ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕಾರಿಪುರ: ಯಡ್ಡಿ ವಿರುದ್ಧ ಪ್ರತಿರೋಧದ ಅಲೆ

By Staff
|
Google Oneindia Kannada News

*ಮೃತ್ಯುಂಜಯ ಕಲ್ಮಠ್

ಚಾಮುಂಡೇಶ್ವರಿ ಉಪಚುನಾವಣೆ ನೆನಪಿರಬೇಕಲ್ಲ. ಅಂದು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡುತ್ತಿದ್ದರು. ದೇವೇಗೌಡರ ಸರ್ವಾಧಿಕಾರಿ ಧೋರಣೆಗೆ ಬೇಸತ್ತ ಸಿದ್ಧರಾಮಯ್ಯ, ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರಿಂದ ಉಪಚುನಾವಣೆ ಎದುರಿಸಬೇಕಾಯ್ತು. ಅದು ಸಿದ್ಧರಾಮಯ್ಯ ಅವರ ಅಳಿವು ಉಳಿವಿನ ಪ್ರಶ್ನೆ. ಗೆಲ್ಲಲೇಬೇಕಾದ ಅನಿವಾರ್ಯತೆ. ತನ್ನ ವಿರುದ್ಧ ಬಂಡೆದ್ದಿರುವ ಸಿದ್ಧರಾಮಯ್ಯನನ್ನು ಶತಾಯಗತಾಯ ಮಣ್ಣುಮುಕ್ಕಿಸಬೇಕು ಎಂದು ಮಾಜಿ ಪ್ರಧಾನಿಗಳು ಪುತ್ರನಿಗೆ ಆದೇಶ ಹೊರಡಿಸಿದ್ದರು. ಇಡೀ ಸರ್ಕಾರ ಕೆಲಸವನ್ನೇಲ್ಲ ಮರೆತು ಚಾಮುಂಡೇಶ್ವರಿಯಲ್ಲಿ ಠಿಕಾಣಿ ಹೊಡಿತ್ತು. ಕೋಟ್ಯಂತರ ರುಪಾಯಿಗಳನ್ನು ನೀರಿನಂತೆ ಖರ್ಚು ಮಾಡಿತು.ಜನಾದೇಶ ಮಾತ್ರ ಸಿದ್ಧರಾಮನ ಹುಂಡಿಗೆ ಒಲಿದಿತ್ತು.ಇದು ಹಳೆಯ ಮಾತು.

ಇಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬತವಾಗಿರುವ ಮಾಜಿ ಮುಖ್ಯಮಂತ್ರಿ ಬೂಕನಕರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರನ್ನು ಶಿಕಾರಿಪುರದಲ್ಲಿ ಭೇಟೆಯಾಡಲು ಜೆಡಿಎಸ್-ಕಾಂಗ್ರೆಸ್ ಪಕ್ಷದ ಮುಖಂಡರು ವೇದಿಕೆ ಸಿದ್ಧಗೊಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಎಂಬ ಸೋಲಿಲ್ಲದ ಸರದಾರನಿಗೆ ಬೆಂಬಲ ಸೂಚಿಸಿವೆ. ಒಂದು ಹೆಜ್ಜೆ ಮುಂದೆ ಹೋಗಿರುವ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಶಿಕಾರಿಪುರದಲ್ಲಿ ನಿಲ್ಲಿಸುವುದಿಲ್ಲ ಎನ್ನುವ ಮೂಲಕ ಬಹಿರಂಗ ಬೆಂಬಲಕ್ಕೆ ನಿಂತಿದ್ದಾರೆ. ತಂತ್ರಗಾರಿಕೆಯಲ್ಲಿ ನಿಪುಣತೆಯನ್ನು ಪಡೆದಿರುವ ಗೌಡರು, ಯಾವ ಕೆಲಸಕ್ಕೆ ಕೈಹಾಕಿದರೂ ಅತೀ ಜಾಗರೂಕತೆಯಿಂದ ನಡೆದುಕೊಳ್ಳುತ್ತಾರೆ. ಇದರಲ್ಲಿ ಕೂಡಾ ಅದೇ ಆಗಿರುವುದು, ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯ ಹಳೆ ಹುಲಿ, ಭಾರೀ ವರ್ಚಸ್ಸಿನ ಮನುಷ್ಯ, ತನ್ನದೇ ಆದ ಮತಗಳು ಇವೆ. ಜಾತಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಸಂಸತ್ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಅವರಿಗೆ ಅತೀ ಹೆಚ್ಚು ಮತಗಳು ಬಂದಿವೆ. ಯಡಿಯೂರಪ್ಪನನ್ನು ಮಣಿಸಲು ಇದೊಂದು ಬ್ರಹ್ಮಾಸ್ತ್ರ ಸಾಕು ಎಂದು ಅರಿತಿರುವ ಗೌಡರು ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ್ದಾರೆ.ಈ ಮೂಲಕ ಯಡಿಯೂರಪ್ಪನನ್ನು ಸ್ವಂತ ಕ್ಷೇತ್ರದಲ್ಲಿ ಹೆಡಮುರುಗಿ ಕಟ್ಟುಬೇಕು ಎಂದು ಪ್ರತಿಜ್ಞೆ ಮಾಡಿದ್ದಾರೆ. ಭಾರತೀಯ ಜನತಾಪಕ್ಷದ ನಾಗಲೋಟಕ್ಕೆ ಕಡಿವಾಣ ಹಾಕಲು ಟೊಂಕ ಕಟ್ಟಿ ನಿಂತಿದ್ದಾರೆ.

ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವಲ್ಲಿ ಮೀನಮೇಷ ಏಣಿಸಿದ ಗೌಡರ ಕ್ರಮವನ್ನು ಬಿಜೆಪಿ ಎಲ್ಲ ನಾಯಕರು ಉಗ್ರವಾಗಿ ಖಂಡಿಸಿದ್ದರು. ಮುಖ್ಯವಾಗಿ ಒಂದೇ ವಾರದಲ್ಲಿ ಮುಖ್ಯಮಂತ್ರಿ ಪಟ್ಟ ಕಳೆದ ಹತಾಶರಾಗಿದ್ದ ಯಡಿಯೂರಪ್ಪ, ದೇವೇಗೌಡರನ್ನು ಮನಬಂದಂತೆ ನಿಂದಿಸಿದ್ದರು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ನೋವಿನಿಂದ ಗೌಡರ ಜನ್ಮ ಜಾಲಾಡಿದ್ದರು. ಅದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಗೌಡರು, ಪರೋಕ್ಷವಾಗಿ ಉತ್ತರಿಸುತ್ತ ಬಂದಿದ್ದರು. ಈ ದೇವೇಗೌಡನನ್ನು ಹಗುರವಾಗಿ ಪರಿಗಣಿಸಬೇಡಿ. ದೇಹಕ್ಕೆ ವಯಸ್ಸಾಗಿದೆ, ಆದರೆ ನನ್ನ ಮನಸ್ಸಿಗಲ್ಲ. ವಿರೋಧಿಗಳ ಜತೆಗೆ ಹೋರಾಡುವಷ್ಟು ಶಕ್ತಿ ನನ್ನಲ್ಲಿ ಇದೆ. ಸೂಕ್ತ ಸಮಯದಲ್ಲಿ ಉತ್ತರ ಕೊಡುವೆ ಎಂದು ಹೇಳುತ್ತಲೇ ಬಂದದ್ದರು. ಇದೀಗ ಅದನ್ನು ಚಾಚು ತಪ್ಪದೇ ಉಪಯೋಗಿಸತೊಡಗಿದ್ದು, ಬಿಜೆಪಿ ಪಾಳೆಯದಲ್ಲಿ ನಡುಕ ಹುಟ್ಟಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಮುಟ್ಟಿನೋಡಿಕೊಳ್ಳುವಂತ ಶಾಕ್ ಕೊಟ್ಟಿರುವುದಂತೂ ಅಲ್ಲಗಳೆಯಲು ಸಾಧ್ಯವಿಲ್ಲ.

ಜೆಡಿಎಸ್ ಜತೆಗೆ ಕಾಂಗ್ರೆಸ್ ಕೂಡಾ ಶಾಮೀಲಾಗಿದೆ ಎನ್ನುವ ಮಾತು ಕೇಳಿ ಬರತೊಡಗಿದೆ. ಕಾಂಗ್ರೆಸ್ ಕೂಡಾ ಈ ವಿಷಯ ಕುರಿತು ಮೃದು ಧೋರಣೆ ತಾಳಿದೆ. ಶಿಕಾರಿಪುರದಲ್ಲಿ ಡಮ್ಮಿ ಅಭ್ಯರ್ಥಿಯನ್ನು ನಿಲ್ಲಿಸಿ ಮೋಜು ನೋಡಲು ಕೈ ಬಳಗ ಕೂಡಾ ಸಜ್ಜಾಗಿದೆ. ಆ ದೇವರೆ ಬಂದು ನಿಂತರೂ ಕೂಡಾ ಗೆಲುವು ನನ್ನದೇ ಎಂದು ಅತೀ ಅತ್ಮವಿಶ್ವಾಸದಿಂದ ಹೇಳುತ್ತಾರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಶಿಕಾರಿಪುರಕ್ಕೆ ನಾನು ಮಾಡಿದ ಕೆಲಸಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಶಿಕಾರಿಪುರದ ಜನ ನನ್ನನ್ನು ಕೈಬಿಡುವುದಿಲ್ಲ. ಹಾಗೆಯೇ ಶಿಕಾರಿಪುರದ ಜನ ಮುಂದಿನ ಮುಖ್ಯಮಂತ್ರಿಯನ್ನು ಆರಿಸಿ ಕಳುಹಿಸಲಿದ್ದಾರೆ ಎಂದು ಘಂಟಾಘೋಷವಾಗಿ ಹೇಳುತ್ತಾರೆ. ಆದರೆ ಬಂಗಾರಪ್ಪ ಅವರ ಇತಿಹಾಸ ಕೆದಕಿದರೆ ಶಿಕಾರಿಪುರದ ಚುನಾವಣೆ ಅಂದುಕೊಂಡಂತೆ ಸರಳವಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಏನೇ ಆದರೂ ಶಿಕಾರಿಪುರ ಕ್ಷೇತ್ರ ಭಾರೀ ನಿರೀಕ್ಷೆ ಹುಟ್ಟಿಸಿದ್ದು ಕುತೂಹಲಕ್ಕೆ ಕಾರಣವಾಗಲಿದೆ. ಉಪಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ತನ್ನತ್ತ ಎಲ್ಲರ ಗಮನವನ್ನು ಸೆಳೆದುಕೊಂಡಿತ್ತು. ಈಗ ಅದು ಶಿಕಾರಿಪುರಕ್ಕೆ ವರ್ಗಾವಣೆಗೊಂಡಿದೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಜಿದ್ದಾಜಿದ್ದಿನ ಕಾಳಗದಲ್ಲಿ ವಿಜಯಲಕ್ಷ್ಮಿ ಯಾರ ಮುಡಿಗೆ ಬೀಳುವಳು ಎನ್ನುವುದು ಫಲಿತಾಂಶ ಬರುವವರೆಗೆ ಕಾಯಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X