ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಸಾಮಾನ್ಯನಿಗೆ ಎಟುಕದ ಎತ್ತರದಲ್ಲಿ ಹಣ್ಣಿನ ರಾಜ

By Staff
|
Google Oneindia Kannada News

Mangoes prices may be hikedಮೈಸೂರು, ಮೇ 13: ಫಸಲು ಕಡಿಮೆ ಬೆಲೆ ದುಬಾರಿ ಇದು ಈ ಬಾರಿಯ ಮಾವಿನ ಹಣ್ಣಿನ ವಿಶೇಷ. ಇನ್ನೇನು ಮೇ ತಿಂಗಳ ಅಂತ್ಯಕ್ಕೆ ಮುಂಗಾರು ಮಳೆ ಶುರುವಾಗಲಿದೆ. ಹಾಗೆಯೇ ಮಾವಿನ ಹಣ್ಣಿನ ಪೂರೈಕೆ ಸಹ ಹಂತ ಹಂತವಾಗಿ ಕಡಿಮೆಯಾಗಲಿದೆ.

ಹಣ್ಣುಗಳ ರಾಜ ಮಾವಿನ ಬೆಲೆಗಳು ಶ್ರೀಸಾಮಾನ್ಯನ ಕೈಗೆಟುಕದಷ್ಟು ಎತ್ತರಕ್ಕೇರಿವೆ. ಈ ವರ್ಷ ಮಾರ್ಚ್ ತಿಂಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆ ಮಾವು ಫಸಲನ್ನು ಬಲಿ ತೆಗೆದುಕೊಂಡಿತು. ಹಾಗಾಗಿ ಉತ್ತಮ ಗುಣಮಟ್ಟದ ಮಾವಿನ ಹಣ್ಣಿಗೆ ಬರಗಾಲ.

ವಿವಿಧ ಜಾತಿಯ ಹಣ್ಣ್ಣುಗಳಾದ ಬಾದಾಮಿ, ಮಲ್ಲಿಕಾ, ಬೇನಿಷಾ ಮತ್ತು ಮಲ್ಗೊವಾ ತಿನ್ನಬೇಕಾದರೆ ಕೆ.ಜಿಗೆ 40 ರು. ತೆರಬೇಕು. ನೀಲಂ, ರಸಪೂರಿ,ಬಂಗನಪಲ್ಲಿ ಮತ್ತು ಸನಿದೂರದಂತಹ ತಳಿಗಳು ಕೆ.ಜಿಗೆ 25ರು.ಗಳಿಂದ 30 ರು.ಗಳ ತನಕ ಇವೆ. ಮಾವಿನ ಬೆಲೆಗಳು ಈ ರೀತಿ ಏರಲು ಸಮೃದ್ಧವಾಗಿದ್ದ ಹೂವನ್ನು ಅಕಾಲಿಕ ಮಳೆ ತಿಂದಿದ್ದು ಹಾಗೂ ಹೀಚು ಕಾಯಿಗಳು ವಾತಾವರಣದಲ್ಲಿ ಹೆಚ್ಚಿನ ತೇವಾಂಶದಿಂದ ಮಣ್ಣುಪಾಲಾಗಿದ್ದೇ ಕಾರಣ.

ಮುಖ್ಯವಾಗಿ ಮೈಸೂರು ವಲಯದಲ್ಲಿನ ಮಾವು ಫಸಲು ಈ ವರ್ಷ ಸರಾಸರಿಗಿಂತಲೂ ಕಡಿಮೆ. ಅಕಾಲಿಕ ಮಳೆಯೊಂದಿಗೆ ಹೂವಿಗೆ ಎರವಾಗುವ ಶಿಲೀಂದ್ರ ರೋಗ ಸಹ ಜೊತೆಯಾಗಿ ಫಸಲು ಮತ್ತಷ್ಟು ಕಡಿಮೆಯಾಗಿದೆ. ಮಾವಿನ ತೋಪುಗಳಿಂದ ಈ ಬಾರಿ ನಮಗೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳು ಪೂರೈಕೆಯಾಗಲಿಲ್ಲ. ಹೂ ಕಾಯುವ ಸಮಯದಲ್ಲಿ ಮಳೆ ಬಂದಿದ್ದೆ ಇದಕ್ಕೆಲ್ಲಾ ಕಾರಣ ಎನ್ನುತ್ತಾರೆ ಮೈಸೂರಿನ ಅಕ್ಬರ್ ರಸ್ತೆಯ ಮಾವಿನ ವ್ಯಾಪಾರಿ ಆಸೀಫ್.

ಮೈಸೂರು ಪ್ರಾಂತ್ಯದಲ್ಲಿ ಎಲ್ಲಾ ವಿಧವಾದ ಮಾವುಗಳನ್ನು ಬೆಳೆಯಲಾಗುತ್ತಿದೆ. ಅವು ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೂ ರಫ್ತಾಗುತ್ತವೆ. ಎಚ್.ಡಿ.ಕೋಟೆ ತಾಲೂಕು ಆಲ್ಫಾನ್ಸೋ ಮಾವಿಗೆ ಹೆಸರುವಾಸಿ. ಮೈಸೂರು ಜಿಲ್ಲೆಯಲ್ಲಿ ಮಾವಿನ ಇತರ ಜಾತಿಗಳಾದ ರಸಪೂರಿ, ಮಲ್ಗೊವಾ, ಬಾದಾಮಿ, ಸನಿದೂರ, ಮಲ್ಲಿಕಾ, ಬಲಜ ಮತ್ತು ತೋತಾಪುರಿ ಹಣ್ಣುಗಳನ್ನು ಸಹ ಯಥೇಚ್ಚವಾಗಿ ಬೆಳೆಯಲಾಗುತ್ತಿದೆ.

ಪಕ್ಕದ ರಾಜ್ಯಗಳ ಮಾವಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದೆ ಕೈಚೆಲ್ಲಿದ್ದಾರೆ ಕುಳಿತಿದ್ದಾರೆ ಮೈಸೂರಿನ ವ್ಯಾಪಾರಿಗಳು. ರಸ್ತೆ ಬದಿಯ ಸಣ್ಣಪುಟ್ಟ ಮಳಿಗೆಗಳಲ್ಲಿ ಲಭಿಸುತ್ತಿದ್ದ ಅಲ್ಫನ್ಸೊ ಮಾವು ಈಗ ಶಾಪಿಂಗ್ ಮಾಲ್‌ಗಳು ಹಾಗೂ ಬೃಹತ್ ಹಣ್ಣಿನ ಅಂಗಡಿಗಳಲ್ಲಿ ಮಾತ್ರ ಕಾಣಸಿಗುತ್ತದೆ. ಮಹಾರಾಷ್ಟ್ರ ಮತ್ತು ಬೆಳಗಾವಿಯ ಕೆಲ ಭಾಗದ ವರ್ತಕರಷ್ಟೇ ಆಲ್ಫಾನ್ಸೊ ಮಾವನ್ನು ಪೂರೈಸುತ್ತಿದ್ದಾರೆ. ಅವರಿಗೀಗ ಸುಗ್ಗಿ ಕಾಲ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X