ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಡು ಹಿಂಡಾಗಿ ಘಟಾನುಘಟಿಗಳ ದಂಡು!

By Staff
|
Google Oneindia Kannada News

ಬೆಂಗಳೂರು,ಮೇ 6: ರಾಜ್ಯದಲ್ಲಿ ಎಲ್ಲೆಲ್ಲೂ ಚುನಾವಣೆ ಅಬ್ಬರ. ರಾಜಕಾರಣಿಗಳ ಭರಾಟೆಯಿಂದ ಚುನಾವಣೆ ಮತ್ತಷ್ಟು ರಂಗೇರಿದೆ. ಮೊದಲ ಹಂತದ ಮತದಾನ ಇನ್ನೇನು ನಾಲ್ಕು ದಿನಗಳು ಬಾಕಿಯಿರುವಾಗ ಅಭ್ಯರ್ಥಿಗಳು ಮತದಾರರಿಗೆ ಆಸೆ ಆಮಿಷಗಳನ್ನು ಒಡ್ಡುವ ಮೂಲಕ ಭರ್ಜರಿ ಪ್ರಚಾರದಲ್ಲಿ ಮಗ್ನವಾಗಿವೆ. ಈ ಚುನಾವಣೆ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎನ್ನಲಾಗುತ್ತಿದೆ.ರಾಷ್ಟ್ರ ರಾಜಕಾರಣದ ಘಟಾನುಘಟಿ ರಾಜಕಾರಣಿಗಳು ರಾಜ್ಯದಲ್ಲಿ ಠಿಕಾಣಿ ಹೂಡಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (ಮೇ 7) ಪ್ರಧಾನ ಮಂತ್ರಿ ಮನಮೋಹನ್ ಸಿಂಗ್(ಮೇ8) ರಾಜ್ಯದಲ್ಲಿ ಚುನಾವಣೆ ಪ್ರವಾಸ ಕೈಗೊಳ್ಳಲಿದ್ದಾರೆ. ಅಂಬಿಕಾ ಸೋನಿ, ಆಂಧ್ರಪ್ರದೇಶ ಮುಖ್ಯಮಂತ್ರಿ ರಾಜಶೇಖರರೆಡ್ಡಿ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮಣಿಶಂಕರ್ ಅಯ್ಯರ್, ಎಡಪಕ್ಷಗಳ ನಾಯಕಿ ಬೃಂದಾ ಕಾರಟ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ವೆಂಕಯ್ಯ ನಾಯ್ಡು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ರಾಜ್ಯ ಉಸ್ತುವಾರಿ ಹೊತ್ತಿರುವ ಅರುಣ್ ಜೇಟ್ಲಿ, ಬಿಎಸ್ ಪಿ ನಾಯಕಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ಸಮಾಜವಾದಿ ಪಕ್ಷದ ಮುಖಂಡರಾದ ಮುಲಾಯಂ ಸಿಂಗ್ ಯಾದವ್, ಅಮರ್ ಸಿಂಗ್, ಹೇಮಾಮಾಲಿನಿ, ಜಯಪ್ರದಾ ಹೀಗೆ ವಿವಿಧ ಪಕ್ಷಗಳ ಪ್ರಭಾವಿ ಮುಖಂಡರು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮತದಾರರ ಮನವೊಲಿಸತೊಡಗಿದ್ದಾರೆ.

ಬಿಜೆಪಿ ತಾರಾ ಮೌಲ್ಯ ತರುತ್ತಾರೆ ಎಂದೇ ಬಿಂಬಿಸಲಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಲವು ಸಲ ರಾಜ್ಯ ಪ್ರವಾಸ ಕೈಗೊಂಡಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಜನರು ಅವರನ್ನು ಬೆಂಬಲಿಸಿಲ್ಲ ಎನ್ನುವುದು ಬಿಜೆಪಿಗೆ ಇರುಸುಮುರಸು ತಂದಿದೆ. ಆಡ್ವಾಣಿ ಅವರಿಗೂ ಕೂಡಾ ಅಷ್ಟಾಗಿ ಜನಬೆಂಬಲ ವ್ಯಕ್ತವಾಗಲಿಲ್ಲ. ರಾಜನಾಥ್ ಸಿಂಗ್ ಪರಿಣಾಮಕಾರಿ ಎನಿಸಲಿಲ್ಲ. ಇದ್ದುದರಲ್ಲಿ ಸುಷ್ಮಾ ಸ್ವರಾಜ್ ಮತದಾರರನ್ನು ಜಾಗೃತಗೊಳಿಸುವಲ್ಲಿ ಸಫಲರಾಗಿದ್ದಾರೆ ಎನ್ನಬಹುದು.

ಇನ್ನು ಕಾಂಗ್ರೆಸ್ ವಿಚಾರಕ್ಕೆ ಬರುವುದಾದರೆ ಅದು ಆಂತರಿಕ ಬೇಗುದಿಯಿಂದ ಬಳಲತೊಡಗಿದೆ.ಅಲ್ಲಿ ಯಾವ ಮುಖಂಡರಲ್ಲಿ ಸಮಾಧಾನ ಎನ್ನುವುದೇ ಇಲ್ಲವಾಗಿದೆ. ಜತೆಗೆ ಬಂಡಾಯಗಾರರ ಹೊಡೆತಕ್ಕೆ ತತ್ತರಿಸಿ ಹೋಗಿದೆ. ಉಳಿದಂತೆ ದೇವೇಗೌಡರ ಜೆಡಿಎಸ್ ನಾಯಕರಿಲ್ಲದೇ ಸೊರಗಿದೆ. ಪಕ್ಷದಲ್ಲಿದ್ದ ಎಲ್ಲ ನಾಯಕರು ಮುನಿಸಿಕೊಂಡು ಬೇರೆಡೆಗೆ ಗುಳೇ ಹೋಗಿರುವುದು ಗೌಡರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೂ ಕೂಡಾ ದೇವೇಗೌಡರ ಪಕ್ಷವನ್ನು ಅಲ್ಲಗಳೆಯುವಂತಿಲ್ಲ. ಬಿಎಸ್‌ಪಿ ಕೂಡಾ ರಾಜ್ಯ ರಾಜಕಾರಣದಲ್ಲಿ ಅಂಬಾರಿ ಏರಿದ್ದು, ಎಲ್ಲ ಕ್ಷೇತ್ರದಲ್ಲಿಯೂ ತನ್ನ ಅಭ್ಯರ್ಥಿಗಳನ್ನ್ನು ಸ್ಪರ್ಧೆಗಿಳಿಸಿದೆ. ಗೆಲುವಿಗಾಗಿ ಎಲ್ಲ ಪಕ್ಷಗಳು ಭಾರಿ ಪೈಪೋಟಿ ನಡೆಸಿವೆ. ಮತದಾರ ಯಾರಿಗೆ ಒಲಿಯುತ್ತಾನೆ ಎಂಬುದನ್ನು ಕಾಲ ನಿರ್ಧರಿಸಲಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X