ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಪತ್ಯ ಆರಂಭ

By Staff
|
Google Oneindia Kannada News

B.S. Yediyurappa will take oath as CM of Karnataka on May 28ಬೆಂಗಳೂರು, ಮೇ 25 : ಹದಿಮೂರನೇ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ಗೆಲ್ಲಿಸಿರುವ ರಾಜ್ಯದ ಮತದಾರರು, ಸಮ್ಮಿಶ್ರ ಸರ್ಕಾರದ ಕರಾಳ ಅಧ್ಯಾಯಕ್ಕೆ ಮಂಗಳ ಹಾಡಿದ್ದಾರೆ ಮತ್ತು ಬ್ಲಾಕ್‌ಮೇಲ್ ರಾಜಕೀಯಕ್ಕೆ ನಾಂದಿ ಹಾಡಿದವರಿಗೆ ಮಂಗಳಾರತಿ ಎತ್ತಿದ್ದಾರೆ.

ಸಮ್ಮಿಶ್ರ ಸರ್ಕಾರದ ಅತಂತ್ರತೆ, ಕುಂಠಿತಗೊಂಡ ರಾಜ್ಯದ ಅಭಿವೃದ್ಧಿಯಿಂದ ಕಂಗೆಟ್ಟಿದ್ದ ಮತದಾರರು ಬಿಜೆಪಿಯನ್ನು ಏಕೈಕ ಅತಿ ದೊಡ್ಡ ಪಕ್ಷವಾಗಿ ಗೆಲ್ಲಿಸಿಕೊಟ್ಟಿದ್ದಾರೆ. ರಾಜ್ಯಾದ್ಯಂತ ಹಣ, ಹೆಂಡದ ಹೊಳೆ ಹರಿದರೂ ಅಭ್ಯರ್ಥಿಗಳ ಕೈಬಾಯಿಯನ್ನು ಕಟ್ಟಿಹಾಕಿದ್ದ ಚುನಾವಣಾ ಆಯೋಗ ಅಭೂತಪೂರ್ವವಾದ ಭದ್ರತೆಯ ನಡುವೆ ಚುನಾವಣೆಯನ್ನು ಸುಗಮವಾಗಿ ನಡೆಸಿಕೊಟ್ಟಿದೆ. ಇದು ರಾಜ್ಯದ ಜನತೆ ಮತ್ತು ಚುನಾವಣಾ ಆಯೋಗಕ್ಕೆ ಸಂದ ಜಯ.

ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಬಿಂಬಿತವಾದ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ 110 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಭಾರತೀಯ ಜನತಾ ಪಕ್ಷ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ. ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ನಾಯಕರ ದಂಡಿನೊಂದಿಗೆ ಅಖಾಡಕ್ಕಿಳಿದಿದ್ದ ಕಾಂಗ್ರೆಸ್ ಕೇವಲ 80 ಕ್ಷೇತ್ರಗಳಲ್ಲಿ ಜಯಗಳಿಸುವಲ್ಲಿ ತೃಪ್ತಿಪಟ್ಟುಕೊಂಡಿದೆ. ಘಟಾನುಘಟಿ ನಾಯಕರುಗಳೆಲ್ಲ ಮಣ್ಣುಮುಕ್ಕಿದ್ದು ಕಾಂಗ್ರೆಸ್‌ಗೆ ಭಾರೀ ಹಿನ್ನೆಡೆಯಾಯಿತು.

ಜೆಡಿಎಸ್ ಬೆಂಬಲವಿಲ್ಲದೇ ಯಾವ ಪಕ್ಷವೂ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಅಹಂಕಾರದಿಂದ ಮಾತಾಡಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೆಡಿಎಸ್ 28 ಸ್ಥಾನಗಳನ್ನು ಮಾತ್ರ ಗಳಿಸಲು ಶಕ್ತವಾಗಿದ್ದು ಭಾರೀ ಮುಖಭಂಗ ಅನುಭವಿಸಿದೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಅಧಿಕಾರದ ವರಸೆಯನ್ನು ನೋಡಿದ್ದ ಮತದಾರರು ತಮ್ಮ ಇಂಗಿತವೇನೆಂಬುದನ್ನು ಮತಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಜಾತ್ಯಾತೀತ ಜನತಾದಳ ಮೈಸೂರು ಕರ್ನಾಟಕ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ.

ಯಡಿಯೂರಪ್ಪ ಗದ್ದುಗೆಯೇರುವುದು ಖಚಿತ : ಸ್ಪಷ್ಟ ಬಹುಮತಕ್ಕೆ ಬೇಕಾಗಿದ್ದ 113ರ ಮ್ಯಾಜಿಕಲ್ ಫಿಗರ್‌ಗೆ ಮೂರೇ ಸ್ಥಾನಗಳನ್ನು ಕಡಿಮೆ ಗಳಿಸಿದ ಬಿಜೆಪಿಗೆ ಸರ್ಕಾರ ರಚಿಸುವ ಅವಕಾಶ ಕಳೆದುಕೊಳ್ಳುವ ಭಯವೇನೂ ಇಲ್ಲ. ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಶ್ರೀರಕ್ಷೆ ಸಿಕ್ಕಿದ್ದರಿಂದ ಬಿಜೆಪಿ ಪ್ರಥಮ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಚ್ಚಳವಾಗಿದೆ. ಮೇ 26ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು ಯಡಿಯೂರಪ್ಪನವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಿದೆ ಮತ್ತು ನಂತರ ರಾಜ್ಯಪಾಲರನ್ನು ಬಿಜೆಬಿ ನಿಯೋಗ ಭೇಟಿ ಮಾಡಲಿದೆ. 28ರಂದು ಯಡಿಯೂರಪ್ಪ ನೇತೃತ್ವದ ಸರ್ಕಾರ ಪ್ರಮಾಣ ವಚನ ಸ್ವೀಕರಿಸಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಿಗೆ ಬಂತು ಕಾಲ : ಈ ಬಾರಿ ಪಕ್ಷೇತರರಾಗಿ ಆಯ್ಕೆಯಾಗಿರುವ ಆರು ಅಭ್ಯರ್ಥಿಗಳು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾದ ಕೋಲಾರ-ವರ್ತೂರು ಪ್ರಕಾಶ್, ಹೊಸದುರ್ಗ-ಗುಳೇಗಟ್ಟಿ ಚಂದ್ರಶೇಖರ್, ಮಳವಳ್ಳಿ-ನರೇಂದ್ರಸ್ವಾಮಿ, ಪಾವಗಡ- ವೆಂಕಟರಮಣಪ್ಪ , ಮತ್ತು ಹಿರಿಯೂರು ಕ್ಷೇತ್ರದಿಂದ ಸ್ವರ್ಣಯುಗ ಪಕ್ಷದಿಂದ ಆರಿಸಿ ಬಂದಿರುವ ಡಿ.ಸುಧಾಕರ್ ಹಾಗೂ ಕನಕಗಿರಿ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಶಿವರಾಜ್ ತಂಗಡಗಿ ನಿಲುವಿನ ಮೇರೆಗೆ ರಾಜ್ಯ ರಾಜಕೀಯ ಅವಲಂಬಿತವಾಗಿದೆ.

'ಬಂ' ಕುಟುಂಬ ನಿರ್ನಾಮ : ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಶಿಕಾರಿಪುರ ಕ್ಷೇತ್ರದಲ್ಲಿ ನಡೆದ ಇಬ್ಬರು ಮಾಜಿಮುಖ್ಯಮಂತ್ರಿಗಳ ಕಾಳಗದಲ್ಲಿ ಸೈಕಲ್‌ಗೆ ಗಾಳಿ ಹಾಕದೇ ಓಡಿಸಿದ ಬಂಗಾರಪ್ಪ ಯಡಿಯೂರಪ್ಪನವರ ಮುಂದೆ ಭಾರೀ ಸೋಲು ಅನುಭವಿಸಿದ್ದಾರೆ. ಅಪರೋಕ್ಷವಾಗಿ ಎಸ್ಪಿಗೆ ಕಾಂಗ್ರೆಸ್ ಕೈ ಜೋಡಿಸಿದ್ದರೂ 'ಬಂ'ಗೆ ಲಾಭವಾಗಿಲ್ಲ. ಸುಮಾರು 43 ಸಾವಿರ ಮತಗಳಿಂದ ಸೋಲನುಭವಿಸಿದ ಬಂಗಾರಪ್ಪ ಭಾರೀ ಮುಖಭಂಗಕ್ಕೆ ಒಳಗಾದರು. ಸೊರಬದಲ್ಲಿಯೂ ಅಣ್ಣ ತಮ್ಮ ಕುಮಾರ್ ಮತ್ತು ಮಧು ಬಂಗಾರಪ್ಪ ನಡುವಿನ ಜಗಳದಲ್ಲಿ ಬಿಜೆಪಿಯ ಹರತಾಳ ಹಾಲಪ್ಪ ಬೇಳೆ ಬೇಯಿಸಿಕೊಂಡಿದ್ದಾರೆ.

ನಾನು ಜನತಾ ಸೇವಕ : ಶಿಕಾರಿಪುರದಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಬೆಂಗಳೂರಿಗೆ ದೌಡಾಯಿಸಿದ ಯಡಿಯೂರಪ್ಪ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ಆಶೀರ್ವಾದ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಸಿಂಹಾಸನವೇರುವ ನಾನು ರಾಜನಲ್ಲ ಜನತೆಯ ಸೇವಕ ಎಂದು ಹೇಳಿದರು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಎಲ್ಲ ಭರವಸೆಗಳನ್ನು ಈಡೇರಿಸಲಿದೆ. ಬೆಂಗಳೂರು ನಗರವನ್ನು ಜಗತ್ತಿನಲ್ಲಿ ಮಾದರಿ ನಗರವನ್ನಾಗಿ ಮಾಡುವುದರ ಜತೆಗೆ ಬಡವರು, ಅಲ್ಪಸಂಖ್ಯಾತರ ಏಳಿಗೆಯನ್ನು ಕಾಯ್ದುಕೊಂಡು ಹೋಗುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳಿದರು.

ಘಟಾನುಘಟಿಗಳ ಸೋಲು : ಎಂಟು ಸಲ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಬಿಜೆಪಿಯ ದೊಡ್ಡಪ್ಪಗೌಡ ನರಿಬೋಳ ವಿರುದ್ಧ ಸೋಲನುಭಸಿದ್ದಾರೆ. ಈ ಮೂಲಕ ಅವರ ದಾಖಲೆ ನಿರ್ಮಿಸುವ ಕನಸು ನುಚ್ಚುನೂರಾಗಿದೆ. ಉಳಿದಂತೆ ಪ್ರಥಮ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್, ಹರಪನಹಳ್ಳಿಯಲ್ಲಿ ಅದೃಷ್ಟ ಪರೀಕ್ಷಿಸಿದ ಎಂ.ಪಿ.ಪ್ರಕಾಶ್, ಹಳಿಯಾಳದಲ್ಲಿ ಆರ್.ವಿ.ದೇಶಪಾಂಡೆ, ಶ್ರೀರಂಗಪಟ್ಟಣದಲ್ಲಿ ಚಿತ್ರನಟ ಅಂಬರೀಷ, ತೇರದಾಳದಲ್ಲಿ ಉಮಾಶ್ರೀ ಸೋಲುಂಡ ಪ್ರಮುಖ ನಾಯಕರಾಗಿದ್ದಾರೆ. ಬಸವನಗುಡಿಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ಸಿನ ಎಂ.ಚಂದ್ರಶೇಖರ್ ಪರಾಭವಗೊಂಡಿದ್ದಾರೆ.

ಕಣ್ಣೀರು ಸುರಿಸಿದವರು ಗೆದ್ದು ಬಂದರು : ಗುರುಮಿಠ್ಕಲ್ ಕಳೆದುಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಗೆಲುವಿನ ನಗೆ ನಕ್ಕಿದ್ದಾರೆ. ಬಂಡಾಯದ ಬಾವುಟ ಹಾರಿಸಿ ಟಿಕೀಟು ಸಿಗದೇ ಹಾರಾಡಿದ್ದ ಜಗ್ಗೇಶ್ ತುರುವೇಕೆರೆಯಿಂದ ಜಯದ ಬಾವುಟ ಹಾರಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಬಣ್ಣದ ಲೋಕದ ಮಂದಿಯನ್ನು ನಿವಾಳಿಸಿ ಎಸೆದ ಮತದಾರ
13ನೇ ವಿಧಾನಸಭೆ ಚುನಾವಣೆ ಫಲಿತಾಂಶ 3ನೇ ಪಟ್ಟಿ
13ನೇ ವಿಧಾನಸಭೆ ಚುನಾವಣೆ ಫಲಿತಾಂಶ ಮೊದಲ ಪಟ್ಟಿ
13ನೇ ವಿಧಾನಸಭೆ ಚುನಾವಣೆ ಫಲಿತಾಂಶ 2ನೇ ಪಟ್ಟಿ
ಜಯದ ಹಾದಿಯಲ್ಲಿ ಬಿಜೆಪಿ, ಯಡ್ಡಿ ಪಟ್ಟಕ್ಕೆ ಸಿದ್ಧತೆ
ಜೆಡಿಎಸ್ ಜತೆ ಕೈ ಮಿಲಾಯಿಸಲು ಕಾಂಗ್ರೆಸ್ ಹುನ್ನಾರ
ಫಲಿತಾಂಶ : ಗಂಟೆ 11 ಬಿಜೆಪಿಗೆ 14 ಕಡೆ ಗೆಲುವು
ಯಡಿಯೂರಪ್ಪ, ಕುಮಾರಸ್ವಾಮಿ ಗೆಲುವಿನ ಹಾದಿಯಲ್ಲಿ
ಭಾರತೀಯ ಜನತಾ ಪಕ್ಷಕ್ಕೆ ಗೆಲುವಿನ ಪ್ರಥಮ ಚುಂಬನ
ಮೊದಲ ಅವಧಿಯಲ್ಲಿ ಅಭ್ಯರ್ಥಿಗಳ ಬಲಾಬಲ
ಮತ ಏಣಿಕೆ ಆರಂಭ ಅಭ್ಯರ್ಥಿಗಳ ಬಲಾಬಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X