ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ: ಹಣ ಬಲ, ತೋಳ್ಬಲ ಮಧ್ಯದಲ್ಲಿ ತಾರಾಬಲ

By Staff
|
Google Oneindia Kannada News

Ambareesh to contest from own town?ಬೆಂಗಳೂರು, ಏ.13: ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳು ಸಾಕಷ್ಟು ಸಿನೆಮಾ ತಾರೆಗಳನ್ನು ಕಣಕ್ಕೆ ಇಳಿಸುವ ಸಿದ್ಧತೆಯಲ್ಲಿವೆ. ಈಗಾಗಲೇ ಬಿಜೆಪಿ ಪ್ರಕಟಿಸಿರುವ ಪ್ರಥಮ ಪಟ್ಟಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಇಬ್ಬರು ಸ್ಥಾನ ಪಡೆದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಒಟ್ಟು 15 ವಿಧಾನಸಭೆ ಕ್ಷೇತ್ರಗಳಲ್ಲಿ ತಾರಾ ಸಮರ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಬಿಜೆಪಿ ಪ್ರಕಟಿಸಿರುವ ಪ್ರಥಮ ಪಟ್ಟಿಯಲ್ಲಿ ನಿರ್ದೇಶಕ ಸಿ.ಕೆ.ಮಹೇಂದರ್(ಕೊಳ್ಳೇಗಾಲ) ಮತ್ತು ನಟ ಸಾಯಿಕುಮಾರ್(ಬಾಗೇಪಲ್ಲಿ) ಸ್ಥಾನ ಪಡೆದಿದ್ದಾರೆ. ಹಿರಿ ಮತ್ತು ಕಿರುತೆರೆಯ ಮತ್ತಷ್ಟು ತಾರೆಗಳನ್ನು ಬಿಜೆಪಿ ಕಣಕ್ಕಿಳಿಸಲು ಕಸರತ್ತು ನಡೆಸುತ್ತಿದೆ.

ವಿಧಾನಪರಿಷತ್ ಸದಸ್ಯರಾದ ಮುಖ್ಯಮಂತ್ರಿ ಚಂದ್ರು ಮತ್ತು ಶ್ರೀನಾಥ್ ಅವರ ಪ್ರಕಾರ ಬಿಜೆಪಿ ಮತ್ತಷ್ಟು ಕನ್ನಡ ಸಿನಿಮಾ ತಾರೆಗಳನ್ನು ಚುನಾವಣೆ ಕಣಕ್ಕೆ ಇಳಿಸಲು ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಕಲಾವಿದರನ್ನು ಕಣಕ್ಕೆ ಇಳಿಸಲಿದೆಯೇ ಅಥವಾ ಅವರನ್ನು ಬರೀ ಪ್ರಚಾರಕ್ಕಾಗಿ ಬಳಸಿಕೊಳ್ಳಲಿದೆಯೇ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಿಲ್ಲ.

ಮಂಡ್ಯ ಸಂಸದ ಅಂಬರೀಶ್, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಮಾಜಿ ಶಾಸಕ ಹಾಗೂ ಹಾಲಿ ನಟ ಸಿ.ಪಿ.ಯೋಗೇಶ್ವರ್ ಮತ್ತು ನಟ ಜಗ್ಗೇಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ತಾರಾಬಲ ತರಲಿದ್ದಾರೆ. ಮಂಡ್ಯ ವಿಧಾನಸಭೆಯಿಂದ ಅಂಬರೀಶ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಉಮಾಶ್ರೀ, ಜಗ್ಗೇಶ್, ಯೋಗೇಶ್ವರ್ ಅವರನ್ನು ಕ್ರಮವಾಗಿ ಬೆಂಗಳೂರು ದಕ್ಷಿಣ, ತುರುವೇಕೆರೆ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಂದ ಕಣಕ್ಕಿಳಿಸುವ ಯೋಚನೆಯಲ್ಲಿದೆ ಕಾಂಗ್ರೆಸ್. ಪ್ರಸ್ತುತ ಜಗ್ಗೇಶ್ ಅವರ ತಂದೆ ಮಂಡಲ್ ಪಂಚಾಯತಿ ಅಧ್ಯಕ್ಷ ಹಾಗೂ ಅವರ ತಾಯಿ ತುಮಕೂರು ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದಾರೆ. ಈ ರಾಜಕೀಯ ಹಿನ್ನಲೆ ಜಗ್ಗೇಶ್‌ಗೆ ವರವಾಗಲಿದೆ.

2004ರ ವಿಧಾನಸಭೆ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ಚಿತ್ರತಾರೆಯರು ಕಡಿಮೆ ಸಂಖ್ಯೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳಲ್ಲಿ ನಿರ್ಮಾಪಕರ ಸಂಖ್ಯೆ ಹೆಚ್ಚಾಗಿದೆ.

ರಿಯಲ್ ಎಸ್ಟೇಟ್ ಹಿನ್ನಲೆಯುಳ್ಳ ನಿರ್ಮಾಪಕರು ಪಕ್ಷದ ಟಿಕೆಟ್ ಪಡೆಯಲು ಆಸಕ್ತಿ ತೋರುತ್ತಿದ್ದಾರೆ. ಹಣಬಲ ಹಾಗೂ ಚಿತ್ರೋದ್ಯಮದ ಆಕರ್ಷಣೆಯನ್ನು ನೋಡಿ ನಾವು ಟಿಕೆಟ್ ಕೊಡುತ್ತಿಲ್ಲ. ಅವರ ವೈಯಕ್ತಿಕ ಹಿನ್ನಲೆ ಮತ್ತು ಸಾರ್ವಜನಿಕ ಜೀವನದ ದಾಖಲೆಗಳನ್ನು ಪರಿಶೀಲಿಸಿ ಟಿಕೆಟ್ ಕೊಡಲಿದ್ದೇವೆ ಎಂದು ಜೆಡಿ(ಎಸ್)ನ ವಕ್ತಾರ ಹಾಗೂ ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ.ದತ್ತ ತಿಳಿಸಿದ್ದಾರೆ.

2004ರ ವಿಧಾನಸಭೆ ಚುನಾವಣೆಗಳಲ್ಲಿ ಸಿನೆಮಾ ತಾರೆಗಳನ್ನು ಕಣಕ್ಕಿಳಿಸಲು ಪಕ್ಷಗಳು ಬಹಳಷ್ಟು ಕಸರತ್ತು ಮಾಡಿದ್ದವು. ಆದರೆ ಚಿತ್ರರಂಗದ ಆಕರ್ಷಣೆ ಮತದಾರರನ್ನು ಸೆಳೆಯುವಲ್ಲಿ ವಿಫಲವಾಯಿತು ಎಂಬ ಸತ್ಯ ರಾಜಕೀಯ ಪಕ್ಷಗಳಿಗೆ ಗೊತ್ತಾಗಿದೆ.

ಇನ್ನು ಚುನಾವಣೆ ಪ್ರಚಾರಕ್ಕಾಗಿ ಸಿನೆಮಾ ತಾರೆಯರನ್ನು ಬಳಸಿಕೊಂಡರೆ ಅವರು ಅಷ್ಟಾಗಿ ಆಸಕ್ತಿ ತೋರಿಸುವುದಿಲ್ಲ. ಅನಾವಶ್ಯಕವಾಗಿ ನಿಧಿಯನ್ನು ಪೋಲು ಮಾಡಿದಂತಾಗುತ್ತದೆ ಎಂಬುದು ರಾಜಕೀಯ ಪಕ್ಷಗಳ ಕಾರ್ಯಕರ್ತರ ದೂರು ಹಾಗೂ ಹಿತೋಪದೇಶ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X