• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಇದು ಸಕಾಲ

By Staff
|

Sudheendra budyaಎಲ್ಲೆಲ್ಲೂ ಚುನಾವಣೆಯದೇ ಸುದ್ದಿ. ಟಿಕೇಟ್ ಆಕಾಂಕ್ಷಿಗಳ ದೊಡ್ಡ ಪಡೆಯೇ ನಾನಾ ಪಕ್ಷಗಳ ಕಛೇರಿಗಳ ಮುಂದೆ ಜಮಾಯಿಸಿದೆ. ಟಿಕೇಟ್ ಸಿಕ್ಕವರು ಸೀರೆ, ಪಂಚೆ, ಟಿ.ವಿ ಹಂಚುತ್ತಾ ಪ್ರಚಾರದಲ್ಲಿ ತೊಡಗಿದ್ದಾರೆ. ಟಿಕೇಟ್ ವಂಚಿತರು ಪಕ್ಷ ತೊರೆದು ಇತರ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ನಾಲ್ಕು ಜನ ಪಡ್ಡೆ ಹುಡುಗರ ನಾಯಕ(ಪ್ಲೆಕ್ಸ್ ನಾಯಕ)ನೆನಿಸಿಕೊಂಡವನಿಗೂ ಟಿಕೇಟ್ ಬೇಕು. ಯಾರಿಗೂ ಕೂಡ ಪಕ್ಷವಾಗಲೀ, ಪಕ್ಷಗಳ ಸಿದ್ದಾಂತವಾಗಲಿ, ಪಕ್ಷದ ನೇತಾರರಾಗಲೀ ಮುಖ್ಯವಲ್ಲ. ಮುಖ್ಯವಾಗುವುದು ಟಿಕೇಟ್ ಮಾತ್ರ.

*ಮದ್ದೂರು ಸುಧೀಂದ್ರ ಬುದ್ಯ

ಒಂದು ಕಾಲದಲ್ಲಿ ಕಾಂಗ್ರೆಸ್‌ನಿಂದ ಒಂದು ಕುರಿಯನ್ನು ನಿಲ್ಲಿಸಿದರೂ ಅದು ಗೆದ್ದು ಬರುತ್ತಿತ್ತು. ಅನೇಕ ಮತದಾರರಿಗೆ ಯಾವ ಅಭ್ಯರ್ಥಿ ತಮ್ಮ ಕ್ಷೇತ್ರದಲ್ಲಿ ನಿಂತಿದ್ದಾನೆ ಎನ್ನುವುದೇ ಗೊತ್ತಿರುತ್ತಿರಲಿಲ್ಲ. ಅವರದೇನಿದ್ದರೂ ಮತಗಟ್ಟೆಗೆ ಹೋಗಿ ಕೈ ಚಿಹ್ನೆಯ ಮುಂದೆ ಓಟು ಒತ್ತಿ ಬರಬೇಕು ಅಷ್ಟೇ. ಯಾರಾದರೂ ಏಕೆ ಕೈಗೆ ಓಟು ಹಾಕಿದಿರಿ ಅಂದರೆ ಅವರು ನೀಡುತ್ತಿದ್ದ ಉತ್ತರ ಇಂದಿರಮ್ಮನ ಪಕ್ಷ ಅಂತ. ಹೌದು ಅಲ್ಲಿ ಮುಖ್ಯವಾಗುತ್ತಿದ್ದುದು ಇಂದಿರಾ ಗಾಂಧಿಯವರಷ್ಟೇ. ಆ ಕಾಲದಲ್ಲಿ ಅಷ್ಟು ಅವಿವೇಕಿ ಮತದಾರರಿದ್ದರು. ಅದನ್ನೇ ಬಂಡವಾಳವಾಗಿಸಿಕೊಂಡ ಕಾಂಗ್ರೆಸ್ ಕರ್ನಾಟಕ ಏಕೀಕರಣವಾದ ನಂತರದ ಬಹುಪಾಲು ವರ್ಷ ತನ್ನ ಅಧಿಕಾರ ನಡೆಸಿತು. ಕರ್ನಾಟಕಕ್ಕೇ ಕಾಂಗ್ರೆಸ್ ಸರ್ಕಾರಗಳು ಏನು ಉಪಕಾರ ಮಾಡಿದರೋ ಗೊತ್ತಿಲ್ಲ. ಗೆದ್ದ ರಾಜಕಾರಣಿಗಳೆಲ್ಲಾ ಕುಬೇರರಾಗಿ ಬಿಟ್ಟರು.

ನಂತರ ಕರ್ನಾಟಕ ಕಂಡಿದ್ದು ಜನತಾದಳದವರ ಆಡಳಿತವನ್ನ. ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್‌ಗೊಂದು ಪರ್ಯಾಯ ಅಂತ ಜನತಾದಳ ಹುಟ್ಟಿಕೊಂಡಿತಾದರೂ ಅವರು ಕೊಟ್ಟ ಆಡಳಿತ ಕಾಂಗೈದೇ ವಾಸಿ ಎನ್ನುವಂತಹದು. ಮೊದಮೊದಲು ಸರಿಯಾಗೇ ಇದ್ದ ದಳದ ಸಿದ್ಧಾಂತ ಬರಬರುತ್ತಾ ಜಾತಿಯ ಆಧಾರದ ಮೇಲೆ ರೂಪುಗೊಳ್ಳುತ್ತಾ ಬಂದಿತು. ಒಳ ಒಳಗೇ ನಾಯಕರುಗಳಲ್ಲೇ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತು. ಗುಂಪುಗಾರಿಕೆ ಪ್ರಾರಂಭವಾಯಿತು. ಅರ್ಹತೆಗಿಂತ ಜಾತಿಯ ಬಲವೇ ಜಯಗಳಿಸಿತು.

ಪಕ್ಷ ಕಟ್ಟಿದವರು, ನಿಷ್ಠೆ ಉಳಿಸಿಕೊಂಡವರು ಪಕ್ಷದಿಂದ ಹೊರಬಿದ್ದರು. ಪಕ್ಷ ಹೋಳಾಯಿತು. ದಿನೇ ದಿನೇ ಪಕ್ಷ ಒಂದು ಕುಟುಂಬದ ಸ್ವತ್ತಾಯಿತು. ಇನ್ನು ಬಿಜೆಪಿ ಮಾತು ಬಿಡಿ. ಬರಿಯ ವಿರೋಧ ಪಕ್ಷದಲ್ಲಿ ಕೂತು ಕೂತು ಸಾಕಾಗಿ ಕೊನೆಗೆ ಅಧಿಕಾರ ಸಿಕ್ಕರೆ ಸಾಕಪ್ಪಾ ಎನ್ನುವಂತಹ ಸ್ಥಿತಿ. ಪಾಪ ಅದಕ್ಕಾಗಿ ಯಡ್ಡ್ಯೂರಪ್ಪನವರು ಕಂಡ ಕಂಡ ಮಠಾಧೀಶರ ಪಾದ ಪೂಜೆ ಮಾಡಿದರು, ಹೆಸರು ಬದಲಿಸಿಕೊಂಡರು.

ಬಿಡಿ ಹಳೆಯದೆಲ್ಲಾ ಕೆದಕಿ ಪ್ರಯೋಜನವೇನು? ಪ್ರಸ್ತುತ ಚುನಾವಣೆಯನ್ನೇ ತೆಗೆದುಕೊಂಡರೆ, ರಾಜ್ಯದಲ್ಲಿ ಮುಖ್ಯವೆನಿಕೊಳ್ಳುವ ಪಕ್ಷಗಳು ಕೇವಲ ಮೂರು. ನೆಹರೂ, ಇಂದಿರಾಗಾಂಧಿಯವರ ಫೋಟೋ ಹಿಡಿದುಕೊಂಡು, ಮೇಡಿನ್ ಇಟಲಿ ಯುವಕನನ್ನ ಮುಂದಿರಿಸಿಕೊಂಡು ಆತನ ಕೈಲಿ ಮತ್ತೊಮ್ಮೆ(ನೆಹರು, ಅವರ ಕಾದಲ್ಲೇ ಒಮ್ಮೆ ಭಾರತದ ಡಿಸ್ಕವರಿ ಮಾಡಿದ್ದರು!) ಇಂಡಿಯವನ್ನು ಡಿಸ್ಕವರಿ ಮಾಡಿಸುತ್ತಿರುವ ಕಾಂಗ್ರೆಸ್, ರಾಮ ಮಂತ್ರ ಜಪಿಸುತ್ತಾ, ಇದೀಗ ಗುಜರಾತ್ ಮಂತ್ರವನ್ನು ಜೊತೆಗೆ ಸೇರಿಸಿಕೊಂಡಿರುವ ಬಿಜೆಪಿ ಇನ್ನು ಕರ್ನಾಟಕವೇ ನನ್ನದು, ಆಡಳಿತವೇನಿದ್ದರು ನಮ್ಮ ಕುಟುಂಬದವರ ಕೈನಲ್ಲೇ ಇರಬೇಕೆಂಬಂತೆ ವರ್ತಿಸುತ್ತಿರುವ ದೇವೇಗೌಡರ ಜೆಡಿಎಸ್ ಕುಟುಂಬ. ಜೆಡಿಎಸ್ ಅನ್ನು ಪಕ್ಷ ಎನ್ನುವುದಕ್ಕಿಂತ ಕುಟುಂಬ ಎಂದರೆ ಹೆಚ್ಚು ವಾಸ್ತವವೆನಿಸುತ್ತದೆ. ಉಳಿದಂತೆ ಬಂಗಾರಪ್ಪನವರ ಸಮಾಜವಾದಿ ಪಕ್ಷ, ಅದೇನಿದ್ದರು ಬಂಗಾರಪ್ಪನವರ ಒಂದು ಸೀಟು ಗಿಟ್ಟಿಸಬಲ್ಲದು. ಜೊತೆಗೆ ತಮಗೆ ಗೆಲ್ಲುವ ವಿಶ್ವಾಸವಿಲ್ಲದಿದ್ದರೂ ತಮ್ಮ ಪಕ್ಷ ಎರಡಂಕಿಯಷ್ಟು ಸ್ಥಾನಗಳಿಸುತ್ತದೆನ್ನುವ ಸಿಂಧ್ಯಾ ಸಾರಥ್ಯದ ಬಿಎಸ್ಪಿ. ಇನ್ನು ಜೆಡಿಯು ಬಿಜೆಪಿ ಜೊತೆ ಗುರುತಿಸಿಕೊಂಡಿರುವುದರಿಂದ ಅದನ್ನು ಸ್ವತಂತ್ರವಾಗಿ ಪರಿಗಣಿಸಬೇಕಾಗಿಲ್ಲ ಮತ್ತು ಅದಕ್ಕೆ ಸ್ವತಂತ್ರವಾಗಿ ಗುರುತಿಸಿಕೊಳ್ಳುವ ಚೈತನ್ಯವೂ ಇಲ್ಲ.

ಕರ್ನಾಟಕ ರಾಜಕೀಯದಲ್ಲಿ ಸೈದ್ದಾಂತಿಕ ಅಧ:ಪತನವಾಗಿರುವುದನ್ನು ಬಹಳ ಹಿಂದೆ ಹೋಗಿ ನೋಡಬೇಕಿಲ್ಲ. ಕಳೆದ ಐದಾರು ವರ್ಷಗಳ ಬೆಳವಣಿಗೆಗಳನ್ನು ಗಮನಿಸಿದರೆ ಸಾಕು, ಕರ್ನಾಟಕ ರಾಜಕಾರಣದ ಪೂರ್ಣ ಚಿತ್ರ ಕಣ್ಣ ಮುಂದೆ ಬರುತ್ತದೆ. ರಾಜ್ಯದ ಮಟ್ಟಿಗೆ ಮುಖ್ಯ ಪಕ್ಷಗಳೆಂದು ಕರೆಸಿಕೊಳ್ಳುವ ಮೂರೂ ಪಕ್ಷಗಳೂ ಮೂರನ್ನೂ ಬಿಟ್ಟಂತವು. ಯಾವುದೇ ಪಕ್ಷಕ್ಕೆ ತನ್ನದೇ ಆದ ತತ್ವ ಸಿದ್ದಾಂತಗಳಿಲ್ಲ. ಇದ್ದರೂ ಅದಕ್ಕೇ ಬದ್ದರಾಗಿರಬೇಕೇಂಬ ಸಂಕಲ್ಪವಿಲ್ಲ. ಎಲ್ಲ ಪಕ್ಷಗಳ ಏಕೈಕ ಗುರಿ ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಮತ್ತು ಸಾಧ್ಯವಾದಷ್ಟು ದೋಚಿಕೊಳ್ಳಬೇಕು. ಇಲ್ಲದಿದ್ದರೆ ಮೊದಲಿನಿಂದಲೂ ಬುಸುಬುಸುಗುಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೈ ಜೋಡಿಸುತ್ತಿದ್ದವಾ? ಕೋಮುವಾದಿಗಳು, ಮನುವಾದಿಗಳು ಎಂದು ದೂರುತ್ತಿದ್ದ ಬಿಜೆಪಿಯ ಹಿಂದೆ ಜೆಡಿಎಸ್ ಬೀಳುತ್ತಿತ್ತಾ? ಅಧಿಕಾರ ಚಪಲದಿಂದ ಜೆಡಿಎಸ್‌ನ ಊಸರವಳ್ಳಿತನ ಗೊತ್ತಿದ್ದರೂ ಬಿಜೆಪಿ ಅದನ್ನು ನಂಬಬೇಕಿತ್ತ?

ಇನ್ನು ನಮ್ಮ ನಾಯಕರನ್ನೇ ತೆಗೆದುಕೊಳ್ಳಿ ಇದೀಗ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಪ್ರತಿಬಿಂಬಿತವಾಗುತ್ತಿರುವ ಖರ್ಗೆಯವರಿಗಾಗಲೀ, ಕುಮಾರಸ್ವಾಮಿಯವರಿಗಾಗಲೀ, ಯಡ್ಡ್ಯೂರಪ್ಪ ನವರಿಗಾಗಲೀ ಇರುವ ಅರ್ಹತೆ ಎಂತಹದು. ತನಗಿರುವ ನಿಜವಾದ ಅರ್ಹತೆ ಇಂತಹದು, ನಾನೇಕೆ ಮುಖ್ಯಮಂತ್ರಿಯಾಗಲೂ ಅರ್ಹ ಎಂದು ಯಾರೊಬ್ಬರೂ ಹೇಳುತ್ತಿಲ್ಲ. ಖರ್ಗೆಗೆ ಕೆಳವರ್ಗದವರೆನ್ನುವ ಅರ್ಹತೆ(?), ಊರೂರು ಅಲೆದು 'ಶ್ರೀಮಂತರ ಮನೆ ನೋಟ ಚಂದ, ಬಡವರ ಮನೆ ಊಟ ಚಂದ' ಎನ್ನೋ ಮಾತಿದೆಯಲ್ಲ. ಅದರಂತೆ ಹೋದಲೆಲ್ಲಾ ಮುದ್ದೆ ಕೋಳಿಸಾರು ತಿಂದು ಬಂದ ಕುಮಾರಸ್ವಾಮಿಯವರಿಗೆ ಮಣ್ಣಿನ ಮಗ(ನಾನು ಗೌಡ, ನೀನು ಗೌಡ ಆದ್ದರಿಂದ ಓಟು ಹಾಕು) ಎಂಬ ಅರ್ಹತೆ(?). ಸಿಟ್ಟು ಮುಖದ ಯಡ್ಡ್ಯೂರಪ್ಪನವರಿಗೆ ಮೋಸ ಹೋದವರೆಂಬ ಸಿಂಪತಿಯಿಂದ ಬಂದ ಅರ್ಹತೆ(?).

ನಮ್ಮ ನಾಯಕರನ್ನು ಆರಿಸಿ ಕಳುಹಿಸುವ ಚನಾವಣಾ ಪ್ರಕ್ರಿಯೆ ಅಕ್ಷರಶ: ರಣರಂಗವಾಗಿ ಮಾರ್ಪಟ್ಟಿದೆ. ತಮ್ಮದು ಜಾತ್ಯಾತೀತ ಪಕ್ಷವೆಂದು ಬೊಗಳೆ ಬಿಡುವ ನಾಯಕರೂ ಪಕ್ಷದ ಟಿಕೇಟ್ ಅನ್ನು ಜಾತಿಯ ಆಧಾರದ ಮೇಲೆ ಹಂಚಲು ಹೊರಟಿದ್ದಾರೆ. ಜಾತಿ ಎಂಬುದು ಸಮಾಜದ ಕಳಂಕ ಎನ್ನುವ ನಮ್ಮ ನಾಯಕರುಗಳೇ ಲಿಂಗಾಯಿತರಿಗೆ ಇಷ್ಟು, ಕುರುಬರಿಗೆ ಇಷ್ಟು, ಒಕ್ಕಲಿಗರಿಗೆ ಇಷ್ಟು, ದಲಿತರಿಗೆ, ಮುಸ್ಲಿಂರಿಗೆ ಇಷ್ಟು ಅಂತೆಲ್ಲಾ ಟಿಕೇಟ್ ಕಾಯ್ದಿರಿಸಿದ್ದಾರೆ. ಕೇವಲ ಜಾತಿಯಿಂದ ನಾಯಕನಾಗಲು ಸಾಧ್ಯವಾ?

ಅದೆಲ್ಲಾ ಏನೇ ಇರಲಿ... ಈಗ ಇವನೆಲ್ಲಾ ತೊಳೆದು ಶುದ್ದಗೊಳಿಸುವ ಕಾಲ ಬಂದಿದೆ. ನಾವೀಗ ಚುನಾವಣೆಯ ಎದುರು ನಿಂತಿದ್ದೇವೆ. ನಮ್ಮ ನಾಯಕನನ್ನು ಆರಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more