒಪ್ಪಂದ ಯಾರಿಗೆ ಬೇಕು ಸ್ವಾಮಿ, ತಿನ್ನಲು ಅನ್ನವಿಲ್ಲದಾಗ ಇದೇನು ಸರ್ಕಾರದ ಹುಚ್ಚಾಟ. ಜನರು ನಮಗೆ ಮತ ಹಾಕಿರುವುದು ಜನರ ಸೇವೆ ಮಾಡಲಿ ಅಂತ. ಅದನ್ನು ಬಿಟ್ಟು ನಿಮ್ಮ ಸರ್ಕಾರ ಅಮೆರಿಕವನ್ನು ಉದ್ಧಾರ ಮಾಡಲು ಹೊರಟಿದೆಯಲ್ಲ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಯುಪಿಎ ಸರ್ಕಾರಕ್ಕೆ ಬಹುಮತವಿಲ್ಲ. ಈಗಾಗಲೇ ತುರ್ತು ನಿಗಾ ಘಟಕದಲ್ಲಿ ಸರ್ಕಾರವನ್ನು ಇರಿಸಲಾಗಿದೆ. ನಾಳೆಯ ಹೊತ್ತಿಗೆ ಸರ್ಕಾರದ ಉಸಿರಾಟ ನಿಲ್ಲಲಿದೆ ಎಂದು ವ್ಯಂಗ್ಯವಾಡಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X