ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಸರ್ಕಾರ

By Staff
|
Google Oneindia Kannada News

ಬೆಂಗಳೂರು, ಜೂ. 6 : ಪ್ರತಿಪಕ್ಷಗಳ ಕೂಗಾಟ, ಸಭಾತ್ಯಾಗಗಳ ನಡುವೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರ ವಿಶ್ವಾಸಮತ ಗಳಿಸುವಲ್ಲಿ ಯಶಸ್ವಿಯಾಗಿದೆ. ದ್ವನಿಮತದ ಮೂಲಕ ವಿಶ್ವಾಸಮತ ಯಾಚನೆ ನಿರೀಕ್ಷೆಯಂತೆ ಯಾವುದೇ ವಿಘ್ನಗಳಿಲ್ಲದೇ ನಿರಾಂತಕವಾಗಿ ನಡೆಯಿತು.

ಈ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ಆಡಳಿತ ಶೆಕೆ ಆರಂಭಿಸಿತು. ಜೂ. 23 ರಿಂದ ಮೂರು ದಿನಗಳ ಕಾಲ ಅಧಿವೇಶನ ನ‌ಡೆಯಲಿದೆ. ಇದೇ ಜೂ. 10 ರಂದು ನೂತನ ಸರ್ಕಾರ ಬಜೆಟ್ ಮಂಡಿಸಲಿದೆ.

ವಿಶ್ವಾಸಮತಕ್ಕೆ ಅಡ್ಡಿ , ಚರ್ಚೆಗೆ ಪ್ರತಿಪಕ್ಷಗಳ ಪಟ್ಟು

ಭೋಜನ ವಿರಾಮದ ನಂತರ ಸಭಾಧ್ಯಕ್ಷರ ಅನುಮತಿ ಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸಮತಯಾಚಿಸುವ ಸಲುವಾಗಿ ಮಂಡನೆಗೆ ಮುಂದಾದರು. ಆ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಬಿಗಿ ಹಿಡಿದಿದ್ದರಿಂದ ಎರಡು ಗಂಟೆಗಳ ಕಾಲ ಚರ್ಚೆಗೆ ಸಭಾಧ್ಯಕ್ಷರು ಸಮ್ಮತಿಸಿದರು.

ಸಭಾಧ್ಯಕ್ಷರು ನೀಡಿದ ಎರಡು ಗಂಟೆ ಸಮಯದಲ್ಲಿ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಒಂದು ಗಂಟೆ, ಪ್ರತಿಪಕ್ಷ ಕಾಂಗ್ರೆಸ್ ಗೆ 45 ನಿಮಿಷ ಮತ್ತು ಜೆಡಿಎಸ್ ಗೆ 20 ನಿಮಿಷಗಳ ಚರ್ಚೆಗೆ ಕಾಲಾವಕಾಶವನ್ನು ನಿಗದಿಪಡಿಸಲಾಯಿತು. ಈ ಸಂದರ್ಭದಲ್ಲಿ ಮೊದಲಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಇಂದು ನಾವು ವಿಶ್ವಾಸಮತ ಸಾಬೀತುಪಡಿಸಲು ಸಿದ್ದವಾಗಿದ್ದು, ಮೂದಲು ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಪ್ರತಿಪಕ್ಷದ ಮುಖಂಡರಿಗೆ ಮನವಿ ಮಾಡಿಕೊಂಡರು.

ಭಾರತೀಯ ಜನತಾ ಪಕ್ಷದ ಸರ್ಕಾರ ದಕ್ಷಿಣ ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಯಾವುದೇ ರಾಗದ್ವೇಷಗಳಿಲ್ಲದೇ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹೀಗೆ ಎಲ್ಲ ವರ್ಗಗಳ ಜನರ ಹಿತಾಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ದಾವಣಗೆರೆಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ರೈತರ ಮೇಲೆ ಲಾಠಿ ಪ್ರಹಾರ ಮಾಡಲಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು ಸರಿಯಾಗಿ ಒಂದು ವಾರವೂ ಆಗಿಲ್ಲ. ಆಗಲೇ ರೈತರ ಮೇಲೆ ದೌರ್ಜನ್ಯ ನಡೆಸಲಾಗಿದೆ.ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಿಲ್ಲ.

ಮಂಗಳೂರಿನಲ್ಲಿ ಚಿಕೂನ್ ಗುನ್ಯಾ ಪತ್ತೆಯಾಗಿದೆ. ಸೂಕ್ತ ಚಿಕಿತ್ಸೆ ಇಲ್ಲದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಬಾಬಾಬುಡನ್ ಗಿರಿ ವಿಷಯದಲ್ಲಿ ಸರ್ಕಾರದ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಉಪಮುಖ್ಯಮಂತ್ರಿ ತೀವ್ರ ತರಾಟೆಗೆ ತಗೆದುಕೊಂಡರು. ಈ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಹಿಂದೆ ಬೀಳಲಿಲ್ಲ. ಸರ್ಕಾರ ವಿರುದ್ಧದ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಹೆಗಲ ಮೇಲೆ ಬರೀ ಹಸಿರು ಟವೆಲ್ ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದ ಮಾತ್ರಕ್ಕೆ ರೈತರ ಸಮಸ್ಯೆ ಬಗೆಹರಿಯುದಿಲ್ಲ. ರೈತನ ಸಮಸ್ಯೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಯಾವ ಕಾರಣಕ್ಕೂ ಸಾರಿಗೆ ದರವನ್ನು ಏರಿಸಬಾರದು ಎಂದು ಸರ್ಕಾರಕ್ಕೆ ತಾಕೀತು ಮಾಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X