ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ ನ್ಯಾಯಾಲಯದಲ್ಲಿ ಭೀಕರ ಬಾಂಬ್ ಸ್ಪೋಟ

By Staff
|
Google Oneindia Kannada News

ಹುಬ್ಬಳ್ಳಿ, ಮೇ 10 : ಬಂಧಿತರಾಗಿರುವ ಶಂಕಿತ ಉಗ್ರರ ವಿಚಾರಣೆ ಇನ್ನೆರಡು ದಿನಗಳಿರುವಾಗಲೇ ಇಲ್ಲಿನ ನ್ಯಾಯಾಲಯದಲ್ಲಿ ನಿಗೂಢ ರೀತಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಈ ಘಟನೆಯಿಂದ ನ್ಯಾಯಾಲಯದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ.

ಸ್ಫೋಟದ ಪ್ರಮಾಣ ಎಷ್ಟಿದೆಯೆಂದರೆ ನ್ಯಾಯಾಲಯದ ಪೀಠೋಪಕರಣಗಳು ಸಂಪೂರ್ಣ ಧ್ವಂಸವಾಗಿವೆ. ನ್ಯಾಯಾಲಯದ ಒಳಗೆ ಸಾಕ್ಷಿ ಹೇಳುವ ಸದಸ್ಯರ ಕುರ್ಚಿಯ ಕೆಳಗೆ ಇಟ್ಟಿದ್ದ ಬಾಂಬನ್ನು ರಿಮೋಟ್ ಕಂಟ್ರೋಲ್ ಸಹಾಯದಿಂದ ಸ್ಫೋಟಿಸಲಾಗಿದೆ. ಶನಿವಾರ ಮಧ್ಯಾಹ್ನ ನಡೆದಿರುವ ಈ ಸ್ಪೋಟದ ಹಿಂದೆ ಯಾರ ಕೈವಾಡವಿದೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ನಾರಾಯಣ ನಡುಮನಿ ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ವಿವಿಧ ಪ್ರದೇಶಗಳಲ್ಲಿ ಭಯೋತ್ಪಾದಕರ ಜತೆ ನಂಟು ಹೊಂದಿರುವ ಶಂಕಿತ ಉಗ್ರರ ವಿಚಾರಣೆ ಕಳೆದ ಹಲವು ದಿನಗಳಿಂದ ಇಲ್ಲಿಯ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದೆ. ವಿಚಾರಣೆಯನ್ನು ಮುದುವರೆಸಿದರೆ ಪರಿಣಾಮ ಗಂಭೀರವಾಗಿರುತ್ತದೆ ಎನ್ನುವ ಬೆದರಿಕೆ ಕೂಡಾ ಬಂದಿತ್ತು. ವಿಚಾರಣೆ ನಡೆಸಬಾರದು ಎಂದು ಅನೇಕ ಬೆದರಿಕೆಗಳು ಬಂದಿರುವ ಹಿನ್ನಲೆಯಲ್ಲಿ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ನ್ಯಾಯವಾದಿಗಳು ಬೇಡಿಕೆಯಿಟ್ಟಿದ್ದರು. ಈ ಸ್ಫೋಟ ಉಗ್ರರದೇ ಕೈವಾಡವೆಂದು ವಕೀಲರು ಖಚಿತ ನುಡಿಯಲ್ಲಿ ಹೇಳುತ್ತಿದ್ದಾರೆ.

ಈ ಕುರಿತು ತೀವ್ರ ತನಿಖೆಯನ್ನು ಆರಂಭಿಸಲಾಗಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ಘಟನೆಯನ್ನು ತರಲಾಗಿದೆ. ಬೆಂಗಳೂರಿನ ವಿಧಿ ವಿಜ್ಞಾನ ಇಲಾಖೆಯಿಂದ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ ನಂತರ ಸತ್ಯ ಹೊರಬೀಳಲಿದೆ ಎಂದು ಅವರು ನಾರಾಯಣ ನಡುಮನಿ ಹೇಳಿದ್ದಾರೆ.

ಪ್ರತಿಭಟನೆ : ಈ ಸ್ಪೋಟ ಕುರಿತು ಬಾರೀ ಆಕ್ರೋಷ ವ್ಯಕ್ತಪಡಿಸಿರುವ ಹುಬ್ಬಳ್ಳಿ ವಕೀಲರು ಪ್ರತಿಭಟನೆಗಿಳಿದಿದ್ದಾರೆ. ಜನರ ನೂಕುನುಗ್ಗಲು ಹೆಚ್ಚಾಗಿದ್ದು, ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ವಕೀಲರ ನಡುವೆ ಮಾತಿನ ಚಕಮಕಿ ನಡೆಯಿತು. ಅನೇಕ ದಿನಗಳಿಂದ ವಕೀಲರಿಗೆ ಅಪಾಯವಿದೆ ಎನ್ನುವ ಮುನ್ಸೂಚನೆ ಸಿಕ್ಕಿತ್ತು, ಆದರೂ ಕೂಡಾ ಜಿಲ್ಲಾ ವರಿಷ್ಠರು ನ್ಯಾಯಾವಾದಿಗಳಿಗೆ ಅಗತ್ಯ ರಕ್ಷಣೆ ನೀಡಿಲ್ಲ ಎಂದು ವಕೀಲರ ಸಂಘಟನೆ ಆರೋಪಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X