ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಪಕ್ಷಗಳ ಸೋಲು ಗೆಲುವಿನ ಗುಟ್ಟು

By Staff
|
Google Oneindia Kannada News

ಬೆಂಗಳೂರು, ಮೇ. 26 : ಕಾರಣಗಳು ಕಾರಣಗಳಷ್ಟೆ ! ರಾಜಕೀಯ ಪಕ್ಷಗಳ ನಡೆಗಳನ್ನು ಹೇಗೆ ಅರಿಯುವುದು ಸಾಧ್ಯವಿಲ್ಲವೋ ಮತದಾರರ ನಾಡಿ ಮಿಡಿತವನ್ನು ತಿಳಿಯುವುದು ಅಷ್ಟು ಸುಲಭವಲ್ಲ. ಯಾವ ಪಕ್ಷ ಗೆಲುವಿಗೆ ಸರಿಯಾದ ಮಂತ್ರ ಎಂದು ತಿಳಿದಿರುತ್ತದೋ ಅದೇ ತಿರುಮಂತ್ರವಾಗಬಲ್ಲದು. ಆದರೂ, ಈ ಚುನಾವಣೆಯಂತೂ ಎಲ್ಲಾ ರಾಜಕೀಯ ಪಕ್ಷಗಳಿಗೆ ಆತ್ಮಾವಲೋಕನ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಿದೆ.

ಕೆಲವು ಪಕ್ಷಗಳು ಮತದಾರರನ್ನು ಅಪಾರವಾಗಿ ನಂಬಿದ್ದರೆ, ಇನ್ನು ಕೆಲವು ಪಕ್ಷಗಳು ತಮ್ಮ ಮೇಲೆಯೇ ಅಪಾರವಾದ ನಂಬಿಕೆಯಿಟ್ಟಿದ್ದವು. ಕೊನೆಗೆ, ವರವಾದದ್ದು ಎಲ್ಲಿ, ಮುಳುವಾದದ್ದು ಎಲ್ಲಿ ಎಂಬ ಅಂಶಗಳತ್ತ ಕಣ್ಣಾಡಿಸೋಣ ಬನ್ನಿ.

ಭಾರತೀಯ ಜನತಾಪಕ್ಷದ ಗೆಲುವಿಗೆ ಕಾರಣಗಳು :

*ಅನುಕಂಪ. ಕಳೆದ ನವೆಂಬರ್‌ನಲ್ಲಿ ಜೆಡಿಎಸ್ ಎಸಗಿದ ನಂಬಿಕೆ ದ್ರೋಹ. ಕುಮಾರಸ್ವಾಮಿ ಅಂಡ್ ಕಂಪನಿಯಿಂದ ವಚನಭ್ರಷ್ಟತೆ. ಅಧಿಕಾರವಂಚಿತ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರವಾಸ. ದೇವೇಗೌಡರ ಕುಟುಂಬ ರಾಜಕಾರಣದ ಅಸಹ್ಯ ಕುರಿತು ಮತದಾರರಿಗೆ ಮನವರಿಕೆ.

*ಬಿಜೆಪಿ ಮುಖಂಡರಿಂದ ಒಗ್ಗಟ್ಟು ಪ್ರದರ್ಶನ. ಯಡಿಯೂರಪ್ಪನವರೇ ನಾಯಕ ಮತ್ತು ಮುಖ್ಯಮಂತ್ರಿ ಎಂದು ಘೋಷಣೆ. ಕೇವಲ ಮೇಲ್ವರ್ಗ , ವೀರಶೈವರ ಪ್ರಾಬಲ್ಯವಿರುವ ಪಕ್ಷ ಎಂಬ ಆರೋಪಗಳನ್ನು ಹುಸಿಯಾಗಿಸಿ ಸಮಾಜದ ಎಲ್ಲ ವರ್ಗಗಳೊಡನೆ ಬೆರೆತು ಚುನಾವಣಾ ಕಹಳೆ ಊದಿದ ಪರಿಣಾಮ.

*224 ಸ್ಥಾನಗಳಲ್ಲಿ 28 ಮಂದಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಟಿಕೆಟ್. ಬಿಜೆಪಿಗೆ ಒಂದು ಛಾನ್ಸು ಕೊಟ್ಟು ನೋಡೋಣ ಎನ್ನುವ ಮತದಾರರ ನಿರ್ಧಾರ.

*ಬೆಲೆ ಏರಿಕೆ ಮತ್ತು ಭಯೋತ್ಪಾದನೆ ವಿಷಯ ಮುಂದಿಟ್ಟು ಯುಪಿಎ ಸರಕಾರದ ವೈಫಲ್ಯಗಳ ಪ್ರತಿಪಾದನೆ.

ಕಾಂಗ್ರೆಸ್ ಸೋಲಿಗೆ ಕಾರಣಗಳು :

*ಪಕ್ಷದಲ್ಲಿ ಕೆಲಸಗಾರರಿಗಿಂತ ನಾಯಕರೇ ಹೆಚ್ಚು. ಒಬ್ಬೊಬ್ಬ ನಾಯಕರು ಒಂದೊಂದು ದಾರಿ.

*ಪಕ್ಷಕ್ಕೆ ನಿಷ್ಠೆ ಮತ್ತು ಅಭ್ಯರ್ಥಿಯ ಅರ್ಹತೆಗೆ ಧಿಕ್ಕಾರ. ಹಣಕ್ಕೆ ಮಣೆ. ನಾಯಕರ ಹಿಂಬಾಲಕರು, ಸಂಬಂಧಿಕರು ಮತ್ತು ಅವರ ಸ್ನೇಹಿತರಿಗೆ ಟಿಕೆಟ್.

*ನಾಯಕ ಶಿಖಾಮಣಿಗಳಲ್ಲಿ ಪರಸ್ಪರ ಅಪನಂಬಿಕೆ. ನೆಪಮಾತ್ರಕ್ಕೆ ಚುನಾವಣಾ ಸಮಿತಿ. ಎಸ್.ಎಂ. ಕೃಷ್ಣ ಅವರ ಮಾತಿಗೆ ಕವಡೆ ಕಿಮ್ಮತ್ತಿಲ್ಲ. ಮತದಾರರನ್ನು ಸೆಳೆದುಕೊಳ್ಳುವ ಆಯಸ್ಕಾಂತಕ ಶಕ್ತಿ ಮುಂಚೂಣಿ ನಾಯಕರಲ್ಲಿ ಕಣ್ಮರೆ.

*ಚುನಾವಣಾ ಪ್ರಚಾರದಲ್ಲಿ ಒಂದು ಅಚ್ಚುಕಟ್ಟು, ರೂಪರೇಷೆ ಎಂಬುದೇ ಇಲ್ಲ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಬಿಟ್ಟರೆ ಉಳಿದ ಸ್ಥಳೀಯ ನಾಯಕರಿಂದ ತಮಗೆ ಬೇಕಾದವರ ಕ್ಷೇತ್ರದಲ್ಲಿ, ಮಾತ್ರ ಪ್ರಚಾರ. ಪಕ್ಷ ಮುಖ್ಯ ಎಂಬ ತತ್ವಕ್ಕೆ ತಿಲಾಂಜಲಿ.

*ಒಳಗೊಳಗೆ ನಾಯಕರ ಕತ್ತಿ ಮಸೆಯುವ ಆಟ. ಕೃಷ್ಣ ಪುನರಾಗಮನದಿಂದ ಅನೇಕರಿಗೆ ಅಸಮಾಧಾನ. ಆದರೆ, ಜೋರಾಗಿ ಹೇಳುವಂತಿಲ್ಲ. ಸಿದ್ದರಾಮಯ್ಯನವರು ಪಕ್ಷದಲ್ಲಿ ಬೆಳೆಯುತ್ತಾರೆಂಬ ಭೀತಿ. ಮಲ್ಲಿಕಾರ್ಜುನ ಖರ್ಗೆ ಮೂಲಕ ದಲಿತರ ಧ್ವನಿ ಹೆಚ್ಚಾಗಿ ಗೌಡರ ಸದ್ದು ಅಡಗುತ್ತದೆಂಬ ಗುಮಾನಿ.

ಜೆಡಿಎಸ್ ಸೋಲಿಗೆ ಕಾರಣ :

*ಪ್ರಭಾವಿ ನಾಯಕರ ಕೊರತೆ. ತಾವು ತಮ್ಮ ಮಕ್ಕಳು ಬಿಟ್ಟರೆ ಜಗತ್ತಿನಲ್ಲಿ ಬೇರೆ ನಾಯಕರಿಲ್ಲ ಎಂಬಂತೆ ಎಚ್‌ಡಿಡಿ ವರ್ತನೆ.

*ದೇವೇಗೌಡರಲ್ಲಿ ಶಾಶ್ವತವಾಗಿ ಮನೆಮಾಡಿರುವ ದುರಹಂಕಾರ. ಕಾರ್ಯಕರ್ತರ ಮೇಲೆ ಅಪನಂಬಿಕೆ. ಜೆಡಿಎಸ್ ಶಾಸಕರಲ್ಲಿ ಸ್ವಾಭಿಮಾನದ ಕೊರತೆ ಮತ್ತು ಬ್ಲಾಕ್‌ಮೇಲ್ ರಾಜಕೀಯದಲ್ಲಿ ಆಸಕ್ತಿ.

*ಪ್ರಾದೇಶಿಕ ಪಕ್ಷಗಳ ಬಗ್ಗೆ ಕರ್ನಾಟಕ ಮತದಾರರ ನಿರಾಸಕ್ತಿ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X