ಗಳಗಳನೆ ಅತ್ತ ಖರ್ಗೆ, ಗಹಗಹಿಸುತ್ತಿರುವ ಧರ್ಮಸಿಂಗ್

Subscribe to Oneindia Kannada

Mallikarjun Khargeಕಲಬುರ್ಗಿ, ಏ.30: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಹಾಗೂ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸತತ ಒಂಬತ್ತನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಲು ಕ್ರಮವಾಗಿ ಜೇವರ್ಗಿ ಮತ್ತು ಚಿತ್ತಾಪುರ (ಮೀಸಲು) ಕ್ಷೇತ್ರಗಳಿಂದ ನಾಮಪತ್ರವನ್ನು ಬುಧವಾರ ಸಲ್ಲಿಸಿದರು.

ಸತತ ಎಂಟು ಬಾರಿ ಶಾಸಕರಾಗಿ ದಾಖಲೆ ನಿರ್ಮಿಸಿರುವ ಈ ಇಬ್ಬರು ನಾಯಕರು, ಒಂಬತ್ತನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ತಮ್ಮ ಅದೃಷ್ಟ ಪರೀಕ್ಷೆಗೆ ಆಖಾಡಕ್ಕಿಳಿದ್ದಾರೆ. ಆದರೆ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಕ್ಷೇತ್ರ ಕಳೆದುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಈ ಬಾರಿ ಚಿತ್ತಾಪುರ ಮೀಸಲು ಕ್ಷೇತ್ರದಿಂದ ಸ್ಪರ್ಧೆಗಿಳಿಯಲಿದ್ದಾರೆ. ಮೇ 16ರಂದು ನಡೆಯಲಿರುವ ಎರಡನೇ ಹಂತದಲ್ಲಿ ಮತದಾನದಲ್ಲಿ ಕಾಂಗ್ರೆಸ್ ದಿಗ್ಗಜರಾದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮತ್ತು ಮುಖ್ಯಮಂತ್ರಿ ಗಾದಿಯೇರುವ ಕನಸು ಕಾಣುತ್ತಿರುವ ಖರ್ಗೆ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ.

1972ರಲ್ಲಿ ಪ್ರಥಮ ಬಾರಿಗೆ ಶಾಸಕರಾದ, ಈಗ 72ರ ಹರೆಯದಲ್ಲಿರುವ ನಾರಾಯಣಸಿಂಗ್ ಧರ್ಮಸಿಂಗ್ ಮೂರು ಬಾರಿ ಸಂಸದರಾಗಿದ್ದ ಮಹದೇವಪ್ಪ ಬಾಣಾಪುರ ಎಂಬುವವರನ್ನು ಸೋಲಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದರು. ಅಲ್ಲಿಂದ ಇಲ್ಲಿಯವರೆಗೂ ವಿಜಯದ ಬೆನ್ನೇರಿರುವ ಅವರು ಹಿಂದಿರುಗಿ ನೋಡಿಲ್ಲ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತೀ ಕಡಿಮೆ ಅಂತರದಲ್ಲಿ ಜಯ ಗಳಿಸಿದ್ದರು.

ಗುಲ್ಬರ್ಗಾ ನಗರಸಭೆ ಸದಸ್ಯರಾಗಿ ರಾಜಕೀಯ ಜೀವನವನ್ನು ಆರಂಭಿಸಿದ ಧರ್ಮಸಿಂಗ್, ಸತತ ಒಂಬತ್ತು ಬಾರಿಗೆ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಳಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿಸತತ ಒಂಬತ್ತು ಬಾರಿ ವಿಧಾನಸಭೆಯನ್ನು ಪ್ರವೇಶಿಸಿದ ದಾಖಲೆಯಿತ್ತು. ಆದರೆ ಕರುಣಾನಿಧಿ ಅವರು, ಬೇರೆಬೇರೆ ಕ್ಷೇತ್ರಗಳಲ್ಲಿ ಗೆದ್ದು ವಿಧಾನಸಭೆಯನ್ನು ಪ್ರವೇಶಿಸಿದ್ದರು. ಆದರೆ ಈ ಬಾರಿ ಧರ್ಮಸಿಂಗ್ ವಿಧಾನಸಭೆ ಪ್ರವೇಶಿಸಿದರೆ ಭಾರತ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಲಿದ್ದಾರೆ.

ಕಣ್ಣೀರಧಾರೆ : ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಗುರುಮಿಟಕಲ್ ಕ್ಷೇತ್ರವನ್ನು ಕಳೆದುಕೊಂಡಿರುವ ಮಲ್ಲಿಕಾರ್ಜುನ್ ಖರ್ಗೆ ಚಿತ್ತಾಪುರ ಮೀಸಲು ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಾಗ ಗಳಗಳನೆ ಅತ್ತರು. ಕಳೆದ 40 ವರ್ಷದಿಂದ ಶಾಸಕನಾಗಿ ಆರಿಸಿ ಕಳುಹಿಸಿದ ಕ್ಷೇತ್ರ ಮಾಯವಾಗಿರುವುದು ಖರ್ಗೆ ಅವರನ್ನು ದುಃಖಕ್ಕೆ ಈಡುಮಾಡಿತು. ಚಿಕ್ಕ ಮಗುವಿನಂತೆ ಕಣ್ಣೀರು ಹಾಕಿದ ಖರ್ಗೆ, ರಾಜಕೀಯ ಜೀವನ ಒದಗಿಸಿದ್ದ ಕ್ಷೇತ್ರ ಇಲ್ಲವಾಗಿರುವುದು ತಮಗೆ ಬಾರಿ ಬೇಸರ ತಂದಿದೆ ಎಂದು ನಾಮಪತ್ರ ಸಲ್ಲಿಸಿದ ನಂತರ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...