ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಗೇನಕಲ್ ವಿವಾದ : ಸರ್ವಪಕ್ಷಗಳ ಸಭೆಗೆ ಯಡ್ಡಿ ಕರೆ

By Staff
|
Google Oneindia Kannada News

Karnataka Chief Minister B.S. Yeddyurappaನವದೆಹಲಿ, ಜೂ.2 : ಹೊಗೇನಕಲ್ ವಿವಾದ ಕುರಿತಂತೆ ಶೀಘ್ರದಲ್ಲಿ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿ ನಂತರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಸೋಮವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಗೇನಕಲ್ ವಿವಾದ ಇತ್ಯರ್ಥ ಪಡಿಸಲು ಸರ್ಕಾರ ಸಿದ್ದವಿದ್ದು, ಶೀಘ್ರದಲ್ಲಿ ಕಾನೂನು ಪಂಡಿತರು, ನೀರಾವರಿ ತಜ್ಞರು ಹಾಗೂ ಸರ್ವ ಪಕ್ಷಗಳ ಜತೆ ಸಮಾಲೋಚನೆ ನಡೆಸಿ ವಿವಾದಕ್ಕೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಚುನಾವಣಾ ಪೂರ್ವದ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದ ಪುನರುಚ್ಚರಿಸಿದರು. ಗುಜರಾತ ಮಾದರಿ ಅಭಿವೃದ್ಧಿಯನ್ನು ರಾಜ್ಯಕ್ಕೂ ವಿಸ್ತರಿಸಲಾಗುವುದು. ನೀರಾವರಿ, ಕೃಷಿ, ವಿದ್ಯುತ್, ನಗರಾಭಿವೃದ್ಧಿ ಸೇರಿದಂತೆ ಅನೇಕ ಜನಪರ ಯೋಜನೆಗಳಿಂದ ದೇಶದಲ್ಲಿ ಗುಜರಾತ ಮಾದರಿ ರಾಜ್ಯವಾಗಿದೆ. ಇಷ್ಟರಲ್ಲಿಯೇ ಗುಜರಾತ ಅಭಿವೃದ್ಧಿ ಪರಿಶೀಲನೆಗಾಗಿ ಸಚಿವರ ನಿಯೋಗವನ್ನು ಅಲ್ಲಿಗೆ ಕಳುಹಿಸಲಾಗುವುದು ಎಂದು ಹೇಳಿದರು. ಗುಜರಾತಿನಲ್ಲಿ ಆಗಿರುವ ಅಭಿವೃದ್ಧಿಯ ಸಮಗ್ರ ಅಧ್ಯಾಯವನ್ನು ಮಾಡಿಕೊಂಡ ಬಂದ ವರದಿಯನ್ನು ಪರಿಶೀಲಿಸಿ ರಾಜ್ಯದಲ್ಲಿ ಅವುಗಳನ್ನು ಜಾರಿಗೆ ತರಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಬೆಂಗಳೂರು ಬೆಳೆಯುತ್ತಿರುವ ನಗರವಾಗಿದ್ದು, ಎರಡು ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಆದ್ದರಿಂದ ಹಳೆಯ ಎಚ್ಎಎಲ್ ವಿಮಾನ ನಿಲ್ದಾಣ ಮುಚ್ಚಲು ನಿರ್ಧರಿಸಿರುವ ಬಿಐಎಎಲ್ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ಸುಷ್ಮಾ ಸ್ವರಾಜ್ ಭೇಟಿ: ಎರಡು ದಿನ ಕಾಲ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಪಕ್ಷ ಅಧಿಕಾರಕ್ಕೆ ಬಂದಿದ್ದು, ಜನರು ಆಶೀರ್ವಾದ ಮಾಡಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ, ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಉತ್ತಮ ಆಡಳಿತ ನೀಡಿ ಎಂದು ಸುಷ್ಮಾ ಸ್ವರಾಜ್ ಯಡಿಯೂರಪ್ಪ ಅವರಿಗೆ ಕಿವಿ ಮಾತು ಹೇಳಿದರು.

ಇದಕ್ಕೂ ಮುನ್ನ ಯಡಿಯೂರಪ್ಪ ರಾಜಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಅವರ ಸಮಾಧಿಗೆ ಪುಷ್ಪಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಸಂಜೆ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X