ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಐಎ ಕಾರ್ಯಾರಂಭಕ್ಕೆ ಬ್ರುನರ್ ಅತೀವ ಸಂತಸ

By Staff
|
Google Oneindia Kannada News

Operations at BIA begin amidst protestsಬೆಂಗಳೂರು, ಮೇ 24 : ಎಚ್ಎಎಲ್ ವಿಮಾನ ನಿಲ್ದಾಣದ ನೌಕರರ ಮುಷ್ಕರ, ಕರವೇ ಪ್ರತಿಭಟನೆ ಸೇರಿದಂತೆ ಅನೇಕ ವಿಘ್ನಗಳ ನಡುವೆ ಪ್ರತಿಷ್ಠಿತ ದೇವನಹಳ್ಳಿಯಲ್ಲಿನ ಬೆಂಗಳೂರು ವಿಮಾನ ನಿಲ್ದಾಣ ಕೊನೆಗೂ ಶುಕ್ರವಾರ ಮಧ್ಯರಾತ್ರಿಯಿಂದ ಅಂತಾರಾಷ್ಟ್ರೀಯ ನಕ್ಷೆಯಲ್ಲಿ ತನ್ನ ಹೆಗ್ಗುರುತು ಮೂಡಿಸಿದೆ.

ಮಧ್ಯೆರಾತ್ರಿ ಸರಿಯಾಗಿ 12.05 ಕ್ಕೆ ಏರ್ ಇಂಡಿಯಾ ಸಂಸ್ಥೆಯ ವಿಮಾನ (ಐಸಿ 957) ಸಿಂಗಪುರಕ್ಕೆ ಪ್ರಯಾಣ ಬೆಳಸುವ ಮೂಲಕ ನೂತನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಮೊದಲ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ವಿಮಾನದ ಪೈಲಟ್ ಈಶ್ವರ್ ಪೌಲ್ ಮತ್ತು ಸಹಪೈಲಟ್ ಗೌರವ್ ಜಗ್ಗಿ ಹೊಸ ವಿಮಾನ ನಿಲ್ದಾಣದಿಂದ ಮೊದಲು ಹಾರಿದ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಿದ್ದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಗುಣಮಟ್ಟದ ಅತ್ಯದ್ಭುತ ಸೌಲಭ್ಯಗಳನ್ನುಳ್ಳ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಗೆ ಮೂರು ಸಲ ವಿಳಂಬವಾಗಿತ್ತು. ಮೇ 11, ಮೇ 28 ಮತ್ತು ಮೊನ್ನೆ ಗುರುವಾರದಂದು ವಿಮಾನ ನಿಲ್ದಾಣ ಉದ್ಘಾಟನೆಗೊಳ್ಳಬೇಕಿತ್ತು, ಆದರೆ ತಾಂತ್ರಿಕ ದೋಷಗಳು, ಅಪೂರ್ಣಗೊಂಡ ರಸ್ತೆ ಕಾಮಗಾರಿ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರತಿಭಟನೆ ಸೇರಿದಂತೆ ವಿವಿಧ ವಿಘ್ನಗಳು ಉದ್ಘಾಟನೆಗೆ ಅಡ್ಡಿಯಾಗಿದ್ದವು. ಆದನ್ನೆಲ್ಲಾ ನಿರಾತಂಕವಾಗಿ ಬಗೆಹರಿಕೊಂಡು ಶುಕ್ರವಾರ ಮಧ್ಯರಾತ್ರಿ ನೂತನ ವಿಮಾನ ನಿಲ್ದಾಣದ ತನ್ನ ಕಾರ್ಯವನ್ನು ಆರಂಭಿಸಿದೆ.

ಬಿಐಎಎಲ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲ್ಬರ್ಟ್ ಬ್ರುನರ್ ಸುಗಮವಾಗಿ ನೂತನ ವಿಮಾನ ನಿಲ್ದಾಣ ಲೋಕಾರ್ಪಣೆಯಾಗಿದ್ದು ಸಂತೋಷದ ಸಂಗತಿ, ಈ ಗಳಿಗೆಗಾಗಿ ನಾನು ಅನೇಕ ದಿನಗಳಿಂದ ಕಾಯುತ್ತಿದ್ದೆ. ಇದಕ್ಕಾಗಿ ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಲಾಗಿದೆ. ಇದು ನನ್ನ ಜೀವನದ ಅವಿಸ್ಮರಣೀಯ ದಿನ ಎಂದು ಹರ್ಷವ್ಯಕ್ತಪಡಿಸಿದ್ದಾರೆ. ನಮ್ಮ ಕೆಲಸ ಇಲ್ಲಿಗೆ ಮುಗಿಯಲಿಲ್ಲ, ಇನ್ನೂ ಮುಂದೆ ನಮ್ಮ ಕೆಲಸ ಆರಂಭವಾಗಲಿದೆ, ಬೆಂಗಳೂರಿನ ಜನ ಹೆಮ್ಮೆ ಪಟ್ಟುಕೊಳ್ಳುವ ಕೆಲಸವನ್ನು ನಾವು ಮಾಡಿ ಮುಗಿಸಿದ್ದೇವೆ ಎಂದು ನುಡಿದಿದ್ದಾರೆ.

ಬೆಂಗಳೂರಿನ ಮಧ್ಯಭಾಗದಿಂದ35 ಕಿ.ಮೀ. ದೂರದಲ್ಲಿರುವ ನೂತನ ಏರ್ಪೋರ್ಟ್‌ಗೆ ಸಾಗಬೇಕಾಗಿರುವ ಕಷ್ಟಕರ ರಸ್ತೆ, ಎಚ್ಎಎಲ್ ವಿಮಾನ ನಿಲ್ದಾಣ ಕಳೆದುಕೊಂಡ ಭಾವನಾತ್ಮಕತೆಯನ್ನು ಬದಿಗಿಟ್ಟು ಪ್ರಯಾಣಿಕರು ಕೂಡ ಹೊಸ ನಿಲ್ದಾಣವನ್ನು, ಅಲ್ಲಿಯ ಗುಣಮಟ್ಟವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.

ನೂತನ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಅನೇಕ ಕನ್ನಡಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ಈ ಹಿನ್ನಲೆಯಲ್ಲಿ ಉದ್ಘಾಟನೆ ಮತ್ತೆ ಮುಂದೂಡಲಾಗುತ್ತದೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಎಲ್ಲ ಸಮಸ್ಯೆಗಳ ಮಧ್ಯೆ ಸುಗಮವಾಗಿ ಉದ್ಘಾಟನೆಗೊಂಡು ಜಾಗತಿಕ ಮಟ್ಟದಲ್ಲಿ ಬೆಂಗಳೂರು ಕೀರ್ತಿ ಪತಾಕೆ ಹಾರಿಸಿತು. ಈ ವಿಮಾನ ನಿಲ್ದಾಣಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರಿಡಬೇಕೆಂದೂ ಅನೇಕ ವಲಯಗಳಿಂದ ಮಾತುಗಳು ಕೇಳಿಬರುತ್ತಿವೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X