ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಾಯಿ ದುರಂತಕ್ಕೆ ಯಡ್ಡಿ ಮೇಲೆ ಮುಗಿಬಿದ್ದ ಸಿದ್ದು

By Staff
|
Google Oneindia Kannada News

Siddaramaiah criticises Yediyurappa for banning arrackಬೆಂಗಳೂರು, ಮೇ. 23 : ರಾಜ್ಯದಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತಕ್ಕೆ ಸಾರಾಯಿಯನ್ನು ನಿಷೇಧಿಸಿದ ಯಡಿಯೂರಪ್ಪನವರ ವಿವೇಚನಾರಹಿತ ನಿರ್ಧಾರವೇ ಕಾರಣ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಆಪಾದಿಸಿದ್ದಾರೆ. ಮೇಲುನೋಟಕ್ಕೆ ಸಾರಾಯಿ ನಿಷೇಧ ಸಾಮಾಜಿಕ ಒಳಿತಿಗೆ ಪ್ರೇರಕ ಎಂದು ಕಂಡುಬಂದರೂ ಅದನ್ನು ನಿಷೇಧಿಸುವ ನಿರ್ಧಾರದ ಹಿಂದೆ ತರ್ಕ ಶುದ್ಧವಿಲ್ಲದ ಅನೇಕ ಸಂಗತಿಗಳು ಅಡಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಾರಾಯಿ ಕುಡಿಯುವುದು ಒಂದು ಚಟ. ಆದಕ್ಕೆ ದಾಸನಾದವನು(ಳು) ಕುಡಿತದಿಂದ ದೂರ ಉಳಿಯುವುದು ಸುಲಭವಲ್ಲ. ಸಾರಾಯಿ ಅಂಗಡಿಗೆ ಸರಕಾರದವರು ಬೀಗ ಹಾಕಿದರೆ ಕುಡುಕರು ವೈನ್‌ಶಾಪ್‌ಗೆ ಹೋಗುತ್ತಾರೆ. 13 ರೂಪಾಯಿಯ ಒಂದು ಸಾರಾಯಿ ಪಾಕೆಟ್ ಕೊಳ್ಳುವ ಮನುಷ್ಯ 38 ರಿಂದ 50 ರೂ.ವರೆಗೆ ದುಡ್ಡು ತೆತ್ತು ಬಾಟಲಿ ಮಧ್ಯ ಖರೀದಿಸುತ್ತಾನೆ.

ಸಾರಾಯಿ ನಿಷೇಧದಿಂದ ಖಜಾನೆಗೆ ಏನೂ ನಷ್ಟವಾಗದು. ಇಂಡಿಯನ್ ಮೇಡ್ ಲಿಕ್ಕರ್ ಸಂತತಿಯ ಉತ್ಪಾದನೆ ಮತ್ತು ಮಾರಾಟ ಬಾಬತ್ತಿನಿಂದ ಸರಕಾರಕ್ಕೆ ತೆರಿಗೆ ಹೇರಳವಾಗಿ ದಕ್ಕುತ್ತದೆ. ಬೀರು, ವಿಸ್ಕಿ, ರಮ್ಮು, ಬ್ರಾಂದಿ ಉತ್ಪಾದಿಸುವ ಘಟಕಗಳಿಗೆ ಬಿಸಿನೆಸ್ ಹೆಚ್ಚಾಗುತ್ತದೆ. ಅಂತೆಯೇ, ಬಾರು, ವೈನ್ ಶಾಪ್ ಮತ್ತು ರೆಸ್ಚೋರೆಂಟುಗಳ ವ್ಯಾಪಾರ ಏರುತ್ತದೆ.

ಸಾರಾಯಿ ನಿಷೇಧವಾದಾಗಿನಿಂದ (ಜುಲೈ 1 , 2007) ಬಾಟಲಿ ಮದ್ಯೋದ್ಯಮ ಮೂರು ಪಟ್ಟು ಉಬ್ಬಿಕೊಂಡಿದೆ. ಒಂದು ಲಕ್ಷ ಕೇಸುಗಳು ಮಾರಾಟವಾಗುವ ಕಡೆ ಮೂರು ಲಕ್ಷ ಕೇಸುಗಳು ಬಿಕರಿಯಾಗುತ್ತಿವೆ. ಕೊಬ್ಬಿದ ಬಾಟಲಿ ಮದ್ಯ ವ್ಯಾಪಾರದಿಂದ ಯಾವಯಾವ ಲಾಬಿಗಳಿಗೆ ಲಾಭವಾಯಿತು ಎನ್ನುವುದನ್ನು ಸಮಾಜ ಗಮನಿಸಬೇಕು ಎಂದು ಅವರು ನುಡಿದರು.

ಸಾರಾಯಿ ಬಡಕುಡುಕನ ಕಾಮಧೇನು. ಅದಕ್ಕೆ ಕೊಕ್ಕೆ ಹಾಕಿದ ಯಡಿಯೂರಪ್ಪನವರ ನಿರ್ಧಾರದಿಂದ ಮದ್ಯ ಉದ್ಯಮದ ಒಂದು ವಲಯಕ್ಕೆ ಲಾಭವಾಗಿದೆ. ಅತ್ಯಲ್ಪ ಬೆಲೆಗೆ ಸಿಗುತ್ತಿದ್ದ ಸಾರಾಯಿಯಿಂದ ವಂಚಿತರಾದವರು ಅದಕ್ಕೂ ಕಡಿಮೆ ಬೆಲೆಯ ವಿಷಪೂರಿತ ಕಳ್ಳಭಟ್ಟಿಗೆ ಮೊರೆಹೋಗುತ್ತಾರೆ. ಆಗ ದುರಂತಗಳು ಸಂಭವಿಸುತ್ತವೆ ಎಂದು ಇತ್ತೀಚಿನ ಕಳ್ಳಭಟ್ಟಿ ದುರಂತವನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ಹೇಳಿದರು.

ಕಳ್ಳಭಟ್ಟಿ ತಡೆಯುವುದಕ್ಕೆ ಪೊಲೀಸು ಮತ್ತು ಅಬಕಾರಿ ಇಲಾಖೆಯ ಸಿಬ್ಬಂದಿಯಿಂದ ಮಾತ್ರ ಸಾಧ್ಯ. ಅವರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸದಿದ್ದರೆ ದುರಂತಗಳು ಸಂಭವಿಸುತ್ತಲೇ ಇರುತ್ತವೆ ಎಂದು ಅಬಕಾರಿ ಇಲಾಖೆ ಸಚಿವರಾಗಿಯೂ ಅನುಭವವಿರುವ ಸಿದ್ದು ಹೇಳಿದರು.

ಹಾಗಂತ ಸಾರಾಯಿ ನಿಷೇಧವನ್ನು ಹಿಂತೆಗೆದುಕೊಂಡು ಮತ್ತೆ ಸಾರಾಯಿ ಗಡಂಗುಗಳನ್ನು ತೆರೆಯಬೇಕೆ ? ಅದಕ್ಕೆ ಉತ್ತರ ಅಷ್ಟು ಸುಲಭವಲ್ಲ ಎನ್ನುತ್ತಾರೆ ಸಿದ್ದು. ತಮ್ಮ ಸರಕಾರ ಆಡಳಿತ ಹಿಡಿದರೆ ಸಾರಾಯಿ ಬಗ್ಗೆ ಕೂಲಂಕಷ ಅಧ್ಯಯನ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎನ್ನುವ ಇರಾದೆಯನ್ನು ಅವರು ವ್ಯಕ್ತಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

ಹರಕೆ ಕುರಿಯಾಗಿಯೇ ಅವತರಿಸಿರುವ ಸಿದ್ದರಾಮಯ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X