ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಏರಿಗೆಳೆದರೆ, ಅನಂತಕುಮಾರ್ ನೀರಿಗೆ

By Staff
|
Google Oneindia Kannada News

Ananthkumar and Yediyurappaಬೆಂಗಳೂರು, ಏ.11: ರಾಜ್ಯ ವಿಧಾನಸಭೆಗೆ ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ ಹಂತದಲ್ಲಿಯೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತ ಸ್ಫೋಟಿಸಿದೆ.

ಬೆಂಗಳೂರಿನಲ್ಲಿ ಸಿದ್ಧವಾಗಿದ್ದ 170 ಅಭ್ಯರ್ಥಿಗಳ ಪಟ್ಟಿಗೆ ರಾಜ್ಯಾಧ್ಯಕ್ಷ ಸದಾನಂದ ಗೌಡ, ಯಡಿಯೂರಪ್ಪ ಮತ್ತು ಅನಂತಕುಮಾರ್ ಮೂವರೂ ಸಹಿ ಹಾಕಿದ್ದರು. ಆದರೆ, ದೆಹಲಿಯಲ್ಲಿ ಗುರುವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕೇವಲ 136 ಅಭ್ಯರ್ಥಿಗಳ ಹೆಸರಿದ್ದು, ಅದಕ್ಕೆ ಅನಂತಕುಮಾರ್ ಅವರ ಸಹಿ ಮಾತ್ರವಿರುವುದು ಯಡಿಯೂರಪ್ಪ ಅವರ ಕಣ್ಣನ್ನು ಕೆಂಪಗಾಗಿಸಿದೆ.

ಮೊದಲ ಹಂತದ ಅಂತಿಮ ಪಟ್ಟಿಯಲ್ಲಿ ಯಡಿಯೂರಪ್ಪ ಅವರು ಸೂಚಿಸಿದ ಕೆಲ ಅಭ್ಯರ್ಥಿಗಳ ಹೆಸರನ್ನು ಕಿತ್ತುಹಾಕಲಾಗಿದೆ ಮತ್ತು ಅನಂತಕುಮಾರ್ ತಮ್ಮ ಶಿಫಾರಸಿನ ಅಭ್ಯರ್ಥಿಗೇ ಟಿಕೆಟ್ ನೀಡಬೇಕೆಂದು ಪಟ್ಟುಹಿಡಿದಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಹಿಂದಿನ ಸರ್ಕಾರದಲ್ಲಿ ಅಧಿಕಾರ ಗ್ರಹಣ ಮಾಡುವ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದ ಈ ಇಬ್ಬರು ನಾಯಕರು ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಮತ್ತೆ ಕಿತ್ತಾಟಕ್ಕಿಳಿದಿದ್ದಾರೆ.

ಸಾಕಷ್ಟು ಕಸರತ್ತಿನ ನಂತರ ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಇತರ ಪಕ್ಷಗಳನ್ನು ಹಿಂದಿಕ್ಕಿ ಬಿಜೆಪಿ 136 ಅಭ್ಯರ್ಥಿಗಳ ಗುರುವಾರ ಬಿಡುಗಡೆ ಮಾಡಿದೆ. ಪ್ರಕಟವಾಗಿರುವ ಪಟ್ಟಿಯಲ್ಲಿ ಅನಂತಕುಮಾರ್ ಹಸ್ತಕ್ಷೇಪ ಮಾಡಿರುವ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಈ ಸಂಬಂಧ ಬಿಜೆಪಿ ಮುಖಂಡರ ನಡುವೆ ಬಿಸಿಬಿಸಿ ವಾಗ್ವಾದ ನಡೆದಿದೆ. ಬೆಂಗಳೂರು ನಗರದ ಒಟ್ಟು 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ ಅಂತಿಮವಾಗಿ ಕೇವಲ 18 ಅಭ್ಯರ್ಥಿಗಳ ಹೆಸರುಗಳು ಮಾತ್ರ ಪಟ್ಟಿಯಾಗಿವೆ.

ಸಿದ್ಧವಾಗಿದ್ದ ಕರಡು ಪಟ್ಟಿ ದೆಹಲಿಗೆ ಹೋದ ನಂತರ ಅಲ್ಲಿ ಕೆಲವು ಮಾರ್ಪಾಡುಗಳು ಆಗಿದ್ದು ಬಿಜೆಪಿ ನಿಷ್ಠಾವಂತರ ಬದಲಿಗೆ ಹೊರಗಿನಿಂದ ಬಂದವರಿಗೆ ಮಣೆ ಹಾಕಲಾಗಿದೆ. ಈ ಸಂಬಂಧ ಬಿಜೆಪಿ ಮುಂಖಂಡರಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಬಿಜೆಪಿ ರಾಷ್ಟ್ರೀಯ ಚುನಾವಣೆ ಸಮಿತಿ ಸಭೆಯಲ್ಲಿ ಮೊದಲ ಪಟ್ಟಿಗೆ ಅನುಮೋದನೆ ಪಡೆಯುವಾಗ ಯಡ್ಡಿ ಹಾಗೂ ಅನಂತ್ ನಡುವೆ ತೀವ್ರ ಚರ್ಚೆ ನಡೆಯಿತು ಎನ್ನಲಾಗಿದೆ.

ಪಟ್ಟಿಯಲ್ಲಿ ಹಾಲಿ ಬಳ್ಳಾರಿ ಸಂಸದ ಕರುಣಾಕರ ರೆಡ್ಡಿ, ಬಿಜಾಪುರ ಸಂಸದ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಸಂಜಯ್ ಖೇಣಿ ಸೇರಿದಂತೆ ಹಲವು ಹೊಸ ಹೆಸರುಗಳು ಸೇರ್ಪಡೆಯಾಗಿವೆ. ಕಳೆದ ವಿಧಾನಸಭೆಯ 44 ಸದಸ್ಯರು ಟಿಕೆಟ್ ಪಡೆದರೆ, 9 ಮಾಜಿ ಶಾಸಕರು ಟಿಕೆಟ್ ವಂಚಿತರಾಗಿದ್ದಾರೆ. ಬೆಂಕಿ ಮಹದೇವು, ಜಿ.ಟಿ.ದೇವೇಗೌಡ, ಬಸವರಾಜ್ ಬೊಮ್ಮಾಯಿ, ರೇವಣ ಸಿದ್ಧಯ್ಯ ಮೊದಲಾದ ವಲಸಿಗರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯ ಜಾತಿವಾರು ಲೆಕ್ಕಾಚಾರ ಹೀಗಿದೆ; 51 ಲಿಂಗಾಯತರು, 19 ಒಕ್ಕಲಿಗರು, 3 ಮಹಿಳೆಯರು, ಪರಿಶಿಷ್ಟ ಜಾತಿ 18, ಪರಿಶಿಷ್ಟ ಪಂಗಡ 6 ಹಾಗೂ ಬಿಸಿ 24 ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸಿದೆ.

ಬಿಜೆಪಿ ಟಿಕೆಟ್ ವಂಚಿತರಾಗಿರುವ ಶಕುಂತಲಾಶೆಟ್ಟಿ, ಟಿಕೆಟ್ ಸಿಗದಿದ್ದರೂ ಸದಾನಂದ ಗೌಡರ ಪುತ್ತೂರು ವಿಧಾನಸಭೆ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಶಕುಂತಲಾ ಶೆಟ್ಟಿ ಹೇಳಿ ಭಿನ್ನಮತದ ಕಹಳೆಯೂದಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X