ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಪೇಗೌಡರ ಹೆಸರು ಪ್ರಥಮ ಆದ್ಯತೆಯಲ್ಲ : ಟಿಎನಾ ಗೌಡ

By Staff
|
Google Oneindia Kannada News

Narayana Gowda reiterates KaRaVe stand on BIAಬೆಂಗಳೂರು, ಮೇ 24 : ದೇವನಹಳ್ಳಿಯಲ್ಲಿ ಪ್ರಾರಂಭವಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅವರ ಹೆಸರಿಡಬೇಕೆಂದು ಏಕೋದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆ ಅನಾವಶ್ಯಕ ಅಪಸ್ವರ ತೆಗೆದಿದೆಯೆಂದು ಕೆಲ ಪತ್ರಿಕೆಗಳು ಹುಯಿಲೆಬ್ಬಿಸಿವೆ. ಇದು ಶುದ್ಧ ತಪ್ಪು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಪತ್ರಿಕೆಗಳ ವಿರುದ್ಧ ಕಿಡಿಕಾರಿದ್ದಾರೆ.

ನಾಡಪ್ರಭು ಕೆಂಪೇಗೌಡ ಅವರ ಹೆಸರಿಡಬೇಕೆಂದು ಒತ್ತಾಯಿಸುತ್ತಿದ್ದೇವಾದರೂ ಅದು ನಮ್ಮ ಬೇಡಿಕೆಗಳ ಪ್ರಥಮ ಆದ್ಯತೆ ಅಲ್ಲವೇ ಅಲ್ಲ. ಇಲ್ಲಿ ಉದ್ಭವವಾಗಿರುವುದು ಕನ್ನಡಿಗರ ಅನ್ನದ ಪ್ರಶ್ನೆ. ನಮ್ಮ ಹೋರಾಟದ ಪ್ರಮುಖ ಆದ್ಯತೆ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ, ಅಲ್ಲಿ ಕನ್ನಡತನವನ್ನು ಪ್ರತಿಷ್ಠಾಪಿಸಬೇಕೆಂಬುದು. ಹೆಸರೇನಿದ್ದರೂ ಆಮೇಲೆ ಎಂದು ಪತ್ರಿಕಾ ವರದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹೋರಾಟ ನಿಲ್ದಾಣ ಉದ್ಘಾಟನೆಯಾಗುವ ಹಿಂದಿನ ದಿನ ಪ್ರಾರಂಭಿಸಿದ್ದಲ್ಲ. ಕಳೆದ ಒಂದು ವರ್ಷದಿಂದ ಹೋರಾಡುತ್ತಿದ್ದೇವೆ. ಈ ಬೇಡಿಕೆಗಳು ಈಗಲೇ ಈಡೇರದಿದ್ದರೆ ಇನ್ನೆಂದೂ ಈಡೇರಲಾರವು ಎಂಬುದನ್ನು ಮನಗಂಡು ಹೋರಾಟವನ್ನು ತೀವ್ರಗೊಳಿಸಿದ್ದೇವೆ. ಈ ಬೇಡಿಕೆಗಳು ಈಡೇರುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ನಾರಾಯಣಗೌಡ ದಟ್ಸ್ ಕನ್ನಡಕ್ಕೆ ಶನಿವಾರ ತಿಳಿಸಿದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಅಂದರೆ ಸ್ಥಳೀಯರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು. ಇಲ್ಲಿ ಸೃಷ್ಟಿಯಾಗಿರುವ ಹನ್ನೆರಡೂವರೆ ಸಾವಿರ ಉದ್ಯೋಗಗಳಲ್ಲಿ ಕನ್ನಡಿಗರಿಗೆ, ಅದರಲ್ಲೂ ದೇವನಹಳ್ಳಿಯಲ್ಲಿ ಭೂಮಿಯನ್ನು ಕಳೆದುಕೊಂಡ ರೈತ ಕುಟುಂಬದವರಿಗೆ ನೌಕರಿ ನೀಡಬೇಕು. ಸ್ವಾಗತ ಫಲಕದಿಂದ ಹಿಡಿದು ಅಲ್ಲಿನ ವಹಿವಾಟು, ಅಂಗಡಿಮುಂಗಟ್ಟು, ಊಟೋಪಚಾರಗಳಲ್ಲಿಯೂ ಕನ್ನಡದ ಸಂಸ್ಕೃತಿ ಎದ್ದು ಕಾಣಬೇಕು. ಇವುಗಳ ಜೊತೆಗೆ ಕೆಂಪೇಗೌಡರ ಹೆಸರನ್ನೂ ಇಡಬೇಕು ಎಂದು ಗೌಡ ಹೇಳಿದರು.

ಕರವೇ ಆಗ್ರಹಿಸುತ್ತಿರುವ ಬೇಡಿಕೆಗಳು ಇಂತಿವೆ :

1) ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗಗಳು ದೊರೆಯಬೇಕು.
2) ನಾಮಫಲಕಗಳು ಮತ್ತು ಗ್ರಾಹಕರ ಸೇವೆಗಳು ಕನ್ನಡದಲ್ಲಿರಬೇಕು.
3) ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ರೂಪದಲ್ಲಿ ಕೆಲಸ ದೊರೆಯಬೇಕು.
4) ಈ ನೆಲದ ನುಡಿ, ಸಂಸ್ಕೃತಿಗಳಿಗೆ ಮೊದಲ ಮನ್ನಣೆ ಸಿಗಬೇಕು.
5) ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕು.

ಈ ಕುರಿತಂತೆ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಪತ್ರಿಕಾಗೋಷ್ಠಿ ಕರೆಯಲಾಗುವುದು ಎಂದು ಅವರು ತಿಳಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X