ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಗೇನಕಲ್ ವಿವಾದ ಶೀಘ್ರ ಇತ್ಯರ್ಥ : ಯಡಿಯೂರಪ್ಪ

By Staff
|
Google Oneindia Kannada News

ಯಡಿಯೂರು, ಮೇ 29 : ಬಹುದಿನಗಳಿಂದ ಸಮಸ್ಯೆಯಾಗಿ ಉಳಿದಿರುವ ಹೊಗೇನಕಲ್ ವಿವಾದವನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದು ನಿಯೋಜಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಗುರುವಾರ ಕುಟುಂಬ ಸಮೇತರಾಗಿ ಮನೆ ದೇವರಾದ ಯಡಿಯೂರು ಸಿದ್ಧಲಿಂಗೇಶ, ಆದಿಚುಂಚನಗಿರಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಬಿಜೆಪಿ ದಕ್ಷಿಣ ಭಾರತೀಯದಲ್ಲಿ ಮೂಟ್ಟಮೂದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ದ್ವೇಷ, ಸೇಡಿನ ರಾಜಕಾರಣ ಮಾಡದೆ, ಹಿರಿಯ ರಾಜಕಾರಣಿಗಳ ಸಲಹೆ ಸೂಚನೆಗಳನ್ನು ಪಡೆದು ರಾಜ್ಯವನ್ನು ಜ್ವಲಂತವಾಗಿ ಕಾಡುತ್ತಿರುವ ವಿವಾದಗಳಿಗೆ ಶೀಘ್ರದಲ್ಲಿ ಇತಿಶ್ರೀ ಹಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನೇಕ ವರ್ಷಗಳಿಂದ ಶಯನಾವಸ್ಥೆಯಲ್ಲಿರುವ ಮೈಶುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ ಯಡಿಯೂರಪ್ಪ, ಪ್ರಣಾಳಿಕೆಯಲ್ಲಿ ಪ್ರಕಟಿಸಿರುವಂತೆ ಪ್ರತಿ ಲೀಟರ್ ಹಾಲಿಗೆ ಒಂದು ರುಪಾಯಿ ಸಹಾಯಧನ ನೀಡಲಾಗುವುದು ಎಂದು ವಾಗ್ದಾನ ನೀಡಿದರು.

ದಕ್ಷಿಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದ ಅವರು, ರಾಜ್ಯದ ಸಮಗ್ರ ಅಭಿವೃದ್ಧಿ ಬಿಜೆಪಿ ಪಕ್ಷದ ಏಕೈಕ ಗುರಿ. ನಮಗೆ ಸಿಕ್ಕಿರುವ ಈ ಸದಾವಕಾಶವನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡು ದೇಶದಲ್ಲಿ ಹೆಮ್ಮೆಪಡುವಂತ ರಾಜ್ಯವನ್ನಾಗಿ ರೂಪಿಸುತ್ತೇವೆ ಎಂದು ಹೇಳಿದರು. ನಂತರ ಯಡಿಯೂರಪ್ಪ ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ಮಾಡಿ ಶ್ರೀ ಶಿವಕುಮಾರ ಸ್ವಾಮಿಜಿಗಳ ಆಶೀರ್ವಾದ ಪಡೆದರು.

ಕರುಣಾನಿಧಿ ಗುಡುಗು

ಹೊಗೇನಕಲ್ ಯೋಜನೆ ಕಾಮಗಾರಿ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದ್ದು, ಈ ಹಂತದಲ್ಲಿ ನೆರೆಯ ಕರ್ನಾಟಕ ರಾಜ್ಯ ಸಲ್ಲಿಸಿರುವ ಆಕ್ಷೇಪಗಳನ್ನು ತೆರವುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಕೇಳುವ ಅವಶ್ಯಕತೆಯೇ ಇಲ್ಲ. ಯೋಜನೆ ಕಾಮಗಾರಿ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಬುಧವಾರ ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.

ಈ ನಿಟ್ಟಿನಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಹೇಗೆ ಕಾರ್ಯನಿರ್ವಹಿಸಲಿದೆ ಎನ್ನುವುದು ಕುತೂಹಲದ ಸಂಗತಿಯಾಗಿದೆ. ಇದಕ್ಕೂ ಮುನ್ನ ಕರ್ನಾಟಕದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ಹೇಳಿದ್ದ ಕರುಣಾನಿಧಿ, ಅದನ್ನು ಮರೆತು ಇದೀಗ ಕಾಮಗಾರಿ ಚಾಲನೆಗೆ ಆದೇಶ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X