ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಂದ್‌ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

By Staff
|
Google Oneindia Kannada News

ಬೆಂಗಳೂರು, ಜು. 3 : ಅಮರನಾಥ ದೇವಾಲಯಕ್ಕೆ ನೀಡಲಾಗಿದ್ದ ಸರ್ಕಾರಿ ಭೂಮಿಯನ್ನು ವಾಪಸ್ಸು ಪಡೆದಿರುವ ಜಮ್ಮು ಕಾಶ್ಮೀರ ಸರ್ಕಾರದ ಕ್ರಮವನ್ನು ವಿರೋಧಿಸಿ ಹಿಂದುಪರ ಸಂಘಟನೆಗಳು ನೀಡಿದ್ದ ಭಾರತ ಬಂದ್ ಕರೆಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭಾರತೀಯ ಜನತಾ ಪಕ್ಷ ಪ್ರಾಬಲ್ಯವಿರುವ ಉತ್ತರ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಬಂದ್ ನೀರಸವಾಗಿತ್ತು. ಬಂದ್ ಹಿನ್ನಲೆಯಲ್ಲಿ ನಗರದಲ್ಲಿ ಅಲ್ಲಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್ಸಿಗೆ ಕಲ್ಲು ತೂರಾಟ, ಟೈರ್ ಗೆ ಬೆಂಕಿ ಹಚ್ಚಿದ ಪ್ರಕರಣ ಬಿಟ್ಟು ಬಂದ್ ನ್ನು ಬಹುತೇಕ ಶಾಂತಿಯುತವಾಗಿ ಆಚರಿಸಲಾಯಿತು.

ಬಂದ್ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಹಾಜರಾತಿ ಕಡಿಮೆಯಿತ್ತು. ಸರ್ಕಾರಿ ಕಚೇರಿಗಳು ಎಂದಿನಂತೆ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿದವು. ಕೆಲವಡೆ ಸ್ವಯಂ ಪ್ರೇರಿತರಾಗಿ ಕೆಲವರು ಅಂಗಡಿಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದರು. ಬ್ಯಾಂಕ್ ಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದವು. ಬೆಂಗಳೂರಿನ ಮಲ್ಲೇಶ್ವರ,ಮಹಾಲಕ್ಷ್ಮಿ ಲೇಔಟ್, ಹೆಣ್ಣೂರು ಮತ್ತು ಕೆ.ಜಿ.ಹಳ್ಳಿ ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆದ ಪ್ರಕರಣ ವರದಿಯಾಗಿದೆ. ಈ ಸಂಬಂಧ ಐದು ಜನರನ್ನು ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.

ಹಿಂದುಪರ ಸಂಘಟನೆಗಳಾದ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಕೇಸರಿ ದ್ವಜ ಹಿಡಿದು ನಗರದ ಕೆಲವಡೆ ಪ್ರತಿಭಟನೆ ನಡೆಸಿದ ದೃಶ್ಯ ಕಂಡು ಬಂದಿತು. ಬಂದ್ ಹಿನ್ನಲೆಯಲ್ಲಿ ನಗರದ ಸೂಕ್ಷ್ಮಪ್ರದೇಶಗಳಲ್ಲಿ ವ್ಯಾಪಕ ಬಂದೋಬಸ್ತ್ ನಿಯೋಜಿಸಲಾಗಿತ್ತು. ಇದರಿಂದ ಯಾವುದೇ ಅಹಿಕರ ಘಟನೆ ಸಂಭವಿಸಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಶ್ರೀಕುಮಾರ್ ತಿಳಿಸಿದ್ದಾರೆ.

ಬೆಳಗಾವಿ : ಅಧಿಕಾರಿ ಮೇಲೆ ಹಲ್ಲೆ
ಬೆಳಗಾವಿಯಲ್ಲಿ ಸರ್ಕಾರಿ ಕಚೇರಿ ಮುಚ್ಚದಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಕಚೇರಿಗೆ ನುಗ್ಗಿ ದಾಂಧಲೆ ನಡೆಸಿ,ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಶಾಸಕ ಅಭಯಚಂದ್ರ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಭಾರತ ಬಂದ್ ಹಿನ್ನಲೆಯಲ್ಲಿ ಅನೇಕ ಸರ್ಕಾರಿ ಶಾಲಾ ಕಾಲೇಜುಗಳು, ಆಯ್ದ ಸರ್ಕಾರಿ ಕಚೇರಿಗಳು ರಜೆ ಘೋಷಿಸಿದ್ದವು. ಆದರೆ ನಗರದ ಕ್ಲಬ್ ರಸ್ತೆಯಲ್ಲಿರುವ ಚಿಕ್ಕ ನೀರಾವರಿ ಇಲಾಖೆ ರಜೆ ನೀಡದಿರುವುದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಹುಬ್ಬಳ್ಳಿ : ಕಲ್ಲು ತೂರಾಟ
ಭಾರತ ಬಂದ್ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಹಿಂದುಪರ ಸಂಘಟನೆಗಳಾದ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗ ದಳದ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಗುಲಾಮ್ ನಬಿ ಅಜಾದ್ ಅವರ ಪ್ರತಿಕೃತಿಯನ್ನು ದಹಿಸಿದರು. ಈ ಸಂದರ್ಭದಲ್ಲಿ ಮಿನಿ ಲಾರಿಯೊಂದರ ಮೇಲೆ ಕಲ್ಲು ತೂರಾಟ ನಡೆದಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ತಲೆದೋರಿತು. ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ವರಿಷ್ಠಾಧಿಕಾರಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

12 ಸಾವಿರ ಕೋಟಿ ನಷ್ಟ
ಹಿಂದುಪರ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಗೆ ಅಖಿಲ ಭಾರತ ವಾಣಿಜ್ಯ ಉದ್ದಿಮೆದಾರರ ಸಂಘ ಬೆಂಬಲ ಸೂಚಿಸಿದ ಹಿನ್ನಲೆಯಲ್ಲಿ ಒಂದು ದಿನಕ್ಕೆ ಸುಮಾರು 12 ಸಾವಿರ ಕೋಟಿ ರುಪಾಯಿಗಳ ನಷ್ಟ ಅನುಭವಿಸುವಂತಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ ಖಂಡೇಲವಾಲ ಹೇಳಿದ್ದಾರೆ.ದೇಶದಲ್ಲಿರುವ ಸುಮಾರು 5 ಸಾವಿರ ಸಂಘಗಳು ಬಂದ್ ಗೆ ಬೆಂಬಲ ಸೂಚಿಸಿದ್ದವು. ಅಂಗಡಿ ಮಾಲೀಕರು, ಉದ್ದಿಮೆದಾರರು, ಕೆಲಸಗಾರರು ಸೇರಿ ಸಂಘದ 15 ಕೋಟಿ ಜನರು ಭಾರತ ಬಂದ್ ನಲ್ಲಿ ಭಾಗವಹಿಸಿದ್ದರು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X