ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ ಎಂ. ವಿಶ್ವೇಶ್ವರಯ್ಯ ಸಮಾಧಿ ಸ್ಥಿತಿ ದೇವರೇ ಗತಿ

By Staff
|
Google Oneindia Kannada News

ಚಿತ್ರಕೃಪೆ : ಪ್ರಕಾಶ್ ಸುಬ್ಬರಾವ್ (ವಿಕಿಪೀಡಿಯಾ)
ಚಿಕ್ಕಮಗಳೂರು, ಮೇ 6 : ಇಡೀ ರಾಷ್ಟ್ರವೇ ಹೆಮ್ಮೆಪಡುವಂಥ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿ ಮಂಡ್ಯ, ಮೈಸೂರಿನ ಜಿಲ್ಲೆಯ ತುಂಬ ಹಸಿರು ಪೈರು ನಳನಳಿಸುವಂತೆ ಮಾಡಿದ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಸಮಾಧಿಗೆ ಈ ಸ್ಥಿತಿ ಬರಬೇಕಾಗಿತ್ತೆ?

ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ಬುಡದಲ್ಲಿರುವ ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ಅವರ ಸಮಾಧಿಯ ನವೀಕರಣ ಕಾರ್ಯ ಸಾಗಿದ್ದರೂ ಸರ್ಕಾರ ಬಿಡುಗಡೆ ಮಾಡಿರುವ ಹಣ ಯಾತಕ್ಕೂ ಸಾಲದಂತಾಗಿ ಕುಂಭಕರ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.

ಇಡೀ ಜಗತ್ತೇ ನಿಬ್ಬೆರಗಾಗುವಂತೆ ಕನ್ನಂಬಾಡಿಯ ಮುಂದೆ ಬೃಂದಾವನ ಗಾರ್ಡನ್ ಅನ್ನು ನಿರ್ಮಿಸಲಾಗಿದ್ದರೂ ವಿಶ್ವೇಶ್ವರಯ್ಯ ಅವರ ಸಮಾಧಿಯ ಮುಂದೆ ಒಂದು ಸಣ್ಣ ಉದ್ಯಾನವನ ನಿರ್ಮಿಸುವ ಕಾರ್ಯ ಹಣ, ಸಿಬ್ಬಂದಿ ಮತ್ತು ಸರ್ಕಾರದ ಬದ್ಧತೆಯ ಕೊರತೆಯಿಂದಾಗಿ ಕುಂಟುತ್ತ ಸಾಗಿದೆ. ಉದ್ಯಾನವನದ ನಿರ್ಮಾಣಕ್ಕೆ ಕೇವಲ ಮೂರು ಲಕ್ಷ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಒಂದೂವರೆ ಲಕ್ಷ ಹಣ ಬೇಲಿಯೇ ನುಂಗಿ ಹಾಕಿದೆ. ಇನ್ನು ಉದ್ಯಾನವನಕ್ಕೆಲ್ಲಿ ವ್ಯಯಿಸುವುದು ಎಂದು ನಿರ್ಮಾಣದ ಉಸ್ತುವಾರಿ ವಹಿಸಿರುವ ತೋಟಗಾರಿಕಾ ಇಲಾಖೆ ಅಪಸ್ವರವೆತ್ತಿದೆ.

ಈ ಕುರಿತಾಗಿ ವಿವಿಧ ಸಂಘಟನೆಗಳ, ಬ್ಯಾಂಕ್ ಅಧಿಕಾರಿಗಳ, ಬೇರೆಬೇರೆ ಇಲಾಖೆಗಳ ಮುಖ್ಯಸ್ಥರ ಸಭೆಯನ್ನು ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಕರೆಯಲಾಗಿತ್ತು. ಉದ್ಯಾನವನದ ನಿರ್ಮಾಣ ಮತ್ತು ನಿರ್ವಹಣೆಯ ಹೊಣೆಯನ್ನು ತೋಟಗಾರಿಕೆ ಇಲಾಖೆಯ ಸುಪರ್ದಿಗೆ ವಹಿಸಲಾಗಿತ್ತು. ಜೀರ್ಣೋದ್ಧಾರ ಕ್ರಿಯೆಯನ್ನು ತೋಟಗಾರಿಕೆ ಇಲಾಖೆ ಕೈಗೊಂಡಿದೆಯಾದರೂ ಕೆಲಸಗಾರ ಕೊರತೆಯೆಂಬ ನೆಪವೊಡ್ಡಿ ಕೈಚೆಲ್ಲಿ ಕುಳಿತುಬಿಟ್ಟಿದೆ. ಕೆಲಸ ಬೇಗನೆ ಮುಗಿಯಬೇಕೆಂದರೆ ಇನ್ನೂ ಹೆಚ್ಚಿನ ಕೆಲಸಗಾರರ ಅಗತ್ಯವಿದೆಯೆಂಬುದು ಇಲಾಖೆಯ ನಿರ್ದೇಶಕಿ ಡಾ.ಗಾಯತ್ರಿ ಅವರ ಅಭಿಪ್ರಾಯ.

ರಾಷ್ಟ್ರದ ಹೆಮ್ಮೆಯ ಪುತ್ರನ ಸಮಾಧಿಗೊದಗಿದ ದಯನೀಯ ಸ್ಥಿತಿ ಕಂಡು ಮುದ್ದೇನಹಳ್ಳಿಯ ನಿವಾಸಿಗಳೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಹಾಳುಮೂಳೆಂದು ಕೋಟಿಗಟ್ಟಲೆ ವ್ಯಯಿಸುವ ರಾಜಕಾರಣಿಗಳು ಮತ್ತು ಸರ್ಕಾರಕ್ಕೆ ದಕ್ಷಿಣ ಕರ್ನಾಟಕದ ಜನತೆ ಕಾವೇರಿ ನೀರು ಕುಡಿಯುವಂತೆ ಮಾಡಿರುವ ವ್ಯಕ್ತಿಯ ಕಡೆ ಗಮನಹರಿಸುತ್ತಿಲ್ಲವೆಂದು ದಿವ್ಯ ನಿರ್ಲಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ಸಮಾಧಿಯದು ಈ ಸ್ಥಿತಿಯಾದರೆ, ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಂದು 'ಹೈಟೆಕ್' ದಯನೀಯ ಸ್ಥಿತಿ. ಪ್ರತಿಯೊಬ್ಬರು ತಲಾ ಮೂವತ್ತು ರುಪಾಯಿ ತೆತ್ತು ವಸ್ತುಸಂಗ್ರಹಾಲಯದ ಒಳಹೊಕ್ಕರೆ ಕಾಸಿಗೆ ಮೋಸ ಹೋಗಿರುವುದು ಗಮನಕ್ಕೆ ಬರುವುದು ಗ್ಯಾರಂಟಿ. ಪ್ರದರ್ಶನಕ್ಕಿಟ್ಟಿರುವ ಯಾವ ಯಂತ್ರ, ವಸ್ತುಗಳಾಗಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಸಲಿಗೆ ನಿರ್ವಹಣೆಗೆ, ಅಮೂಲ್ಯ ವಸ್ತುಗಳು ಹಾಳಾಗದಂತೆ ಕಾಯಲು ಅಲ್ಲಿ ಸಿಬ್ಬಂದಿಗಳೇ ಇಲ್ಲ. ವೀಕ್ಷಿಸಲು ಬಂದ ಪ್ರತಿಯೊಬ್ಬರೂ 'ವಿಜ್ಞಾನಿ'ಗಳೇ. ವಿಜ್ಞಾನಕ್ಕೆ ಸಂಬಂಧಿಸಿದ ನೂರಾರು ಅಮೂಲ್ಯ ಸಲಕರಣೆಗಳು ಹಾಳುಬಿದ್ದುಹೋಗಿವೆ. ಅವಿನ್ನೆಂದು ಸರಿಹೋಗಲಿಕ್ಕೂ ಇಲ್ಲ. ಶಾಲಾಮಕ್ಕಳನ್ನು ದಂಡುದಂಡಾಗಿ ಕರೆದುಕೊಂಡು ಬರುವ ಶಿಕ್ಷಕರಿಗೆ, ಮಕ್ಕಳಿಗೆ ಈ ಸ್ಥಳ ಒಂದು ಪಿಕ್‌ನಿಕ್ ಸ್ಪಾಟ್‌ನಂತಾಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X