ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಪೊಲೀಸ್ ಬಲೆಗೆ ಮತ್ತೊಬ್ಬ ಶಂಕಿತ ಉಗ್ರ

By Staff
|
Google Oneindia Kannada News

ಬೆಳಗಾವಿ, ಮೇ 15: ಉತ್ತರ ಕರ್ನಾಟಕ ಉಗ್ರರ ಅಡಗುದಾಣವಾಗಿದೆ ಎನ್ನುವ ಆರೋಪಕ್ಕೆ ಪುಷ್ಟಿ ನೀಡುವಂತೆ ಉಗ್ರರ ಜತೆಗೆ ಸಂಪರ್ಕ ಹೊಂದಿದ್ದಾನೆಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ನಗರದ ಮಾರ್ಕೆಟ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧನಕ್ಕೆ ಒಳಗಾಗಿರುವ ಶಂಕಿತ ಉಗ್ರನ ಹೆಸರು ಲಿಯಾಕತ್ ಅಬ್ದುಲ್ ಘನಿ ಸಯ್ಯದ್(32). ಬಂಧಿತ ವ್ಯಕ್ತಿ ಭಾರತೀಯ ಮೂಲದ ಲಂಡನ್ ನಿವಾಸಿಯಾಗಿದ್ದಾನೆ. ಕಳೆದ ಹತ್ತು ವರ್ಷಗಳಿಂದ ಅಲ್ಲಿಯೇ ವಾಸವಾಗಿರುವ ಈತನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆತನಿಂದ ನಾಲ್ಕು ಮೊಬೈಲ್, ಒಂದು ಲ್ಯಾಪ್ ಟಾಪ್, 28 ಸಿಡಿಗಳು ಹಾಗೂ ಮುಸ್ಲಿಂ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ಆತನಿಂದ ವಶಪಡಿಸಿಕೊಂಡಿರುವ ಸಿಡಿಗಳಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣ, ಕಾಶ್ಮೀರ ದಾಳಿ, ಗೋಧ್ರಾ ಹತ್ಯಾಕಾಂಡಗಳ ಬಗ್ಗೆ ಮಾಹಿತಿಯಿದೆ ಎಂದು ತಿಳಿದುಬಂದಿದೆ.

ಮಹತ್ವದ ಕಾರ್ಯಾಚರಣೆಯಲ್ಲಿ ಶಂಕಿತ ಉಗ್ರನನ್ನು ಬಂಧಿಸಿರುವ ಪೊಲೀಸರು ಈತನೊಂದಿಗೆ ಸಂಪರ್ಕದಲ್ಲಿರುವ ವ್ಯಕ್ತಿಗಳ ಕೂಡ ವಿಚಾರಣೆ ಆರಂಭಿಸಿದ್ದಾರೆ. ಬಂಧಿತ ಉಗ್ರ ದೇಶ ವಿದೇಶಗಳಲ್ಲಿನ ಅನೇಕರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ತಿಳಿದುಬಂದಿದೆ.

ಹುಬ್ಬಳ್ಳಿ ಸುತ್ತಮುತ್ತ ಭಯೋತ್ಪಾದಕ ಚಟುವಟಿಕೆ ನಡೆಸಿದ್ದ ಉಗ್ರರನ್ನು ವಿಚಾರಣೆ ಮಾಡುತ್ತಿರುವ ನ್ಯಾಯಾಲಯದಲ್ಲಿ ಮೇ 10ರಂದು ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಪೊಲೀಸರು ಉಗ್ರಗಾಮಿಗಳ ನೆಲೆಗಳನ್ನು ತೀವ್ರವಾಗಿ ಹುಡುಕುತ್ತಿದ್ದಾರೆ. ಈಗ ಬಂಧಿತನಾಗಿರುವ ಸಯ್ಯದ್‌ನಿಂದ ಉತ್ತರ ಕರ್ನಾಟಕದಲ್ಲಿ ದಟ್ಟವಾಗಿ ಹರಡಿರುವ ಉಗ್ರರ ಜಾಲದ ಬಗ್ಗೆ ಮಹತ್ವದ ಮಾಹಿತಿ ದೊರೆಯುವ ಸಾಧ್ಯತೆಗಳಿವೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X