ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರದತ್ತ ಗುಳೆ ಹೊರಟ ರಾಜಕಾರಣಿಗಳ ದಂಡು

By Staff
|
Google Oneindia Kannada News

ಬೆಂಗಳೂರು, ಮೇ 18: ಪ್ರಥಮ ಹಾಗೂ ದ್ವಿತೀಯ ಹಂತದ ಮತದಾನ ಶಾಂತಿಯುತವಾಗಿ ಮುಗಿದಿದೆ. ರಾಜಕೀಯವಾಗಿ ಅತೀ ಮಹತ್ವ ಏನಿಸಿರುವ ಮೂರನೇ ಹಂತದ ಮತದಾನಕ್ಕೆ ವೇದಿಕೆ ಸಜ್ಜಾಗತೊಡಗಿದೆ. ಘಟಾನುಘಟಿ ರಾಜಕಾರಣಿಗಳ ದಂಡು ಉತ್ತರ ಕರ್ನಾಟಕದ ಕಡೆಗೆ ಲಗ್ಗೆಯಿಟ್ಟಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ.

ಮೂರನೇ ಹಂತದ ಚುನಾವಣೆ ಪ್ರಚಾರಕ್ಕೆ ದೇಶದ ಘಟಾನುಘಟಿ ಮುಖಂಡರ ಪ್ರಚಾರ ಸಭೆಯಿಂದ ಆಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೊದಲೆರಡು ಹಂತದ ಚುನಾವಣೆಯ ಮುಗಿದಿರುವ ಹಿನ್ನಲೆಯಲ್ಲಿ ಎಲ್ಲ ಪಕ್ಷದ ನಾಯಕರು ಮೂರನೇ ಹಂತದ ಚುನಾವಣೆಯತ್ತ ದೃಷ್ಟಿ ಹಾಯಿಸಿದ್ದು, ಮೇ 22 ಗುರುವಾರದಂದು ಮತದಾನ ನಡೆಯುವ ಗುಲ್ಬರ್ಗಾ, ಬಿಜಾಪುರ, ಬೀದರ್, ಬೆಳಗಾವಿ, ಗದಗ, ಹಾವೇರಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಸ್ಟಾರ್ ಕ್ಯಾಂಪೇನರ್‌ಗಳಾದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಹೇಮಾಮಾಲಿನಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಚಾರದಿಂದ ಉರಿ ಬಿಸಿಲಿನೊಂದಿಗೆ ಚುನಾವಣೆ ಬಿಸಿ ಬೆರೆತು ತಾಪಮಾನ ಮತ್ತಷ್ಟು ಏರಿದೆ.

ತೃತೀಯ ಹಂತದ ಮತದಾನದಲ್ಲಿ ಆಖಾಡಕ್ಕಿಳಿದಿರುವ ಘಟಾನುಘಟಿಗಳಲ್ಲಿ ಮಾಜಿಮುಖ್ಯಮಂತ್ರಿ ಎನ್.ಧರ್ಮಸಿಂಗ್ (ಜೇವರ್ಗಿ), ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(ಚಿತ್ತಾಪುರ ಮೀಸಲು), ಮಾಜಿ ಸಚಿವ ಎಚ್.ಕೆ.ಪಾಟೀಲ್(ಗದಗ), ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ(ದೇವರಹಿಪ್ಪರಗಿ), ಮಾಜಿ ಸಚಿವ ಶಶಿಕಾಂತ ನಾಯಿಕ, ಎ.ಬಿ.ಪಾಟೀಲ್, ಉಮೇಶ್ ಕತ್ತಿ(ಹುಕ್ಕೇರಿ), ಪ್ರಕಾಶ ಹುಕ್ಕೇರಿ, ರಮೇಶ ಜಿಗಜಿಣಗಿ (ಚಿಕ್ಕೋಡಿ), ಬಾಲಚಂದ್ರ ಜಾರಕಿಹೊಳಿ (ಅರಭಾವಿ), ಕಾಂಗ್ರೆಸ್ ಪಕ್ಷದ ಟಿಕೆಟ್‌ನಿಂದ ವಂಚಿರಾಗಿರುವ ರಮೇಶ್ ಕುಡಚಿ(ಬೆಳಗಾವಿ ಉತ್ತರ), ರಮೇಶ್ ಜಾರಕಿಹೊಳೆ, ಭೀಮಶಿ ಜಾರಕಿಹೊಳಿ (ಗೋಕಾಕ), ಬಂಡೆಪ್ಪ ಕಾಶೆಂಪೂರ, ಗುರುಪಾದಪ್ಪ ನಾಗಮಾರಪಳ್ಳಿ(ಬೀದರ್), ಜಗದೀಶ್ ಶೆಟ್ಟರ್(ಹುಬ್ಬಳ್ಳಿ ಗ್ರಾಮೀಣ), ಸತೀಶ್ ಜಾರಕಿಹೊಳಿ(ಯಮಕನಮರಡಿ), ಮಾಜಿ ಸಚಿವ ಸಿ.ಎಂ.ಉದಾಸಿ(ಹಾನಗಲ್), ಆಲ್ಕೋಡ್ ಹನುಮಂತಪ್ಪ(ಶಿರಹಟ್ಟಿ ಮೀಸಲು) ಕಣದಲ್ಲಿರುವ ಪ್ರಮುಖರಾಗಿದ್ದಾರೆ.

ಇವರಲ್ಲಿ ಗುರುಮಿಟ್ಕಲ್ ಕ್ಷೇತ್ರ ಕಳೆದುಕೊಂಡು ಚಿತ್ತಾಪುರದಿಂದ ಸ್ಪರ್ಧಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಜೇವರ್ಗಿಯಿಂದ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ದಾಖಲೆ 9ನೇ ಬಾರಿಗೆ ಜಯಶಾಲಿಯಾಗುವ ಕನಸನ್ನು ಹೊತ್ತು ಅಖಾಡಕ್ಕಿಳಿದಿದ್ದಾರೆ.

ಒಂದನೇ ಮತ್ತು ಎರಡನೇ ಹಂತದ ಮತದಾನ ನಡೆದ ಜಿಲ್ಲೆಗಳಿಗಿಂತ ಮೂರನೇ ಹಂತದ ಜಿಲ್ಲೆಗಳು ಆರ್ಥಿಕವಾಗಿ ಮತ್ತು ಅಭಿವೃದ್ಧಿ ದೃಷ್ಟಿಯಿಟ್ಟು ನೋಡಿದರೆ ಹಿಂದುಳಿದ ಜಿಲ್ಲೆಗಳು. ಮೂಲಭೂತ ಸೌಕರ್ಯ, ಕುಡಿಯುವ ನೀರು, ಉತ್ತಮ ಸಂಪರ್ಕ ರಸ್ತೆ, ಆಸ್ಪತ್ರೆಯ ಕೊರತೆಯನ್ನು ಅನುಭವಿಸುತ್ತಿವೆ. ಉತ್ತರ ಕರ್ನಾಟಕಕ್ಕೆ ದಕ್ಕಬೇಕಾದ ಸೌಕರ್ಯಗಳು ದಕ್ಕಿಲ್ಲ ಎಂಬ ಕೂಗು ಇನ್ನೂ ಜನರ ಗಂಟಲಲ್ಲೇ ಇದೆ. ಅಲ್ಲದೆ, ಘಟಾನುಘಟಿ ನಾಯಕರು ಯಾವ ಅಭಿವೃದ್ಧಿಯ ಕಾರ್ಯವನ್ನೂ ಕೈಗೊಂಡಿಲ್ಲ. ಬೆಂಕಿಗೆ ತುಪ್ಪ ಸುರಿದಂತೆ ಬಿರುಬಿಸಿಲಿನ ತಾಪ.

ಸಮೀಕ್ಷೆಯ ಪ್ರಕಾರ ಒಂದು ಮತ್ತು ಎರಡನೇ ಹಂತದ ಮತದಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿದೆ. ಸ್ಪರ್ಧೆಯಲ್ಲಿ ನಾನೂ ಇದ್ದೇನೆ ಎಂದು ಜೆಡಿಎಸ್ ಕೂಡ ಸಮಯಾವಕಾಶಕ್ಕಾಗಿ ಕಾದು ಕುಳಿತಿದೆ. ಒಟ್ಟಾರೆ ಕರ್ನಾಟಕದ ರಾಜಕೀಯ, ರಾಜಕಾರಣಿಗಳ ಭವಿಷ್ಯ ಮೂರನೇ ಹಂತದ ಮತದಾನದ ಮೇಲೆ ನಿಂತಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X