ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಸ್ವಾರಸ್ಯ : ಇಂಥವರೂ ಇದ್ದಾರೆ ಅಂಥವರೂ ಇದ್ದಾರೆ

By Staff
|
Google Oneindia Kannada News

BJP candidate M.P. Renukacharyaನರ್ಸ್ ಜಯಲಕ್ಷ್ಮಿ ಹಗರಣ ಗೊತ್ತಿರಬೇಕಲ್ಲ? ಆಕೆಯ ಜೊತೆ ಎಲ್ಲಾ ಭಂಗಿಗಳಲ್ಲಿ ನಿಂತು ಫೋಟೋಗಳನ್ನು ತೆಗೆಸಿಕೊಂಡು ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿದ್ದ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅಂದು ಪತ್ರಿಕೆಗಳಲ್ಲೆಲ್ಲಾ ಪ್ರಕಟವಾದ ಸೆನ್ಸಾರಾದ ಫೋಟೋಗಳಲ್ಲಿ ಜಯಲಕ್ಷ್ಮಿ ಮೈಮೇಲೆ ಸೆರಗು ನಿಂತಿರಲಿಲ್ಲ. ಮಾಡಿದ ಪಾಪ ಕಳೆದುಕೊಳ್ಳಲೋ ಎಂಬಂತೆ ಚುನಾವಣಾ ನೀತಿ ಸಂಹಿತೆಯನ್ನು ಧಿಕ್ಕರಿಸಿ ದಾವಣೆಗೆರೆ ಜಿಲ್ಲೆಯ ಕೂಲಂಬಿಯಲ್ಲಿ ಮಹಿಳಾಮಣಿಗಳಿಗೆ ಸೀರೆ ಹಂಚಲು ಸಿದ್ಧತೆ ನಡೆಸಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ರೇಣುಕಾಚಾರ್ಯ. ಎಲ್ಲಾ ಸೀರೆಗಳ ಮೊತ್ತ ಅನಾಮತ್ತು 20 ಲಕ್ಷ ರು.! ಆದರೆ ಚುನಾವಣಾ ಆಯೋಗ ಪ್ರತಿ ಅಭ್ಯರ್ಥಿಗೆ ನಿಗದಿಪಡಿಸಿರುವ ಚುನಾವಣಾ ವೆಚ್ಚ ಕೇವಲ 10 ಲಕ್ಷ ರು. ಮಾತ್ರ!

***

Suvarna Karnatak leader Mahima Patelಚುನಾವಣೆ ನಿಮಿತ್ತ ಸುರಪಾನಿ ಮತದಾರರನ್ನು ಓಲೈಸಲು ರಾಜ್ಯದ ಮೂಲೆಮೂಲೆಗಳಲ್ಲಿ ಅಕ್ರಮ ಸಾರಾಯಿ ಸರಬರಾಜಾಗುತ್ತಿದೆ. ನೆರೆ ರಾಜ್ಯಗಳಿಂದಲೂ ಟನ್ನುಗಟ್ಟಲೆ ಲಾರಿಗಳಲ್ಲಿ ಮದ್ಯ ಹರಿದುಬರುತ್ತದೆ. ಆದರೆ, ಇಲ್ಲಿಯವರೆಗೆ ಮತದಾರರಿಗೆ ಹಣ ನೀಡುವುದಿಲ್ಲ, ಸಾರಾಯಿ 'ಅಭಿಷೇಕ' ಮಾಡಿಸುವುದಿಲ್ಲ, ಸೀರೆ ವಿತರಿಸುವುದಿಲ್ಲ ಎಂದು ಯಾವ ರಾಜಕಾರಣಿಯೂ ಹೇಳಿಲ್ಲ, ಒಬ್ಬರನ್ನು ಬಿಟ್ಟು. ಜೆಡಿಎಸ್‌ನಿಂದ ಸಿಡಿದೆದ್ದು 'ಸುವರ್ಣ ಕರ್ನಾಟಕ' ಪಕ್ಷ ಕಟ್ಟಿರುವ ಮಹಿಮಾ ಪಟೇಲ್ ಮಾತ್ರ ಮತಕ್ಕಾಗಿ ಜನರನ್ನು ಕುಡುಕರನ್ನಾಗಿ ಮಾಡುವುದಿಲ್ಲ ಎಂದು ಡಾಣಾಡಂಗುರ ಸಾರಿದ್ದಾರೆ. ರಾಜ್ಯದ ಕುಡುಕರಿಗೆ ತಾವೇ ಒಂದು ಉದಾಹರಣೆಯಂತಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲರ ಮಗ ಮಹಿಮಾ. ಆದರೆ, ರಾಜಕಾರಣಕ್ಕಿಳಿದವರಲ್ಲಿ ಮಹಿಮಾ ಅಂಥವರ ಸಂಖ್ಯೆ ಕಡಿಮೆಯಿದೆ ಎಂಬುದೇ ವಿಷಾದದ ಸಂಗತಿ.

***

Shakuntalaಚುನಾವಣೆ ಘೋಷಣೆ ಮುನ್ನ ಗೆದ್ದೇ ಗೆಲ್ಲುವ ಉತ್ಸಾಹದಿಂದ 'ಶೋಭಾಯಮಾನ'ವಾಗಿದ್ದ ಭಾರತೀಯ ಜನತಾ ಪಕ್ಷ ತನ್ನ ತಲೆಯ ಮೇಲೆ ಅನಾಹುತದ ಚಪ್ಪಡಿಕಲ್ಲು ತಾನೇ ಎಳೆದುಕೊಳ್ಳುತ್ತಿರುವಂತಿದೆ. 'ಪಟ್ಟದರಸಿ'ಯಾಗುವ ಉಮೇದಿನಿಂದ ಯಶವಂತಪುರದಿಂದ ಟಿಕೀಟು ಗಿಟ್ಟಿಸಿರುವ ಯಡಿಯೂರಪ್ಪನವರ 'ಆತ್ಮೀಯ'ವಲಯದ ಶೋಭಾ ಕರಂದ್ಲಾಜೆ ಅವರಿಗೆ ಮಿನಿಸ್ಟ್ರುಗಿರಿ ದಕ್ಕಿಸಲೆಂದೇ ಪುತ್ತೂರಿನ ಶಕುಂತಲಾರನ್ನು ಮೂಲೆಗಟ್ಟಲಾಗಿದೆ ಎನ್ನುವುದು ಜಗಜ್ಜಾಹೀರಾತಾಗಿದೆ. ಆದರೆ, ಈ ಶಕುಂತಲೆ ಪುರಾಣಕಾಲದ ಶಕುಂತಲೆಯಲ್ಲ. ಬಿಳಿ ಮೀಸೆಗಳ ಹುನ್ನಾರ ಅರಿಯುತ್ತಲೇ ಬಂಡಾಯದ ಪತಾಕೆ ಹಾರಿಸಿದ್ದಾರೆ. ಪಕ್ಷೇತರವಾಗಿ ಚುನಾವಣೆಗೆ ನಿಲ್ಲುವುದಾಗಿ ಸೆಡ್ಡುಹೊಡೆದಿದ್ದಾರೆ. ರಾಜಕೀಯ ಅಂದ ಮೇಲೆ ಇದೆಲ್ಲಾ ಇದ್ದಿದ್ದೇ ಅಲ್ವಾ? ಈಗ ನೀವೇ ಊಹಿಸಿ ಬಿಜೆಪಿ ಶೋಭಿಸುತ್ತಿದೆಯೋ ಅಥವ ಅದಕ್ಕೆ ಅಪಶಕುನ ವಕ್ಕರಿಸಿದೆಯೋ?

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X