ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡಿಯಲ್ಲಿ ಶ್ರೀಮದ್ಭಗವದ್ಗೀತಾ ತತ್ತ್ವಗಾನ ರಸಾಯನ

By Staff
|
Google Oneindia Kannada News

ಬೆಂಗಳೂರು, ಜು. 3 : ಕರ್ನಾಟಕ ಶಂಕರರೆಂದೇ ಪ್ರಖ್ಯಾತರಾದ ಹೊಳೆನರಸೀಪುರದ ಸಚ್ಚಿದಾನಂದೇಂದ್ರ ಸರಸ್ವತೀಸ್ವಾಮಿಗಳು ಮೊಟ್ಟ ಮೊದಲಿಗೆ ಆದಿ ಶಂಕರಾಚಾರ್ಯರ ಪ್ರಸ್ಥಾನತ್ರಯ ಸಂಸ್ಕೃತ ಭಾಷ್ಯವನ್ನು ಸಿರಿ ಕನ್ನಡಭಾಷೆಗೆ ಭಾಷಾಂತರಿಸಿದ್ದಾರೆ. ಸಿಡಿ ರೂಪದಲ್ಲಿರುವ ಈ ಕೃತಿಯನ್ನು ವೇದಾಂತ ಚಿಂತನ ಸತ್ಸಂಗದವರು ಜುಲೈ 13ರಂದು ಬಿಡುಗಡೆ ಮಾಡಲಿದ್ದಾರೆ.

ಸಚ್ಚಿದಾನಂದೇಂದ್ರ ಸರಸ್ವತೀಸ್ವಾಮಿಗಳು ಸುಮಾರು 250ಕ್ಕೂ ಹೆಚ್ಚು ಗ್ರಂಥಗಳನ್ನು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ ಒಂದು ಶ್ರೇಷ್ಠ ಕೃತಿ 'ಅಧ್ಯಾತ್ಮ ಗೀತಾವಳಿ". ಒಟ್ಟು ಸುಮಾರು 100 ಹಾಡುಗಳು ವೇದಾಂತ ಸಂಪ್ರದಾಯದ ಚೌಕಟ್ಟಿನಲ್ಲಿ ಅವರೇ ರಚಿಸಿರುವದು ವಿಶೇಷ. ಇವುಗಳಿಂದ ಕೆಲವು ಭಗವದ್ಗೀತೆಗೆ ಹೊಂದುವ ಹಾಡುಗಳನ್ನು ಆರಿಸಿ ಸಂಗೀತ ಸಂಯೋಜನೆಯನ್ನು ಮಾಡಿ ಗಾಯಕ ಸಿ.ಎ. ಸಂಜೀವ ಮೂರ್ತಿಗಳವರು ಸುಶ್ರಾವ್ಯವಾಗಿ ಹಾಡಿದ್ದಾರೆ. ಇದಕ್ಕೆ ವಾದ್ಯ ಸಂಯೋಜನೆಯನ್ನೂ, ಮಾರ್ಗದರ್ಶನವನ್ನು ತುಂಬ ಮಧುರವಾಗಿ ಮಾಡಿರುವವರು ಉಭಯಗಾನ ವಿದುಷಿ, ಶ್ರುತಿಸಾಗರ ಡಾ. ಶ್ಯಾಮಲಾ ಜಿ ಭಾವೆಯವರು. ಎಲ್ಲ ಹಾಡುಗಳ ಮುಂಚೆ ಕನ್ನಡದಲ್ಲಿ ಶಾಂಕರಭಾಷ್ಯ ಸಮೇತ ವ್ಯಾಖ್ಯಾನವನ್ನು ಬಿ. ಆರ್. ಶಿವರಾಮಯ್ಯನವರು ತುಂಬ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ.

ಆದಿಶಂಕರರ ಸರಳ ಸೂತ್ರಗಳು

ನಮ್ಮ ಪವಿತ್ರ ಭಾರತದ ಸಂಪತ್ತು ಪ್ರಸ್ಥಾನತ್ರಯಗಳು, ಅಂದರೆ ಶ್ರೀಕೃಷ್ಣನು ಉಪದೇಶಿಸಿರುವ ಶ್ರೀಮದ್ಭಗವದ್ಗೀತಾ, ಭಗವಾನ್ ಬಾದರಾಯಣಾಚಾರ್ಯರ ಬ್ರಹ್ಮಸೂತ್ರಗಳು, ಮತ್ತು ಹತ್ತು ಉಪನಿಷತ್ತುಗಳು. ಭಗವತ್ಪಾದ ಶಂಕರರು ಈ ಮೂರಕ್ಕೂ ತಿಳಿಯಾದ ಆದರೆ ಗಂಭೀರವಾದ ಸಂಸ್ಕೃತದಲ್ಲಿ ಭಾಷ್ಯವನ್ನು ಎಲ್ಲ ಮಾನವರಿಗೂ ಯಾವ ಜಾತಿ, ವರ್ಣ, ಆಶ್ರಮ, ದೇಶ, ಕಾಲ, ಇತ್ಯಾದಿಗಳ ಹಂಗಿಲ್ಲದೆ, ಮನಸ್ಸು ಶುದ್ಧವಿರುವರೆಲ್ಲರೂ ಸತ್ಯಾನ್ವೇಷಣೆಗೆ ಅರ್ಹರು ಎಂದು ತಿಳಿಸಿಕೊಟ್ಟಿದ್ದಾರೆ. ಇನ್ನು ಭಗವದ್ಗೀತೆಗೆ ಮೊಟ್ಟಮೊದಲು ಭಾಷ್ಯ ಬರೆದವರೇ ಶಂಕರರೆಂದರೆ ತಪ್ಪಾಗಲಾರದು. ಪ್ರಾತಃಸ್ಮರಣೀಯರೂ, ಆದರ್ಶ ಯತಿಗಳೂ, ಬ್ರಹ್ಮನಿಷ್ಠರೂ, ಕರ್ನಾಟಕ ಶಂಕರರೆಂದೇ ಪ್ರಖ್ಯಾತರಾದ ಹೊಳೆನರಸೀಪುರದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀಸ್ವಾಮಿಗಳು ಮೊಟ್ಟ ಮೊದಲಿಗೆ ಶಂಕರರ ಪ್ರಸ್ಥಾನತ್ರಯ ಸಂಸ್ಕೃತಭಾಷ್ಯವನ್ನು ಸಿರಿ ಕನ್ನಡಭಾಷೆಗೆ ಭಾಷಾಂತರಿಸಿ ಕನ್ನಡಿಗರಿಗೆ ಮಹದುಪಕಾರ ಮಾಡಿದ್ದಾರೆ. ಇವು ಈಗಲೂ ಲಭ್ಯ.

ಇನ್ನು ಶ್ರೀಮದ್ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳದಿರುವ ವಿಷಯವೇ ಇಲ್ಲ. ಹೇಗೆ ಊಟ ಮಾಡಬೇಕು, ಏನು ಊಟ ಮಾಡಬೇಕು, ಎಷ್ಟು ಊಟ ಮಾಡಬೇಕು, ಹೇಗೆ ಕುಳಿತುಕೊಳ್ಳಬೇಕು, ಹೇಗೆ ಧ್ಯಾನ ಮಾಡಬೇಕು, ಇತ್ಯಾದಿ, ಇತ್ಯಾದಿಯಿಂದ ಯಾರಬಳಿ ವಿಚಾರ ಮಾಡಬೇಕು, ಹೇಗೆ ವಿಚಾರ ಮಾಡಬೇಕು, ಜ್ಞಾನವೆಂದರೇನು, ಬ್ರಹ್ಮನಿಷ್ಠರೆಂದರೆ ಯಾರು, ಇತ್ಯಾದಿಗಳವರೆಗೂ ಹೇಳಿದೆ. ಶ್ರೀ ಕೃಷ್ಣನ ಸಂದೇಶಗಳನ್ನು ಅರ್ಥಮಾಡಿಕೊಂಡು ಅನುಭವದಲ್ಲಿ ಕಾಣಲು ಶಂಕರರು ತೋರಿಸಿಕೊಟ್ಟಿರುವ ಸೂಕ್ಷ್ಮಮಾರ್ಗವೆಂದರೆ ವೇದಾಂತ ಸಂಪ್ರದಾಯವಾದ ಅಧ್ಯಾರೋಪ ಮತ್ತು ಅಪವಾದ ಪ್ರಕ್ರಿಯೆ. ಇದನ್ನು ಸದ್ಗುರುವಿನ ಮೂಲಕವೇ ತಿಳಿಯಬೇಕು.

ಈ ಸಿ.ಡಿ. ಯನ್ನು ಬಸವನಗುಡಿಯಲ್ಲಿರುವ ವೇದಾಂತ ಚಿಂತನ ಸತ್ಸಂಗದಿಂದ(ತಂತಿ- 9886051222 ) ಇದೇ ಜುಲೈ13 ಭಾನುವಾರದಂದು ಬಸವನಗುಡಿ ಬಿ. ಪಿ. ವಾಡಿಯಾರಸ್ತೆಯಲ್ಲಿರುವ ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ ನಲ್ಲಿ ಬೆಳಗ್ಗೆ 10:00 ಗಂಟೆಗೆ ಲೋಕಾರ್ಪಣೆಯಾಗಲಿದೆ. ಈ ಸಿ.ಡಿ. ಯ ಬೆಲೆ ಕೇವಲ ರು. 60. ಪೂರ್ವ ಪ್ರಕಟಣ ಬೆಲೆ- 5ಕ್ಕಿಂತ ಹೆಚ್ಚು ಕೊಂಡರೆ - ರೂ 40.00 (ಪ್ರತಿ ಸಿ.ಡಿ.ಗೆ) ಮಾತ್ರ.

ದೊರಕುವ ವಿಳಾಸ : ನಂ. 135, ಸರ್ವೆಯರ್ ರಸ್ತೆ, ಬಸವನಗುಡಿ, ಬೆಂಗಳೂರು- 560004.

(ದಟ್ಸ್ ಕನ್ನಡ ಸಭೆ ಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X