ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತಿಹಾಸ ಸೇರಿದ ಮೊದಲ ಹಂತದ ಚುನಾವಣೆ

By Staff
|
Google Oneindia Kannada News

Incident free election, 59.5% polling in K'takaಬೆಂಗಳೂರು, ಮೇ 10 : ಕ್ಷೇತ್ರ ಪುನರ್ ವಿಂಗಡಣೆ ನಂತರ ಚುನಾವಣೆ ಎದುರಿಸುತ್ತಿರುವ ಮೊದಲ ರಾಜ್ಯ ಎಂದು ಕರ್ನಾಟಕ ಇತಿಹಾಸದಲ್ಲಿ ಇಂದು ದಾಖಲಾಯಿತು. ಪ್ಲಾಸ್ಟಿಕ್, ಬ್ಯಾನರ್, ಬಂಟಿಗ್ಸ್ ಇಲ್ಲದೆ ಚುನಾವಣೆ ಆಯೋಗದ ಕಟ್ಟುನಿಟ್ಟಿನ ನೀತಿ ಸಂಹಿತೆಗಳ ನಡುವೆ 13ನೇ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ರಾಜ್ಯ ಮೂಕ ಸಾಕ್ಷಿಯಾಯಿತು. ಮೊದಲ ಹಂತದ ಚುನಾವಣೆಗೆ ಇಂದು ಒಟ್ಟಾರೆ ಶೇ.59.5ರಷ್ಟು ಮತದಾನ ದಾಖಲಾಗಿದೆ.

ಇಂದು 11 ಜಿಲ್ಲೆಗಳಲ್ಲಿ ಬೆಳಗ್ಗೆ 7ಗಂಟೆಯಿಂದ ಸಂಜೆ 5 ಗಂಟೆವರೆಗೂ ನಡೆದ ಮತದಾನಕ್ಕೆ ಆರಂಭದಲ್ಲಿ ಮತದಾರರು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಸಂಜೆಯಾಗುತ್ತಿದ್ದಂತೆ ಮತಗಟ್ಟೆಗಳಿಗೆ ಕಳೆ ತುಂಬಿತು. ಹಣ,ಹೆಂಡ, ಸೀರೆ, ಟಿವಿ ಆಮಿಷವೊಡ್ಡಿ ಎಲ್ಲ ಪಕ್ಷಗಳು ಮತದಾರರನ್ನು ಸೆಳೆಯಲು ಅಪಾರ 'ಶ್ರಮ' ವಹಿಸಿದ್ದು ಈ ಬಾರಿಯ ಚುನಾವಣೆಯ ವಿಶೇಷವಾಗಿತ್ತು. ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ 55 ಸಾವಿರ ರಕ್ಷಣಾ ಸಿಬ್ಬಂದಿಯ ಭದ್ರಕೋಟೆಯಲ್ಲಿ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.

ಕಟ್ಟುನಿಟ್ಟಿನ ನೀತಿ ಸಂಹಿತೆಯಿಂದಾಗಿ ಅಬ್ಬರ ಕಳೆದುಕೊಂಡ ಪ್ರಚಾರ, ಆಯೋಗ ಕೈಗೊಂಡ ಕ್ರಮಗಳು, ಕ್ಷೇತ್ರ ಮರುವಿಂಗಡನೆಯಿಂದ ಗೊಂದಲಕ್ಕೊಳಗಾದ ಮತದಾರ, ಸಾವಿರಾರು ಹೆಸರುಗಳು ಪಟ್ಟಿಯಿಂದ ಕಾಣೆಯಾದ ಹಿನ್ನೆಲೆಯಲ್ಲಿ ಅಂದಾಜು ಶೇ.40ರಷ್ಟು ಮತದಾರರು ಮತ ಚಲಾವಣೆ ಅವಕಾಶವನ್ನು ಕಳೆದುಕೊಂಡಿದ್ದಾರೆ. ಗುರುತಿನ ಚೀಟಿಯನ್ನು ನೀಡಲಾಗಿದ್ದರೂ ಮತಪಟ್ಟಿಯಲ್ಲಿ ಹೆಸರಿಲ್ಲದಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೈಕೊಟ್ಟ ಮತಯಂತ್ರಗಳು
ತಾಂತ್ರಿಕ ತೊಂದರೆಯಿಂದ ಎಲೆಕ್ಟ್ರಾನಿಕ್ ಮತಯಂತ್ರಗಳು ಕೈಕೊಟ್ಟ ಪರಿಣಾಮ ತುಮಕೂರು, ಹಾಸನ ಹಾಗೂ ಮೈಸೂರಿನಲ್ಲಿ ಕೆಲ ಸಮಯ ಮತದಾನ ಸ್ಥಗಿತವಾಗಿತ್ತು. ನಂತರ ಸಮಸ್ಯೆಯನ್ನು ಪರಿಹರಿಸಿ ಮುಕ್ತ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಹೆಬ್ಬಾಳ ಮತಕ್ಷೇತ್ರದ ಆರ್.ಟಿ.ನಗರದಲ್ಲಿ ನಕಲಿ ಮತದಾನ ಮಾಡಲು ಬಂದಿದ್ದ 20 ಮಂದಿ ಆಂಧ್ರದವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಕ್ಷೇತ್ರದ ಗಂಗಾನಗರದಲ್ಲಿ ಅಧಿಕ ನಕಲಿ ಮತದಾರರು ಕಂಡುಬಂದ ಕಾರಣ ಮತ ಚಲಾವಣೆಯನ್ನೇ ರದ್ದುಪಡಿಸಲಾಗಿದೆ. ಬೇರೆ ರಾಜ್ಯದವರಿಗೆ ನೀಡುವ ಮತದಾನದ ಅವಕಾಶ ಕನ್ನಡಿಗರಿಗೆ ಏಕೆ ನೀಡುತ್ತಿಲ್ಲ ಎಂದು ಮತವಂಚಿತ ನಾಗರಿಕರು ಸಿಟ್ಟನ್ನು ತೋಡಿಕೊಂಡಿದ್ದಾರೆ.

ಮತದಾನ ಎಲ್ಲೆಲ್ಲಿ ಎಷ್ಟೆಷ್ಟು?
ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಮತದಾನದ ಪ್ರಮಾಣ ಹೀಗಿದೆ. ಕೊಡಗು ಶೇ.58, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ .48, ಬೆಂಗಳೂರು ಗ್ರಾಮಾಂತರ ಶೇ.68, ಮೈಸೂರು ಶೇ.58, ತುಮಕೂರು ಶೇ. 47, ಚಾಮರಾಜನಗರ ಶೇ. 60, ಬೆಂಗಳೂರು ನಗರ ಶೇ. 52, ಮಂಡ್ಯ ಶೇ. 68, ರಾಮನಗರ ಶೇ. 66, ಹಾಸನ ಶೇ. 72, ಚಿಕ್ಕಬಳ್ಳಾಪುರ ಶೇ.65, ಕೋಲಾರ ಶೇ.64ರಷ್ಟು ಮತದಾನ ದಾಖಲಾಗಿದೆ.

ಬೆಂಗಳೂರು ನಗರ ಹಾಗೂ ಬಿಬಿಎಂಪಿ ವ್ಯಾಪ್ತಿ ಪ್ರದೇಶಕ್ಕಿಂತ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಮತದಾನ ನಡೆದಿದೆ. ಹೊಸ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಹಾಗೂ ರಾಮನಗರದಲ್ಲಿ ಶೇ.60ಕ್ಕಿಂತ ಅಧಿಕ ಮತದಾನ ದಾಖಲಾಗಿದೆ. ತುಮಕೂರು ವ್ಯಾಪ್ತಿಯಲ್ಲಿ ಅತಿ ಕಡಿಮೆ ಮತದಾನ ಹಾಗೂ ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ನಡೆದಿದೆ.

ಮೊದಲ ಹಂತಕ್ಕ್ಕೆ ಶೇ.59.5ರಷ್ಟು ಮತದಾನ ನಡೆದಿರುವುದನ್ನು ಕಂಡು ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯ ವೆಂಕಯ್ಯನಾಯ್ಡು ತಮ್ಮ ತಮ್ಮ ಪಕ್ಷಗಳು ಬಹುಮತ ಸಾಧಿಸುತ್ತವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X