ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ತ್ಯಜಿಸಲು ಆರ್.ಎಲ್.ಜಾಲಪ್ಪ ನಿರ್ಧಾರ?

By Staff
|
Google Oneindia Kannada News

ಬೆಂಗಳೂರು, ಜು. 13 : ಕಾಂಗ್ರೆಸ್ ಮುಖಂಡ ಹಾಗೂ ಚಿಕ್ಕಬಳ್ಳಾಪುರ ಸಂಸದ ಆರ್.ಎಲ್.ಜಾಲಪ್ಪ ಭಾರತೀಯ ಜನತಾ ಪಕ್ಷವನ್ನು ಸೇರುವುದು ಬಹುತೇಕ ಖಚಿತವಾಗಿದ್ದು, ಆಗಸ್ಟ ತಿಂಗಳಲ್ಲಿ ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಆದರೆ ಜು. 22 ರಂದು ಸಂಸತ್ತಿನಲ್ಲಿ ಯುಪಿಎ ಬಹುಮತ ಸಾಬೀತುಪಡಿಸಿಬೇಕಿರುವ ಹಿನ್ನಲೆಯಲ್ಲಿ ಜಾಲಪ್ಪ ಯಾವ ನಡೆ ಅನುಸರಿಸುತ್ತಾರೆ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಕೆಲ ವರ್ಷಗಳಿಂದ ತಮ್ಮನ್ನು ನಿರ್ಲಕ್ಷ್ಯ ಮಾಡಲಾಗಿದೆ. ಯಾವ ಸಂದರ್ಭದಲ್ಲಿಯೂ ಕೂಡಾ ನನ್ನನ್ನು ಗಣನೆಗೆ ತಗೆದುಕೊಡಿಲ್ಲ. ಒಂದರ್ಥದಲ್ಲಿ ತಮ್ಮನ್ನು ಕಾಂಗ್ರೆಸ್ ನಾಯಕರು ಸಂಪೂರ್ಣವಾಗಿ ಮೂಲೆಗುಂಪು ಮಾಡಿದ್ದಾರೆ ಎನ್ನುವ ಅಸಮಾಧಾನ ಜಾಲಪ್ಪ ಅವರನ್ನು ಬಹುದಿನಗಳಿಂದ ಕಾಡತೊಡಗಿದೆ. ಆದ್ದರಿಂದ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವುದರ ಜತೆಗೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತು ಅನೇಕ ಕಡೆಗಳಿಂದ ಕೇಳಿ ಬಂದಿದೆ.

ಅಣು 'ಬಂಧ' ಬಿಕ್ಕಟ್ಟಿನಲ್ಲಿ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿರುವ ಹಿನ್ನಲೆಯಲ್ಲಿ ಇದೇ ಜು. 22 ರಂದು ಯುಪಿಎ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಿಬೇಕಿದ್ದು, ಆಗ ಕಾಂಗ್ರೆಸ್ ಸಂಸದರಾಗಿರುವ ಜಾಲಪ್ಪ ಯಾರಿಗೆ ಮತ ನೀಡುತ್ತಾರೆ ಎನ್ನುವುದು ತೀವ್ರ ಕುತೂಹಲಕ್ಕೆ ಎಡೆಮಾಡಿದೆ. ಆಗಸ್ಟ್ ತಿಂಗಳಲ್ಲಿ ತಮ್ಮ ರಾಜಕೀಯ ನಿರ್ಧಾರ ಕೈಗೊಳ್ಳುವುದಾಗಿ ಹೇಳಿರುವ ಇವರು, ವಿಶ್ವಾಸಮತ ದಿನದಂದು ಗೈರು ಹಾಜರಾಗಲಿದ್ದಾರೆಯೇ, ಕಾಂಗ್ರೆಸ್ ಪರ ಮತ ನೀಡುತ್ತಾರೆಯೇ ಅಥವಾ ಅದಕ್ಕೂ ಮುಂಚೆ ಕಾಂಗ್ರೆಸ್ ಪಕ್ಷದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎನ್ನುವ ಕುರಿತು ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆ ನಡೆದಿದೆ. ಒಂದು ಪ್ರಕಾರ ಜಾಲಪ್ಪ ವಿಶ್ವಾಸಮತ ದಿನದಂದು ಆನಾರೋಗ್ಯ ನಿಮಿತ್ತ ಗೈರು ಹಾಜರಾಗಲಿದ್ದಾರೆ ಎನ್ನಲಾಗಿದೆ. ವಿಶ್ವಾಸಮತದ ಹಿನ್ನಲೆಯಲ್ಲಿ ಕಾಂಗ್ರೆಸ್ ಎಲ್ಲ ಸಂಸದರಿಗೂ ವಿಫ್ ಜಾರಿಗೆ ಮಾಡುವುದು ನಿಶ್ಚಿತ. ಆದರೆ ಜಾಲಪ್ಪ ಗೈರು ಹಾಜರಾದರೆ ಪಕ್ಷದ ಹೈಕಮಾಂಡ್ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಿದಲ್ಲಿ ಅಮಾನತು ಮಾಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಸಂಕಷ್ಟದಲ್ಲಿ ಸಿಲುಕಿರುವ ಯುಪಿಎಗೆ ಈಗ ಒಂದೊಂದು ಮತಗಳೂ ಕೂಡಾ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿವೆ. ದೇವೇಗೌಡರು ಯುಪಿಎಗೆ ಮತನೀಡುವ ಯಾವುದೇ ಭರವಸೆಯನ್ನು ನೀಡಿಲ್ಲ. ಈ ಹಿನ್ನಲೆಯಲ್ಲಿ ಜಾಲಪ್ಪ ಈ ರೀತಿ ಮಾಡಿದಲ್ಲಿ ತಲೆ ದಂಡ ತಪ್ಪುವುದಿಲ್ಲ.

ಜಾಲಪ್ಪ ಪುತ್ರ ದೊಡ್ಡಬಳ್ಳಾಪುರ ಶಾಸಕರಾಗಿದ್ದ ಜೆ.ನರಸಿಂಹಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಸೇರ್ಪಡೆಗೊಂಡ ಕೆಲವೆ ದಿನಗಳಲ್ಲಿ ನರಸಿಂಹಸ್ವಾಮಿ ಅವರನ್ನು ಕೊಳಚೆ ನಿರ್ಮೂಲನಾ ಮಂಡಲಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಪ್ರಕ್ರಿಯೆಗಳ ಕುರಿತು ಜಾಲಪ್ಪ ಅವರನ್ನು ಪ್ರಶ್ನಿಸಿದರೆ. ಇದ್ಯಾವುದು ನನಗೆ ಗೊತ್ತಿಲ್ಲ ಎನ್ನುತ್ತಾರೆ. ಈ ಮೂಲಕ ನಸರಿಂಹಸ್ವಾಮಿ ಬಿಜೆಪಿ ಸೇರ್ಪಡೆಗೆ ಜಾಲಪ್ಪ ಅವರ ಸಹಮತವಿದೆ ಎಂದೆಣಿಸಲಾಗಿದೆ. ಜಾಲಪ್ಪ ಕೂಡಾ ಶೀಘ್ರದಲ್ಲಿ ಬಿಜೆಪಿ ಸೇರುವುದು ಖಚಿತವಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸತ್ತಿಗೆ ಸ್ಪರ್ಧಿಸುತ್ತಾರೆ ಎನ್ನುವುದು ಜಾಲಪ್ಪ ಅವರ ಆಂತರಿಕ ವಲಯದ ಸುದ್ದಿ.

ಇನ್ನೊಂದು ಮೂಲಗಳ ಪ್ರಕಾರ ಜಾಲಪ್ಪ ಕಾಂಗ್ರೆಸ್ಸಿನ ಇನ್ನೊಂದು ಅತೃಪ್ತರ ಬಣದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಸೇರಿ ಎಬಿಪಿಜೆಡಿ ಅಥವಾ ಜೆಡಿಯು ಪಕ್ಷವನ್ನು ಬಲಗೊಳಿಸುವ ಪ್ರಯತ್ನವೂ ಸಾಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು ಅಹಿಂದ ಸಭೆ ನಡೆಸುತ್ತಿರುವಾಗ ಅವರಿಗೆ ಜಾಲಪ್ಪ ಬೆಂಬಲ ವ್ಯಕ್ತಪಡಿಸಿದ್ದರು. ಕೆಲವೆಡೆ ಜಾಲಪ್ಪ ಅವರೇ ಮುಖ್ಯ ಭಾಷಣಕಾರರಾಗಿ ತೆರಳಿರುವ ಉದಾಹರಣೆಯೂ ಇದೆ. ಈ ಎಲ್ಲವನ್ನು ಗಮನಿಸಿದಲ್ಲಿ ಜನತಾ ಪರಿವಾರದ ಎಲ್ಲ ಮುಖಂಡರು ಕಾಂಗ್ರೆಸ್ ನಲ್ಲಿ ಅಸಮಾಧಾನದಿಂದ ಕುದಿಯುತ್ತಿದ್ದಾರೆ. ಈ ಮೂಲಕ ಮತ್ತೆ ಜೆಡಿಯು ಇಲ್ಲವೇ ಎಬಿಪಿಜೆಡಿ ಪಕ್ಷವನ್ನು ಬೆಳೆಸುವ ಉದ್ದೇಶವಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ರಾಜಕೀಯ ಧೃವೀಕರಣ ಆಗುವುದರಲ್ಲಿ ಎರಡು ಮಾತಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X