ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಸದಾನಂದಗೌಡ ಕೊಕ್?

By Staff
|
Google Oneindia Kannada News

ಬೆಂಗಳೂರು, ಜು. 21 : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ವಾಧಿಕಾರ ಧೋರಣೆಯ ವಿರುದ್ಧ ಮುನಿಸಿಕೊಂಡಿರುವ ಡಿ.ವಿ.ಸದಾನಂದಗೌಡರನ್ನು ಪಕ್ಷದ ರಾಜ್ಯಾದ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ತಂತ್ರಗಾರಿಕೆ ತೆರೆಮೆರೆಯಲ್ಲಿ ನಡೆದಿದೆ. ಬಿಜೆಪಿ ಸರ್ಕಾರದ ಬುಡವನ್ನು ಭದ್ರಗೊಳಿಸಿದ ಬಳ್ಳಾರಿ ಗಣಿಧಣಿಗಳು ಪಕ್ಷದ ಮೇಲೆ ಇನ್ನಷ್ಟು ಹಿಡಿತ ಸಾಧಿಸುವ ಕಾರ್ಯಚರಣೆಗೆ ಮುಂದಾಗಿರುವ ಸುದ್ದಿ ದಟ್ಟವಾಗಿದೆ. ಆ ಸ್ಥಾನಕ್ಕೆ ಅನಂತಕುಮಾರ್ ಅವರ ಆಪ್ತ ಎನ್ನಲಾದ ವಾಮನಾಚಾರ್ಯ ಅವರನ್ನು ಅಧ್ಯಕ್ಷರನ್ನಾಗಿಸುವ ಒಳಸಂಚನ್ನು ಬಳ್ಳಾರಿಯ ಗಣಿಧಣಿಗಳು ನಡೆಸಿರುವ ಬಗ್ಗೆ ವರದಿಯಾಗಿದೆ.

ಸಧ್ಯಕ್ಕೆ ಬಿಎಸ್ ವೈ ಮತ್ತು ಸದಾನಂದಗೌಡರ ನಡುವೆ ಉಂಟಾಗಿರುವ ವೈಮನಸ್ಸನ್ನು ದಾಳವಾಗಿ ಮಾಡಿಕೊಂಡು ತಮ್ಮ ಗುರಿ ಸಾಧನೆಗೆ ರೆಡ್ಡಿಗಳು ಹವಣಿಸುತ್ತಿದ್ದಾರೆ. ವಿಧಾನಸಭೆ ಫಲಿತಾಂಶ ಬರುವವರೆಗೂ ಯಡಿಯೂರಪ್ಪ ಮತ್ತು ಸದಾನಂದಗೌಡರ ಸ್ನೇಹ ಉತ್ತಮವಾಗಿಯೇ ಇತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಲೂ ಅವರ ವರ್ತನೆಯಲ್ಲಿ ಬದಲಾವಣೆಯಾಗಿದೆ ಎನ್ನುವ ವಿಷಯ ಸದಾನಂದಗೌಡರಿಗೆ ಬೇಸರ ತರಿಸಿದೆ. ಇತ್ತೀಚಿನ ದಿನಗಳಲ್ಲಿ ನನ್ನ ಮಾತುಗಳಿಗೆ ಪಕ್ಷದಲ್ಲಿ ಬೆಲೆಯಿಲ್ಲ. ಹಾಗಿದ್ದ ಮೇಲೆ ಪಕ್ಷದ ಅಧ್ಯಕ್ಷನಾಗಿ ಏನು ಪ್ರಯೋಜನ ಎನ್ನುವ ಅಳಲನ್ನು ಸದಾನಂದಗೌಡ ತಮ್ಮ ಅಪ್ತರ ಬಳಿ ತೋಡಿಕೊಂಡಿದ್ದಾರೆ.

ಪಕ್ಷ ಮತ್ತು ಸಂಘ ಪರಿವಾರದಲ್ಲಿ ಹಲವು ವರ್ಷಗಳಿಂದ ದುಡಿದವರಿಗಿಂತ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ, ಆಪ್ತ ಕಾರ್ಯದರ್ಶಿ ಸಿದ್ಧಲಿಂಗಸ್ವಾಮಿ ಮತ್ತು ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ ಅವರೇ ಪ್ರಭಾವಿಗಳಾಗಿರುವುದು. ಮತ್ತು ಸರ್ಕಾರದಲ್ಲಿ ಈ ಮೂವರ ಮಾತುಗಳು ಮಾತ್ರ ನಡೆಯುತ್ತಿರುವುದು ಸದಾನಂದಗೌಡರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಜತೆಗೆ ಯಡಿಯೂರಪ್ಪ ಅವರ ವಿರುದ್ಧ ಪಕ್ಷದಲ್ಲಿ ಅಪಸ್ವರ ಇರಬಾರದು ಎಂಬ ಹೇಳುವ ಮೂಲಕ ಸದಾನಂದಗೌಡರನ್ನು ಪದಚ್ಯುತಿಗೊಳಿಸಲು ಗಣಿಧಣಿಗಳು ಸಜ್ಜಾಗಿದ್ದಾರೆ. ಗಣಿಧಣಿಗಳ ಮಾತು ಕೇಳಿ ಸದಾನಂದಗೌಡರ ಅಧ್ಯಕ್ಷ ಸ್ಥಾನದಿಂದ ಕೆಳಗಿಸಲು ಯಡಿಯೂರಪ್ಪ ಮುಂದಾಗುವರೇ ?

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X