ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮುಲು ಪರ ರವಿ ಬೆಳಗೆರೆ ಮತಯಾಚನೆ

By Staff
|
Google Oneindia Kannada News

Ravi Belagere campaigns for Sriramulu in Bellaryಬಳ್ಳಾರಿ, ಮೇ 14 : ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿರುವ ಗಣಿ ಧಣಿ ಶ್ರೀರಾಮುಲು ಪರವಾಗಿ ಖ್ಯಾತ ಪತ್ರಕರ್ತ 'ಹಾಯ್ ಬೆಂಗಳೂರ್' ಸಂಪಾದಕ ರವಿ ಬೆಳಗೆರೆ ಅವರು ಇಂದು ಮತ ಯಾಚಿಸಿದರು.

ಬರೀ ದುಡ್ಡಿನಿಂದ ರಾಜಕೀಯ ಮಾಡಲು ಸಾಧ್ಯವಿದ್ದರೆ ಶೆಟ್ಟರಂಗಡಿಯವನೂ ಕೂಡ ಇಂದು ರಾಜಕೀಯದಲ್ಲಿರುತ್ತಿದ್ದ. ಶ್ರೀರಾಮುಲು ಅವರು ಉತ್ತಮ ಸಮಾಜ ಸೇವಕರಾಗಿದ್ದು, ಅನೇಕ ಜನಪರ ಕೆಲಸ ಮಾಡಿದ್ದಾರೆ ಎಂದು ಶ್ರೀರಾಮುಲು ಅವರನ್ನು ಹಾಡಿಹೊಗಳಿದ ರವಿ ಬೆಳಗೆರೆ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಕಾಂಗ್ರೆಸ್ ಪರ ಸ್ಪರ್ಧಿಸುತ್ತಿರುವ ಅನಿಲ್ ಲಾಡ್ ಅವರನ್ನು ಹೀನಾಮಾನವಾಗಿ ತೆಗಳಿದರು.

ಜನಾನುರಾಗಿಯಾಗಿರುವ ಶ್ರೀರಾಮುಲು ಅವರನ್ನು ಬೆಂಬಲಿಸಿ ಬಿಜೆಪಿಗೆ ಮತ ನೀಡಬೇಕೆಂದು ಸುಷ್ಮಾ ಸ್ವರಾಜ್ ಅವರೊಂದಿಗೆ ವೇದಿಕೆ ಹಂಚಿಕೊಂಡ ರವಿ ಬೆಳಗೆರೆ ಮತದಾರರಲ್ಲಿ ಮನವಿ ಮಾಡಿಕೊಂಡರು. ಬಿಜೆಪಿ ಪರ ಪ್ರಚಾರಕ್ಕೆ ತಮ್ಮ ಸ್ವಂತ ಊರಿಗೆ ಆಗಮಿಸಿರುವ ಬೆಳಗೆರೆ ಬಳ್ಳಾರಿ ನಗರದಿಂದ ಸ್ಪರ್ಧಿಸಿರುವ ಜನಾರ್ಧನ್ ರೆಡ್ಡಿ ಅವರ ಸಹೋದರ ಸೋಮಶೇಖರ ರೆಡ್ಡಿ ಅವರ ಪರವಾಗಿಯೂ ಮತ ಯಾಚಿಸಿದರು. ಚುನಾವಣಾ ಕಣದಿಂದ ಜೆಡಿಎಸ್‌ನ ದಿವಾಕರ್ ಬಾಬು ಹಿಂತೆಗೆದು ಕಾಂಗ್ರೆಸ್ ಸೇರಿರುವುದರಿಂದ ಸೋಮಶೇಖರ್ ಮತ್ತು ಅನಿಲ್ ಲಾಡ್ ನಡುವೆ ಸೇರ ಸ್ಪರ್ಧೆ ಏರ್ಪಟ್ಟಿದೆ.

ಡೈಲಾಗ್ ಕಿಂಗ್ ವಾಗ್ಝರಿ, ಸುಷ್ಮಾ ಮಾತಿನ ಲಹರಿ : ದುಡ್ಡಿನ ಹರಿವಿನಿಂದ, ಗಣಿ ದ್ವೇಷದ ರಾಜಕಾರಣದಿಂದ ಇಡೀ ರಾಷ್ಟ್ರದ ಗಮನ ಸೆಳೆದಿರುವ ಬಳ್ಳಾರಿಯಲ್ಲಿ ಮತದಾರರನ್ನು ಸುಷ್ಮಾ ಮಾತಿನ ಲಹರಿಯಿಂದ ಮೋಡಿ ಮಾಡಿದರು, ಡೈಲಾಗ್ ಕಿಂಗ್ ಸಾಯಿಕುಮಾರ್ ವಾಗ್ಝರಿ ಹರಿಸಿದರು.

ಒಂದಾನೊಂದು ಕಾಲದಲ್ಲಿ ಬಳ್ಳಾರಿ ಜಿಲ್ಲೆ ಹತ್ಯೆ, ಹಿಂಸೆ, ಲೂಟಿ, ಅಶಿಕ್ಷತೆಯ ತವರೂರಾಗಿತ್ತು. ಆದರೆ ಇಂದು ಬಳ್ಳಾರಿ ವಿಕಾಸದ ಪ್ರತಿಬಿಂಬವಾಗಿದೆ, ಸೇವಾಮನೋಭಾವದ, ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಮತದಾರರ ಗಮನ ಸೆಳೆದರು. ನಂತರ ಮಾತನಾಡಿದ ಡೈಲಾಗ್ ಕಿಂಗ್ ಸಾಯಿಕುಮಾರ್, ಕಾವೇರಿ ನೀರಿರುವವರೆಗು, ಮದಕರಿ ನಾಯಕರ ಖ್ಯಾತಿ ನೆನಪಿನಲ್ಲಿರುವವರೆಗೂ ಬಿಜೆಪಿಯನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಮಾತಿನ ಪ್ರವಾಹ ಹರಿಸಿದರು.

ಮೇ 16ರಂದು ನಡೆಯಲಿರುವ ಎರಡನೇ ಹಂತದ ಮತದಾನದ ಪ್ರಚಾರಕ್ಕೆ ಇಂದು ಅಂತಿಮ ದಿನವಾದ್ದರಿಂದ ಬಳ್ಳಾರಿ ಬಿರುಬಿಸಿಲಿನಲ್ಲೂ ಭಾರೀ ಜನಸ್ತೋಮ ಸೇರಿತ್ತು. ರವಿ ಬೆಳಗೆರೆ, ಸಾಯಿಕುಮಾರ್, ಸುಷ್ಮಾ, ಶ್ರೀರಾಮುಲು ಭಾಷಣಕ್ಕೆ ಶಿಳ್ಳೆಗಳ ಸುರಿಮಳೆ ಸುರಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X